Advertisement

ಉಡುಪಿ –ಶಿವಮೊಗ್ಗ ಸಂಪರ್ಕ ಕೊಂಡಿ; ಭರದಿಂದ ಸಾಗುತ್ತಿದೆ ಸೌಡ ಸೇತುವೆ ಕಾಮಗಾರಿ

12:28 PM Mar 07, 2023 | Team Udayavani |

ಕುಂದಾಪುರ: ಕಳೆದ 2-3 ದಶಕಗಳಿಂದ ಬಹುಜನರ ಬೇಡಿಕೆಯಾಗಿದ್ದ ಸೌಡ – ಶಂಕರನಾರಾಯಣ ಸೇತುವೆ ಕಾಮಗಾರಿ ಆರಂಭಗೊಂಡು, ಈಗ ಭರದಿಂದ ಸಾಗುತ್ತಿದೆ. ವಾರಾಹಿ ನದಿಗೆ ಅಡ್ಡಲಾಗಿ ಸೌಡದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಈ ಸೇತುವೆಯಿಂದ ಹತ್ತಾರು ಊರುಗಳಿಗೆ ಪ್ರಯೋಜನವಾಗಲಿದೆ.

Advertisement

ಅನೇಕ ವರ್ಷಗಳಿಂದ ಘೋಷಣೆಯಾಗಿ, ನೆನೆಗುದಿಗೆ ಬಿದ್ದಿದ್ದ ಬಹು ಬೇಡಿಕೆಯ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೌಡ-ಶಂಕರನಾರಾಯಣ ಸೇತುವೆ ಕಾಮಗಾರಿಗೆ ಚಾಲನೆ ಸಿಕ್ಕಿದ್ದು, ಈಗ ಕಾಮಗಾರಿಯೂ ಬಿರುಸಿನಿಂದ ನಡೆಯುತ್ತಿದೆ.

ಬ್ರಹ್ಮಾವರ-ಜನ್ನಾಡಿ-ಸೌಡ- ಶಂಕರ ನಾರಾಯಣ- ತೀರ್ಥಹಳ್ಳಿ ರಸ್ತೆ ಮೇಲ್ದರ್ಜೆಯಾಗಿ ರಾಜ್ಯ ಹೆದ್ದಾರಿಯಾಗಿದ್ದು, ನಬಾರ್ಡ್‌ ಯೋಜನೆಯಡಿ ಲೋಕೋಪಯೋಗಿ ಇಲಾಖೆಯ 15 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಈ ಸೇತುವೆಯು ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗೆ ಮತ್ತೂಂದು ಸಂಪರ್ಕ ಕೊಂಡಿಯಾಗಲಿದೆ. ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟರ ಪ್ರಯತ್ನ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರ ಮುತುವರ್ಜಿಯಿಂದಾಗಿ ಅನುದಾನ
ಮಂಜೂರಾಗಿತ್ತು. ಹಿಂದೆ ಶಾಸಕರಾಗಿದ್ದ ಗೋಪಾಲ ಪೂಜಾರಿ, ವಿಧಾನ ಪರಿಷತ್‌ ಸದಸ್ಯರಾಗಿದ್ದ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಶಿಫಾರಸು ಮಾಡಿ, ಸೇತುವೆಗಾಗಿ ಪ್ರಯತ್ನಿಸಿದ್ದಾರೆ. ಸೌಡ ಭಾಗದ ಜನರು, ಈ ಭಾಗದ ಸಂಘಟನೆಗಳು, ಶಂಕರನಾರಾಯಣ ತಾಲೂಕು ಹೋರಾಟ ಸಮಿತಿಯವರು ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು.

8-10 ಕಿ.ಮೀ. ಹತ್ತಿರ
ಸೌಡ ಸೇತುವೆಯಾದರೆ ಪ್ರಮುಖವಾಗಿ ಉಪ ನೋಂದಣಿ ಕಚೇರಿ ಸಹಿತ ಹತ್ತು ಹಲವು ಸರಕಾರಿ ಕಚೇರಿಗಳನ್ನು ಹೊಂದಿರುವ ಶಂಕರನಾರಾಯಣಕ್ಕೆ ಬರಲು ಹಾರ್ದಳ್ಳಿ-ಮಂಡಳ್ಳಿ, ಮೊಳಹಳ್ಳಿ, ಹೊಂಬಾಡಿ – ಮಂಡಾಡಿ, ಯಡಾಡಿ – ಮತ್ಯಾಡಿ, ಕೊರ್ಗಿ, ಜಪ್ತಿ, ಹೆಸ್ಕತ್ತೂರು ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ. ಇನ್ನು ಸೌಡ ಭಾಗದ ಜನರು ಕುಂದಾಪುರ ಹಾಗೂ ಉಡುಪಿಗೆ ಬರಲು 10 ರಿಂದ 12 ಕಿ.ಮೀ. ಹತ್ತಿರವಾಗಲಿದೆ. ಮಚ್ಚಟ್ಟು, ಸಿದ್ದಾಪುರ, ಹೊಸಂಗಡಿ, ಉಳ್ಳೂರು-74 ಭಾಗದ ಜನರಿಗೆ ಮಣಿಪಾಲ, ಉಡುಪಿಗೆ ತೆರಳಲು ಸಹ ಪ್ರಯೋಜನವಾಗಲಿದೆ.

2024ರಲ್ಲಿ ಪೂರ್ಣ
ಸೇತುವೆಯು ಒಟ್ಟು 153 ಮೀ. ಉದ್ದವಿರಲಿದ್ದು, 12.5 ಮೀ. ಅಗಲವಾಗಿರಲಿದೆ. 2 ಅಬ್ಯುಸ್‌ ಮೆಂಟ್‌ ಹಾಗೂ 5 ಪಿಲ್ಲರ್‌ಗಳು ಇರಲಿದೆ. ಕಾಮಗಾರಿ ಗುತ್ತಿಗೆಯನ್ನು ಸೈಂಟ್‌ ಅಂತೋನಿ ಕನ್‌ಸ್ಟ್ರಕ್ಷನ್‌ ಕಂಪೆನಿ ನಿರ್ವಹಿಸುತ್ತಿದ್ದು, 2024 ನವೆಂಬರ್‌ವರೆಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ.
– ಕೆ. ಶಿವಮೂರ್ತಿ, ಸಹಾಯಕ
ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ

Advertisement

ಸುದಿನ ವರದಿ
ಸೌಡ – ಶಂಕರನಾರಾಯಣ ಸೇತುವೆ ಬೇಡಿಕೆ ಬಗ್ಗೆ, ಒಮ್ಮೆ ಘೋಷಣೆಯಾಗಿ ಬಳಿಕ ನನೆಗುದಿಗೆ ಬಿದ್ದ ಕುರಿತು, ವಿಳಂಬದ ಬಗ್ಗೆಯೂ “ಉದಯವಾಣಿ ಸುದಿನ’ವು ನಿರಂತರವಾಗಿ ವಿಶೇಷ ವರದಿಗಳನ್ನು ಪ್ರಕಟಿಸಿ, ಗಮನಸೆಳೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next