ಉಡುಪಿ: ಶ್ರೀಕೃಷ್ಣ ಮಠದಲ್ಲಿ ಗುರುವಾರ ಕಟ್ಟುಕಟ್ಟಳೆಯ ವಾರ್ಷಿಕ ಸಪ್ತೋತ್ಸವ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಆರಂಭಗೊಂಡಿತು.
ತೆಪ್ಪೋತ್ಸವವಾದ ಬಳಿಕ ರಥಬೀದಿಯಲ್ಲಿ ರಥೋತ್ಸವ ನಡೆಯಿತು. ಎರಡು ರಥಗಳ ಪೈಕಿ ಒಂದರಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣ, ಇನ್ನೊಂದರಲ್ಲಿ ಶ್ರೀ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವರ ಉತ್ಸವಮೂರ್ತಿಗಳನ್ನು ಇರಿಸಿ ರಥವನ್ನು ಭಕ್ತರು ಎಳೆದರು. ತೆಪ್ಪೋತ್ಸವ ನಡೆಯುವಾಗ ಬೆಂಗಳೂರು ಬೇಲಿ ಮಠದ ಶ್ರೀ ಶಿವಮೂರ್ತಿಶಿವರುದ್ರ ಸ್ವಾಮಿಗಳು ಮಧ್ವಸರೋವರದಲ್ಲಿ ಕುಳಿತು ವೀಕ್ಷಿಸಿದರು.
ಸಪ್ತೋತ್ಸವದಲ್ಲಿ ಶ್ರೀಕೃಷ್ಣಾಪುರ, ಶ್ರೀ ಅದಮಾರು, ಪಲಿಮಾರು ಕಿರಿಯ ಶ್ರೀಪಾದರು ಪಾಲ್ಗೊಂಡರು. ಇದು ಪಲಿಮಾರು ಮಠ ಪರ್ಯಾಯದ ಕೊನೆಯ ಸಪ್ತೋತ್ಸವವಾಗಿದ್ದು, 21 ಸೇವಾಕರ್ತರು ಹೆಸರು ನೋಂದಾಯಿಸಿದ್ದರು.
ಜನವರಿ 14ರಂದು ಮಕರ ಸಂಕ್ರಾಂತಿ ಉತ್ಸವದ ದಿನ ಬ್ರಹ್ಮರಥ ಸಹಿತ ಮೂರು ರಥಗಳ ಉತ್ಸವ ನಡೆಯಲಿದೆ. ಇದರಲ್ಲಿ ಒಂದು ರಥದಲ್ಲಿ ಕೃಷ್ಣ, ಇನ್ನೊಂದರಲ್ಲಿ ಮುಖ್ಯಪ್ರಾಣ, ಮತ್ತೂಂದು ರಥದಲ್ಲಿ ಅನಂತೇಶ್ವರ- ಚಂದ್ರೇಶ್ವರ ದೇವರ ಉತ್ಸವ ಮೂರ್ತಿಗಳನ್ನು ಇರಿಸಿ ರಥೋತ್ಸವ ನಡೆಸಲಾಗುತ್ತದೆ. ಜ. 15ರಂದು ಚೂರ್ಣೋತ್ಸವ ನಡೆಯಲಿದೆ. ಈ ಪರ್ಯಾಯದಲ್ಲಿ ವರ್ಷದಲ್ಲಿ ಎರಡೇ ಬಾರಿ ಸಪ್ತೋತ್ಸವವನ್ನು ನಿಗದಿಪಡಿಸಿದ್ದು, ಮೊದಲನೆಯದು ರಾಮನವಮಿ ಸಂದರ್ಭ ಜರುಗಿತ್ತು.
ಜನವರಿ 17 ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಈ ಪರ್ಯಾಯ ಅವಧಿಯ ಕೊನೆಯ ದಿನ ವಾಗಿದ್ದು, ಭಕ್ತಾದಿಗಳಿಗಾಗಿ ವಿಶೇಷ ಸಂತರ್ಪಣೆ ಏರ್ಪಡಿಸಲಾಗಿದೆ.