Advertisement

Soldier’s Story: ಸೈನಿಕರನ್ನು ಹುರಿದುಂಬಿಸುತ್ತಲೇ ಶತ್ರುಗಳ ಗುಂಡೇಟಿಗೆ ಬಲಿ

10:29 AM Aug 13, 2023 | Team Udayavani |

“ಮೇರಿ ಮಾಟಿ ಮೇರಾ ದೇಶ್‌’ (ನನ್ನ ಮಣ್ಣು ನನ್ನ ದೇಶ) ಅಭಿಯಾನ ಆರಂಭಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 7, ಉಡುಪಿ ಜಿಲ್ಲೆಯಲ್ಲಿ ಓರ್ವ ಸೇರಿ ಕರಾವಳಿಯ 8 ಮಂದಿ ಹುತಾತ್ಮ ಯೋಧರ ವಿಶೇಷ ಸ್ಮಾರಕ ಅವರ ಊರಿನ ಗ್ರಾಮಗಳಲ್ಲಿ ಸ್ಥಾಪನೆಗೊಳ್ಳಲಿದೆ. ಇಂದಿನ ಸರಣಿಯಲ್ಲಿ ಕಲ್ಯಾಣಪುರದ ಯೋಧ ಮೇಜರ್‌ ಕೆ.ಕೆ. ರಾವ್‌ ಅವರ ವೀರಗಾಥೆ.

Advertisement

ಉಡುಪಿ: ಬಾಲ್ಯದಲ್ಲಿ ಬಡತನವಿದ್ದರೂ ಸಾಹಸ ಪ್ರವೃತ್ತಿ ಹೊಂದಿ ಸೇನೆಗೆ ಸೇರಿ ಸೆದೆಬಡಿದು ಹೋರಾಡುವಾಗ ಶತ್ರುಗಳ ಮೆಷಿನ್‌ಗನ್‌ ಗುಂಡೇಟಿಗೆ ವೀರಮರಣವನ್ನಪ್ಪಿದ ಮೇಜರ್‌ ಕಲ್ಯಾಣಪುರ ಕೃಷ್ಣೋಜಿರಾವ್‌ (ಕೆ.ಕೆ. ರಾವ್‌) ಅವರ ಕಥೆಯಿದು.

ಇವರು ಮರಾಠ ಕುಟುಂಬಕ್ಕೆ ಸೇರಿದವರು. ಅಪ್ಪೋಜರಾವ್‌ ಮೋರೆ ಮತ್ತು ಸುಂದರಿಬಾಯಿ ಮೋರೆಯವರ ಪುತ್ರ. 1939ರ ಸೆ. 6ರಂದು ಜನಿಸಿದರು. ಮೂವರು ಮಂದಿ ಸಹೋದರಿಯರು, ಓರ್ವ ಸಹೋದರ ಇದ್ದಾರೆ.

ಬಾಲ್ಯದಿಂದಲೇ ಸಾಹಸ ಪ್ರವೃತ್ತಿಯನ್ನು ರೂಢಿಸಿಕೊಂಡಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಅಭಿರುಚಿ ಅಧಿಕವಾಗಿತ್ತು. ಕಲ್ಯಾಣಪುರದಲ್ಲಿ ಎಸೆಸೆಲ್ಸಿ ವರೆಗೆ ವಿದ್ಯಾಭ್ಯಾಸ ನಡೆಯಿತು. ಕಾಲೇಜು ಶಿಕ್ಷಣ ಪಡೆಯಲು ಅನುಕೂಲವಿಲ್ಲವಾದ ಕಾರಣ ವಿದ್ಯಾಭ್ಯಾಸ ಅಲ್ಲಿಗೆ ನಿಂತುಹೋಯಿತು. ಅನಂತರ ಹಲವಾರು ಖಾಸಗಿ ಕಂಪೆನಿಗಳಲ್ಲಿ ನೌಕರಿ ಮಾಡಿಕೊಂಡಿದ್ದರು.

1956ರಲ್ಲಿ ಭಾರತೀಯ ಸೇನೆ ಸೇರಿದರು. ಪುಣೆಯ ಆರ್ಮಿ ಕೆಡೆಟ್‌ ಕಾಲೇಜಿನಲ್ಲಿ ಎರಡು ವರ್ಷಗಳ ಕಾಲ ತರಬೇತಿ ಪಡೆದು ಡೆಹ್ರಾಡೂನ್‌ನ ಸೈನ್ಯಾಧಿಕಾರಿಗಳ ಕಾಲೇಜಿನಲ್ಲಿ ಶಿಕ್ಷಣ ಪಡೆಯಲು ಅರ್ಹತೆ ಗಳಿಸಿದರು. 1960ರಲ್ಲಿ ಪುಣೆಗೆ ಆಗಮಿಸಿದರು. ಜಬಲ್‌ ಪುರದಲ್ಲಿ ಸೈನಿಕ ಸಮಿತಿಯವರಿಂದ 1961ರಲ್ಲಿ ಆಯ್ಕೆಯಾಗಿ ಆರ್ಮಿ ಕೆಡೆಟ್‌ ಕಾಲೇಜಿನಲ್ಲಿ ಎರಡು ವರ್ಷಗಳ ಕಾಲ ಹೆಚ್ಚಿನ ಶಿಕ್ಷಣ ಪಡೆದರು. ಮುಂದೆ 1962ರಲ್ಲಿ ಅಧಿಕಾರಿ ಶ್ರೇಣಿ ಸೇರಿ ಡೆಹ್ರಾಡೂನ್‌ ನಲ್ಲಿ ಆರ್ಮಿ ಆಫೀಸರ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. 1962ರಲ್ಲಿ ಚೀನಾದೊಂದಿಗೆ ನಡೆದ ಯುದ್ಧದಲ್ಲಿ ಇವರು ಭಾಗಿಯಾಗಿದ್ದರು.

Advertisement

ಮೇಜರ್‌ ಪದವಿಗೇರಿದ ಬಗೆ

1963ರಲ್ಲಿ ಸೆಕೆಂಡ್‌ ಲೆಫ್ಟಿನೆಂಟ್‌ ಆಗಿ ನೇಮಕಗೊಂಡರು. ಕೆಲವೇ ವರ್ಷಗಳಲ್ಲಿ ಇವರು ಕಮಿಷನರ್‌ ಆಫೀಸರ್‌ ಆದರು. 1964ರಲ್ಲಿ ಲೆಫ್ಟಿನೆಂಟ್‌ ಆಗಿ ಭಡ್ತಿ ದೊರೆಯಿತು. 1965ರಲ್ಲಿ ಕ್ಯಾಪ್ಟನ್‌ ಪದವಿಗೇರಿ, ಬಹುಶೀಘ್ರದಲ್ಲಿಯೇ ಮೇಜರ್‌ ಪದವಿಗೇರಿದರು. 1968ರಲ್ಲಿ ಕುಚ್‌ಬಿಹಾರ್‌ ಗೆ ಹೋದರು. 1969ರಲ್ಲಿ ನಾಗಾಲ್ಯಾಂಡ್‌ಗೆ ತೆರಳಿ ಅಲ್ಲಿನ ಜನತೆಯ ವಿಶ್ವಾಸ ಗಳಿಸಿದರು. ಅಲ್ಲಿನ ಭಾಷೆಯನ್ನು ಕಲಿತರು. 2 ವರ್ಷಗಳ ಕಾಲ ಅಲ್ಲಿದ್ದು, ಅಲ್ಲಿನ ಉಪಟಳವನ್ನು ಸಂಪೂರ್ಣವಾಗಿ ನಿಲ್ಲಿಸಿದರು.

ವೀರ ಮರಣ

1971ರ ಅಕ್ಟೋಬರ್‌ನಲ್ಲಿ ಯುದ್ಧದಲ್ಲಿ ಪಾಲ್ಗೊಳ್ಳಲು ಗಡಿ ಪ್ರದೇಶಕ್ಕೆ ಹೊರಟರು. ನವೆಂಬರ್‌ ವರೆಗೂ ಪೂರ್ವ ವಲಯದ ಗಡಿ ಪ್ರದೇಶಗಳಲ್ಲಿಯೇ ಸಮರಾಭ್ಯಾಸ ನಡೆಸುತ್ತಿದ್ದರು. ಬೋರಾಘಾಟ್‌ ಮೇರಾಪುರ ಮತ್ತು ನವೋಪಾರ ಪ್ರದೇಶಗಳಿಗೆ ಮುತ್ತಿಗೆ ಹಾಕಿದರು.

ಮೇಜರ್‌ ಕೆಕೆ ರಾವ್‌ ಅವರೇ ನಾಯಕತ್ವ ವಹಿಸಿ ಸೈನಿಕರನ್ನು ಹುರಿದುಂಬಿಸುತ್ತ ಹೋರಾಡುತ್ತಿದ್ದರು. ಸ್ವಲ್ಪವೂ ಧೈರ್ಯಗೆಡದೆ ದೇಶಾಭಿಮಾನದಿಂದ ಕಾರ್ಯಾಚರಣೆ ಸಾಗಿತ್ತು. ಶತ್ರುಗಳ ಪ್ರತಿಭಟನೆಯೂ ಸಾಕಷ್ಟಿತ್ತು. ಕಾಳಗ ಜೋರಾಯಿತು. ಅಲ್ಲಿ ರಕ್ಷಣೆ ಪಡೆಯಲು ಯಾವ ಸೌಕರ್ಯಗಳೂ ಇರಲಿಲ್ಲ. ಹೊಲ-ಗದ್ದೆಗಳಲ್ಲಿ ಅಡಗಿಕೊಳ್ಳುವುದು ಹೇಗೆ ಸಾಧ್ಯವಾದೀತು? ಶತ್ರುಗಳ ಗುಂಡಿನೇಟು ಅವ್ಯಾಹತವಾಗಿ ನಾಟಿತ್ತು. ಇಂತಹ ಸಂದಿಗ್ಧ ವೇಳೆಯಲ್ಲಿ ನವೆಂಬರ್‌ 24ರ ಮಧ್ಯರಾತ್ರಿ ಯುದ್ಧ ನಡೆಯುತ್ತಿದ್ದ ವೇಳೆ ಇವರು ಕೈಯಲ್ಲಿ ಗ್ರೆನೇಡ್‌ ಅನ್ನು ಬಾಂಗ್ಲಾದೇಶದ ಬಂಕರ್‌ಗೆ ಎಸೆದು ಸಂಪೂರ್ಣ ನಾಶಮಾಡಿದರು. ಆವಾಗಲೇ ಮೇಜರ್‌ ಕೆಕೆ ರಾವ್‌ ಅವರು ಮೆಷಿನ್‌ಗನ್‌ ಹೊಡೆತಕ್ಕೆ ಸಿಕ್ಕಿದರೂ ಶತ್ರುಗಳ ವಿರುದ್ಧ ಹೋರಾಡುವಂತೆ ಸೈನಿಕರನ್ನು ಹುರಿದುಂಬಿಸುತ್ತಲೇ ಅವರು ಗುಂಡೇಟಿನ ದಾಳಿಗೆ ಎದೆ ಸೀಳಿ ವೀರಮರಣವನ್ನಪ್ಪಿದರು.

ಇವರ ಸಂಸ್ಕಾರವು ಜಮುನಾ ನದಿ ತೀರದ ಹಿಲ್ಲಿ ಎಂಬಲ್ಲಿ ಮಿಲಿಟರಿ ಗೌರವಗಳೊಂದಿಗೆ ನಡೆದಿತ್ತು. ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಹುಟ್ಟಿದ ಕಾರಣಕ್ಕೆ ಕೃಷ್ಣ ಎಂಬ ಹೆಸರನ್ನು ಇಡಲಾಗಿತ್ತು. ಯುದ್ಧದಲ್ಲಿ ಶತ್ರುಗಳನ್ನು ಬೇಟೆಯಾಡುವಾಗಲೇ ಸಾವನ್ನಪ್ಪುವಂತಾಯಿತು.

1971ರಲ್ಲಿ ಮೇಘಾಲಯದಲ್ಲಿ ಸೈನಿಕ ಶಿಕ್ಷಕರಾಗಿ ಕೆಲಸ ಮಾಡಿದರು. 1971ರ ಮೇಯಲ್ಲಿ ತಂಗಿಯ ಮದುವೆಗಾಗಿ ಸ್ವಗ್ರಾಮಕ್ಕೆ ಬಂದಿದ್ದರು. ಅದುವೇ ಕೊನೆಯ ಭೇಟಿಯಾಗಿತ್ತು. ಸೇನಾ ಪದವಿ, ರಕ್ಷಾ ಪದವಿ, ಸಮರ ಸೇನಾ ಪದವಿ, ಜನರಲ್‌ ಸರ್ವಿಸ್‌ ಪದವಿ, 9 ವರ್ಷಗಳ ಕರ್ತವ್ಯ ಸೇವಾ ಪದವಿ ಇವರಿಗೆ ಲಭಿಸಿತ್ತು. – ಕೆ. ಗಣೇಶ್‌ ರಾವ್‌ ಮೋರೆ, ಸಹೋದರ

„ ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next