Advertisement

Udupi; ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಗೆ 20 ವರ್ಷ ಕಠಿನ ಜೈಲು ಶಿಕ್ಷೆ

10:07 PM Mar 02, 2024 | Team Udayavani |

ಉಡುಪಿ: ಎರಡು ವರ್ಷಗಳ ಹಿಂದೆ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ 20 ವರ್ಷಗಳ ಕಠಿನ ಜೈಲುಶಿಕ್ಷೆ ವಿಧಿಸಿ ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯ ಶನಿವಾರ ಆದೇಶ ನೀಡಿದೆ.

Advertisement

ಬೈಂದೂರು ನಿವಾಸಿ ಧೀರಜ್‌ (23) ಶಿಕ್ಷೆಗೆ ಗುರಿಯಾದವ. ಈತ ಕುಂದಾಪುರ ತಾಲೂಕಿನ 16 ವರ್ಷ ಪ್ರಾಯದ ಬಾಲಕಿಯನ್ನು ವಾಟ್ಸಾಪ್‌ ಮೂಲಕ ಸಂಪರ್ಕಿಸಿ ಆಕೆಯನ್ನು ಪುಸಲಾಯಿಸಿ 2022ರ ಜೂ. 15ರಂದು ಉಡುಪಿಯಲ್ಲಿರುವ ಲಾಡ್ಜ್ಗೆ ಕರೆದುಕೊಂಡು ಹೋಗಿ ಬಲತ್ಕಾರವಾಗಿ ದೈಹಿಕ ಸಂಪರ್ಕ ನಡೆಸಿದ್ದ. ಮಾಹಿತಿ ಮೇರೆಗೆ ಆ ಸಮಯ ಗಸ್ತು ಕರ್ತವ್ಯದಲ್ಲಿದ್ದ ಉಡುಪಿ ನಗರ ಠಾಣಾ ಪೊಲೀಸರು ಲಾಡ್ಜ್ ಗೆ ದಾಳಿ ನಡೆಸಿದರು. ಪರಿಶೀಲಿಸಿದಾಗ ಆರೋಪಿ ಬಾಲಕಿಗೆ ದೌರ್ಜನ್ಯ ಎಸಗಿರುವುದು ಕಂಡುಬಂತು. ಈ ಬಗ್ಗೆ ಹೆತ್ತವರಿಗೆ ಪೊಲೀಸರು ಮಾಹಿತಿ ನೀಡಿದರು.

ಈ ಕುರಿತು ಪೋಷಕರು ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಗಿನ ಠಾಣಾ ನಿರೀಕ್ಷಕ ಜಯಂತ್‌ ಎಂ. ಮತ್ತು ಮಂಜುನಾಥ್‌ ತನಿಖೆ ನಡೆಸಿದರು.

ಶರಣ ಗೌಡ ವಿ.ಎಚ್‌. ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯವು ಒಟ್ಟು 30 ಮಂದಿ ಸಾಕ್ಷಿಗಳ ಪೈಕಿ 17 ಸಾಕ್ಷಿಗಳ ವಿಚಾರಣೆ ನಡೆಸಿದ್ದು, ನೊಂದ ಬಾಲಕಿಯ ಸಾಕ್ಷಿ ಮತ್ತು ಪರೀಕ್ಷೆ ನಡೆಸಿದ ಮಣಿಪಾಲ ಆಸ್ಪತ್ರೆಯ ಫಾರೆನ್ಸಿಕ್‌ ವಿಭಾಗದ ವೈದ್ಯಾಧಿಕಾರಿಗಳು ನೀಡಿದ ವರದಿಯಲ್ಲಿ ದೈಹಿಕ ದೌರ್ಜನ್ಯ ಎಸಗಿರುವುದು ದೃಢಪಟ್ಟಿದೆ.

ಅದರಂತೆ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಅವರು ಆರೋಪಿಗೆ 20 ವರ್ಷ ಕಠಿನ ಶಿಕ್ಷೆ, 20 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡದಲ್ಲಿ 5,000 ರೂ. ಸರಕಾರಕ್ಕೆ, 15 ಸಾವಿರ ರೂ. ನೊಂದ ಬಾಲಕಿಗೆ ನೀಡಬೇಕು ಮತ್ತು ಸರಕಾರದಿಂದ ನೊಂದ ಬಾಲಕಿಗೆ 1.50 ಲ.ರೂ. ಪರಿಹಾರ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

Advertisement

ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದ ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next