ಉಡುಪಿ: ಸರಕಾರದ ಕೋವಿಡ್ ಶಿಷ್ಟಾಚಾರದಂತೆ ಸರಳವಾಗಿ ಸೀಮಿತ ಭಕ್ತರ ಸಮ್ಮುಖ ಶ್ರೀಕೃಷ್ಣಮಠದಲ್ಲಿ ರವಿವಾರ ಅದಮಾರು ಮಠ ಪರ್ಯಾಯದ ಕೊನೆಯ ವಾರ್ಷಿಕ ಸಪ್ತೋತ್ಸವವು ಪರ್ಯಾಯ ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಪೀಠಸ್ಥ ಶ್ರೀಈಶಪ್ರಿಯತೀರ್ಥ ಶ್ರೀಪಾದರ ನೇತೃತ್ವದಲ್ಲಿ ಶುಭಾರಂಭಗೊಂಡಿತು.
ಈ ಬಾರಿ ಪರ್ಯಾಯ ಮಠದಿಂದ ವಾಡಿಕೆಯ ಉತ್ಸವವಲ್ಲದೆ, ಎಂಟು ಸೇವಾಕರ್ತರ ಉತ್ಸವಗಳಿವೆ. ಇವರಲ್ಲಿ ಮೂವರು ಕರ್ಫ್ಯೂ ಕಾರಣದಿಂದ ಬರಲಿಲ್ಲ. ಇವರ ಬದಲು ಮಠದ ವ್ಯವಸ್ಥಾಪಕರೇ ಸೇವೆಯನ್ನು ನಡೆಸುತ್ತಿದ್ದಾರೆ.
ರಥೋತ್ಸವಕ್ಕೆ ಮೊದಲು ತೆಪ್ಪೋತ್ಸವ ನಡೆಯಿತು.
ತೆಪ್ಪವನ್ನು ವಿಶ್ವಾರ್ಪಣಂ ಬ್ಯಾಕ್‌ಗ್ರೌಂಡ್‌ನಿಂದ ಅಲಂಕರಿಸಲಾಗಿತ್ತು. ಆ ಬಳಿಕ ಗರುಡ ರಥ ಮತ್ತು ಮಹಾಪೂಜೆ ರಥಗಳ ಉತ್ಸವ ನಡೆಯಿತು. ಗರುಡ ರಥದಲ್ಲಿ ಶ್ರೀಕೃಷ್ಣ – ಮುಖ್ಯಪ್ರಾಣ, ಇನ್ನೊಂದು ರಥದಲ್ಲಿ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನಗಳ ಉತ್ಸವ ಮೂರ್ತಿಯನ್ನು ಇರಿಸಿ ಪೂಜಿಸಲಾಯಿತು. ಎರಡೂ ರಥ ಗಳಗಾಲಿ ಶಿಥಿಲವಾಗಿದ್ದು ಗಾಲಿಯನ್ನು ಹೊಸತಾಗಿ ರಚಿಸಲಾಗಿದೆ.
ವರ್ಷದ 6 ತಿಂಗಳೂ ರಥೋತ್ಸವ ನಡೆಯುವುದರಿಂದ ಗಾಲಿಗಳ ರಕ್ಷಣೆಗಾಗಿ ಸೋಲ್ ಅಳವಡಿಸಲಾಗಿದೆ. ದುರಸ್ತಿ ಗೊಳಿಸಿದ ರಥದಲ್ಲಿ ಮೊದಲ ಬಾರಿ ಉತ್ಸವ ನಡೆಯಿತು.