Advertisement

ಸೋದೆ ಮಠದಿಂದ ಶೀರೂರು ಶ್ರೀಗೆ ನೋಟಿಸ್‌?

08:13 AM Apr 02, 2018 | |

ಉಡುಪಿ: ಶೀರೂರು ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ಅಷ್ಟಮಠಾಧೀಶರ ವಿರುದ್ಧವಾಗಿ ಮಾತನಾಡಿರುವ ವೀಡಿಯೋ ತುಣುಕು ಖಾಸಗಿ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿದ್ದ ಹಿನ್ನೆಲೆಯಲ್ಲಿ ಸೋದೆ ಮಠದಿಂದ ಶೀರೂರು ಶ್ರೀಗಳಿಗೆ ನೋಟಿಸ್‌ ಕಳುಹಿಸಲಾಗಿದೆ ಎನ್ನುವ ವಿಚಾರ ಬಹಿರಂಗಗೊಂಡಿದೆ. ಶೀರೂರು ಮಠದ ಸ್ವಾಮಿಗಳನ್ನು ಹೊರತುಪಡಿಸಿ ಉಳಿದೆಲ್ಲ ಮಠದ ಸ್ವಾಮಿಗಳ ಉಪಸ್ಥಿತಿಯಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಮಾ. 15ರಂದು ಶ್ರೀಕೃಷ್ಣಮಠದಲ್ಲಿ ಆಂತರಿಕ ಸಭೆ ನಡೆದಿತ್ತು. ಇಲ್ಲಿ ಕೆಲವು ನಿರ್ಣಯ ಕೈಗೊಳ್ಳಲಾಗಿತ್ತು.

Advertisement

ಸೋದೆ ಮಠದಿಂದಲೇ ಯಾಕೆ ನೋಟಿಸ್‌?
ಶೀರೂರು ಮಠಕ್ಕೆ ಸೋದೆ ಮಠವು ದ್ವಂದ್ವ ಮಠವಾಗಿರುವ ಕಾರಣ ಸೋದೆ ಮಠದಿಂದ ನೋಟಿಸ್‌ ನೀಡಲಾಗಿದೆ. ಧಾರ್ಮಿಕ ಚೌಕಟ್ಟು ಮೀರಿ ಸ್ವಾಮಿಗಳಿಗೆ ಮಕ್ಕಳಿದ್ದಾರೆ ಎಂದು ಹೇಳಿ ಕೊಂಡಿರುವುದು ಧರ್ಮ ವಿರೋಧಿ ನಡೆಯಾಗಿದೆ. ಅದಕ್ಕಾಗಿ ಬಹಿರಂಗ ಕ್ಷಮೆ ಯಾಚಿಸಬೇಕು ಇಲ್ಲವೇ ಸ್ಪಷ್ಟನೆ ಕೊಡಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಅಷ್ಟ ಮಠಗಳ ಪೈಕಿ ಯಾವುದೇ ಮಠದಲ್ಲಿ ಏನಾದರೂ ಸಮಸ್ಯೆ ಉಂಟಾದಲ್ಲಿ ಆಯಾ ದ್ವಂದ್ವ ಮಠಗಳು ನೆರವಿಗೆ ಬರುವ, ಆಡಳಿತದಲ್ಲಿ ಮಧ್ಯ ಪ್ರವೇಶಿಸುವ ಹಕ್ಕನ್ನು ಹೊಂದಿವೆ. ಈ ನಿಟ್ಟಿನಲ್ಲಿ ಸೋದೆ ಮಠವು ಶೀರೂರು ಮಠದ ವಿಷಯದಲ್ಲಿ ಮಧ್ಯಪ್ರವೇಶಿಸಿದೆ.

ರಾಜಕೀಯಕ್ಕೆ ಬರುತ್ತೇನೆ ಎಂದು ಶೀರೂರು ಶ್ರೀಗಳು ಘೋಷಿಸಿಕೊಂಡಿದ್ದರು. ಅನಂತರದಲ್ಲಿ ಅಷ್ಟ ಮಠದ ಸ್ವಾಮಿಗಳ ಕುರಿತಾದ ಅವರ ಹೇಳಿಕೆಯ ವೀಡಿಯೋ ತುಣುಕು ಚಾನೆಲ್‌ಗ‌ಳಲ್ಲಿ ಪ್ರಸಾರವಾಗಿತ್ತು. ಬಳಿಕ ಇತರೆಲ್ಲ ಸ್ವಾಮಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಶೀರೂರು ಶ್ರೀಗಳ ರಾಜಕೀಯ ಪ್ರವೇಶದ ಕುರಿತು ಆಕ್ಷೇಪ ಬಂದಿರಲಿಲ್ಲ. ಆದರೆ ಇತರ ಸ್ವಾಮಿಗಳ ವಿರುದ್ಧ ಮಾತನಾಡಿರುವುದು ಚರ್ಚೆಯಾಗಿತ್ತು.

ನೋಟಿಸ್‌ ಬಂದಿಲ್ಲ: ಶೀರೂರು ಶ್ರೀ
ನನಗೆ ಯಾವುದೇ ನೋಟಿಸ್‌ ಬಂದಿಲ್ಲ ಎಂದು ಶೀರೂರು ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ಸ್ಪಷ್ಟಪಡಿಸಿದ್ದಾರೆ. ನನಗೆ ನೋಟಿಸ್‌ ಕೊಡಲು ಅವರ್ಯಾರು? ಅಷ್ಟಕ್ಕೂ ಚಾನೆಲ್‌ನಲ್ಲಿ ಬಂದಿರುವ ವೀಡಿಯೋ ನನ್ನದಲ್ಲ ಎಂದು ಈಗಾಗಲೇ ಖಚಿತಪಡಿಸಿದ್ದೇನೆ. ನೋಟಿಸ್‌ ಬಂದರೆ ನಮ್ಮ ವಕೀಲರ ಮೂಲಕ ತಕ್ಕ ಉತ್ತರ ನೀಡುತ್ತೇನೆ ಎಂದವರು ಹೇಳಿದ್ದಾರೆ. ನೋಟಿಸ್‌ ನೀಡಿರುವ ವಿಚಾರದ ಬಗ್ಗೆ ತಿಳಿದುಕೊಳ್ಳಲು ಸೋದೆ ಸ್ವಾಮಿಗಳನ್ನು ಸಂಪರ್ಕಿಸಿದರೂ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಶ್ರೀಗಳು ನಿರಾಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next