Advertisement

Udupi: ತಂಗುದಾಣದ ಎದುರು ವಾಹನ ಪಾರ್ಕಿಂಗ್‌ಗೆ ಕಡಿವಾಣ

04:16 PM Sep 23, 2024 | Team Udayavani |

ಉಡುಪಿ: ಮಣಿಪಾಲದ ಎಂಐಟಿ ಹಾಗೂ ಸಿಂಡಿಕೇಟ್‌ ಸರ್ಕಲ್‌ ಬಳಿ ಇರುವ ಬಸ್‌ ತಂಗುದಾಣದ ಎದುರು ಭಾಗದಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡುತ್ತಿರುವ ಬಗ್ಗೆ ಉದಯವಾಣಿಯ ಸುದಿನದಲ್ಲಿ ರವಿವಾರ ವರದಿ ಪ್ರಕಟಗೊಂಡಿದ್ದು, ಮಣಿಪಾಲ ಪೊಲೀಸರು ಬೆಳಗ್ಗೆಯೇ ಕಾರ್ಯಾಚರಣೆ ನಡೆಸಿ ಬ್ಯಾರಿಕೇಡ್‌ ಹಾಗೂ ಟೇಪ್‌ ಅಳವಡಿಕೆ ಮಾಡಿದ್ದಾರೆ.

Advertisement

ಮಣಿಪಾಲ ಠಾಣೆಯ ಠಾಣಾಧಿಕಾರಿ ದೇವರಾಜ್‌ ಟಿ.ವಿ. ನೇತೃತ್ವದಲ್ಲಿ ಎಸ್‌ಐ ರಾಘವೇಂದ್ರ ಹಾಗೂ ಸಿಬಂದಿ ಮೊದಲಿಗೆ ಎಂಐಟಿ ಬಸ್‌ ನಿಲ್ದಾಣಕ್ಕೆ ತೆರಳಿ ನಿಲುಗಡೆ ಮಾಡಿರುವ ವಾಹನ ಸವಾರರಿಗೆ ಎಚ್ಚರಿಕೆ ನೀಡಿದರು. ಅನಂತರ ಇಲ್ಲಿ ಕೋನ್‌ಗಳನ್ನು ಅಳವಡಿಸುವ ಜತೆಗೆ ದ್ವಿಚಕ್ರ ವಾಹನ ನಿಲುಗಡೆ ಮಾಡುತ್ತಿರುವ ಜಾಗಕ್ಕೆ ಟೇಪ್‌ ಅಳವಡಿಕೆ ಮಾಡಲಾಯಿತು. ಇದರಿಂದಾಗಿ ರವಿವಾರ ಬಸ್‌ಗಳು ತಂಗುದಾಣದ ಎದುರು ಭಾಗದಲ್ಲಿ ನಿಂತ ಕಾರಣ ಯಾವುದೇ ಸಂಚಾರ ದಟ್ಟಣೆೆ ಕಂಡುಬರಲಿಲ್ಲ.

ಇಲ್ಲಿಂದ ಸಿಂಡಿಕೇಟ್‌ ಸರ್ಕಲ್‌ ಬಳಿ ಇರುವ ತಂಗುದಾಣದತ್ತ ತೆರಳಿದ ಪೊಲೀಸರು ತಂಗುದಾಣದ ಎದುರುಭಾಗದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ತೆರವು ಮಾಡುವಂತೆ ಸೂಚನೆ ನೀಡಿದರು. ಸ್ಥಳೀಯಹೊಟೇಲ್‌ನ ಸೆಕ್ಯೂರಿಟಿ ಗಾರ್ಡ್‌ಗೂ ಈ ಭಾಗದಲ್ಲಿ ವಾಹನ ನಿಲುಗಡೆ ಮಾಡದಂತೆ ಸಂಬಂಧಪಟ್ಟವರಿಗೆ ತಿಳಿಸುವಂತೆ ಸೂಚಿಸಿದರು. ಇದರಿಂದಾಗಿ ರವಿವಾರ ಯಾವುದೇ ವಾಹನಗಳು ಇದರ ಎದುರು ಭಾಗದಲ್ಲಿ ನಿಲ್ಲಲಿಲ್ಲ. ಆದರೂ ಬಸ್‌ಗಳು ತಂಗುದಾಣದಲ್ಲಿ ನಿಲ್ಲದೆ ಎದುರು ಭಾಗದಲ್ಲಿರುವ ವೈನ್‌ಶಾಪ್‌ ಎದುರುಗಡೆಯೇ ನಿಲುಗಡೆ ಮಾಡುತ್ತಿರುವ ದೃಶ್ಯಾವಳಿಗಳು ಕಂಡುಬಂತು.

ನಿಯಮಾವಳಿ ಪಾಲಿಸಿದರಷ್ಟೇ ಸಂಚಾರ ದಟ್ಟಣೆೆ ನಿಯಂತ್ರಣ
ಸಿಂಡಿಕೇಟ್‌ ಸರ್ಕಲ್‌ ಬಳಿಯ ವೈನ್‌ ಶಾಪ್‌ ಎದುರು ಬಸ್‌ಗಳನ್ನು ನಿಲ್ಲಿಸುವ ಕಾರಣ ಜಿಲ್ಲಾಧಿಕಾರಿ ಮಾರ್ಗದಿಂದ ಉಡುಪಿಯತ್ತ ತೆರಳುವ ವಾಹನಗಳು ಹಾಗೂ ಅನಂತನಗರದತ್ತ ತೆರಳುವ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲುವಂತಾಗುತ್ತದೆ. ಈ ವೇಳೆ ಮಣಿಪಾಲದಿಂದ ಉಡುಪಿಯತ್ತ ತೆರಳುವ ವಾಹನಗಳನ್ನೂ ನಿಲ್ಲಿಸಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಈ ಬಗ್ಗೆಯೂ ಪೊಲೀಸರು ಕ್ರಮ ತೆಗೆದುಕೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಇದೇ ರೀತಿ ಮಣಿಪಾಲದ ಎಂಐಟಿ ಬಸ್‌ ತಂಗುದಾಣದ ಬಳಿಯೂ ಸಮಸ್ಯೆ ಉಂಟಾಗುತ್ತಿದ್ದು, ಪೊಲೀಸರ ಈ ಕ್ರಮದಿಂದ ಸ್ವಲ್ಪ ಮಟ್ಟಿಗೆ ದಟ್ಟಣೆ ಕಡಿಮೆಯಾಗಿದೆ. ಈ ಕಾರ್ಯಾಚರಣೆಗೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದು, ಇದನ್ನು ಮುಂದುವರಿಸುವಂತೆ ಸಲಹೆ ನೀಡಿದ್ದಾರೆ.

ಸ್ಥಳೀಯರಿಗೆ ಸೂಚನೆ
ಈಗಾಗಲೇ ಎಂಐಟಿ ಬಸ್‌ ತಂಗುದಾಣದ ಎದುರು ಕೋನ್‌ ಹಾಗೂ ಟೇಪ್‌ಗ್ಳನ್ನು ಅಳವಡಿಕೆ ಮಾಡಿದ್ದೇವೆ. ಇಲ್ಲಿ ಪೊಲೀಸ್‌ ಸಿಬಂದಿಯನ್ನೂ ನಿಯೋಜಿಸಲಾಗಿದೆ. ಈ ಘಟನೆಗಳು ಮರುಕಳಿಸಿದರೆ ಮಾಹಿತಿ ನೀಡುವಂತೆ ಸ್ಥಳೀಯರಿಗೆ ಸೂಚನೆಯನ್ನೂ ನೀಡಲಾಗಿದೆ. ಸುಗಮ ಸಂಚಾರಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಇಲಾಖೆ ಬದ್ಧವಾಗಿದ್ದು, ಇದಕ್ಕೆ ಬೇಕಿರುವ ಪೂರಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
-ದೇವರಾಜ್‌ ಟಿ.ವಿ., ಠಾಣಾಧಿಕಾರಿ, ಮಣಿಪಾಲ ಪೊಲೀಸ್‌ ಠಾಣೆೆ

Advertisement
Advertisement

Udayavani is now on Telegram. Click here to join our channel and stay updated with the latest news.

Next