Advertisement

Udupi: ಸಂತೆಕಟ್ಟೆ ಓವರ್‌ಪಾಸ್‌ ಕಾಮಗಾರಿ ಚುರುಕು

04:27 PM Oct 17, 2024 | Team Udayavani |

ಉಡುಪಿ: ಸಂತೆಕಟ್ಟೆಯ ವೆಹಿಕ್ಯುಲಾರ್‌ ಓವರ್‌ ಪಾಸ್‌ನಲ್ಲಿ ಸಂಚಾರ ಅಧ್ವಾನಗಳ ನಡುವೆಯೂ ಎರಡನೇ ಹಂತದ ಕಾಮಗಾರಿ ಚುರುಕಿನಿಂದ ಸಾಗುತ್ತಿದೆ. ಮೊದಲನೇ ಹಂತದಲ್ಲಿ ದ್ವಿಪಥ ರಸ್ತೆ ನಿರ್ಮಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಈ ರಸ್ತೆ ಹೊಂಡಾಗುಂಡಿಯಿಂದ ಕೂಡಿ ಸಂಚಾರವೇ ದುಸ್ತರವಾಗಿದೆ. ಇಲ್ಲಿ ಅಲ್ಲಲ್ಲಿ ಬೆಳಗ್ಗೆ ವೆಟ್‌ಮಿಕ್ಸ್‌ ಅಳವಡಿಸಿದ್ದರೂ ನಿರಂತರ ವಾಹನ ಸಂಚಾರದಿಂದ ಸಂಜೆ ವೇಳೆ ಪುನಃ ಗುಂಡಿಯಾಗಿರುತ್ತದೆ. ಈ ಮಧ್ಯೆ ಮಳೆಯೂ ಅಡ್ಡಿ ಮಾಡುತ್ತಿದೆ. ಇದೆಲ್ಲದರ ನಡುವೆ ಇನ್ನೊಂದು ದ್ವಿಪಥ ರಸ್ತೆ ನಿರ್ಮಿಸುವ ಎರಡನೇ ಹಂತದ ಕಾಮಗಾರಿ ವೇಗವಾಗಿ ಸಾಗುತ್ತಿದೆ.

Advertisement

ಓವರ್‌ಪಾಸ್‌ ಕಾಮಗಾರಿಯ 2ನೇ ಹಂತ ಮಳೆ ಯಿಂದಾಗಿ ವಿಳಂಬವಾಗಿತ್ತು. ಅಲ್ಲದೆ ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಸಂಚಾರ ದುಸ್ತರವಾಗಿತ್ತು. ಈ ಬಗ್ಗೆ ‘ಉದಯವಾಣಿ’ ಸರಣಿ ವರದಿ ಪ್ರಕರಿಸಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿತ್ತು. ಜಿಲ್ಲಾಧಿಕಾರಿ ಸಹಿತವಾಗಿ ಸಂಸದರು ಮೇಲಿಂದ ಮೇಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಎರಡು ಮೂರು ಸುತ್ತಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆ ಪಡೆದ ಸಂಸ್ಥೆಯ ಅಧಿಕಾರಿಗಳ ಸಭೆ ನಡೆಸಿ ಕಾಮಗಾರಿ ಶೀಘ್ರ ಮುಗಿಸಲು ಸೂಚನೆ ನೀಡಿದ್ದರು.

ರಸ್ತೆಯಲ್ಲಿ ಬೃಹದಾಕಾರದ ಗುಂಡಿ.

ಅದರಂತೆ ಗುತ್ತಿಗೆ ಪಡೆದ ಸಂಸ್ಥೆಯು ಕಾಮಗಾರಿಗೆ ವೇಗ ನೀಡಿದೆ. ಈ ವರ್ಷ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ 2025ರ ಆರಂಭದಲ್ಲಿ ರಸ್ತೆ ಸಂಪೂರ್ಣ ಸಂಚಾರ ಮುಕ್ತಗೊಳಿಸಲು ಬೇಕಾದಂತೆ ಕಾಮಗಾರಿ ನಡೆಯುತ್ತಿದೆ.

ದ್ವಿತೀಯ ಹಂತಕ್ಕೆ ವೇಗ ಹೇಗೆ?

  • 8-10 ಕಾರ್ಮಿಕರು ಮಾತ್ರ ಮಾಡುತ್ತಿದ್ದ ಕಾಮಗಾರಿಗೆ ಈಗ 25- 30 ಕಾರ್ಮಿಕರ ನಿಯೋಜನೆ
  • ಮೊದಲು ಒಂದೇ ಜೆಸಿಬಿ ಇದ್ದರೆ ಈಗ 3-4 ಜೆಸಿಬಿ, ಆಧುನಿಕ ಯಂತ್ರಗಳ ಬಳಕೆಯಾಗುತ್ತಿದೆ.
  • ಎರಡನೇ ಹಂತದ ಕಾಮಗಾರಿ ಅನುಕೂಲವಾಗುವಂತೆ ಮೇಲ್ಭಾಗದ ಮಣ್ಣು, ಡಾಮರು ರಸ್ತೆ ಕೆಡವು ಕಾರ್ಯ ವೇಗವಾಗಿ ಸಾಗುತ್ತಿದೆ.
  • ಓವರ್‌ಪಾಸ್‌ಗೆ ಬೇಕಾದ ತಡೆಗೋಡೆಯನ್ನು ವೇಗದಲ್ಲಿ ಕಟ್ಟಲಾಗುತ್ತಿದೆ. ಬ್ರಹ್ಮಾವರದಿಂದ ಉಡುಪಿಗೆ ಬರುವಾಗ ಸಂತೆಕಟ್ಟೆ ಹೊಳೆಯಿಂದ ಸ್ವಲ್ಪ ಮುಂದೆ ಬಲಭಾಗದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಚುರುಕಾಗಿ ಸಾಗುತ್ತಿದೆ.
  • ಈಗಾಗಲೇ ಸುಮಾರು 100 ಮೀಟರ್‌ನಷ್ಟು ತಡೆಗೋಡೆಯು ಪೂರ್ಣಗೊಂಡಿದೆ. ರೋಬೋಸಾಫ್ಟ್ ಕಡೆಯಿಂದ ಬ್ರಹ್ಮಾವರ ಕಡೆಗೆ ಹೋಗುವಾಗಲು ಸುಮಾರು 25 ಮೀಟರ್‌ ಹೆಚ್ಚು ತಡೆಗೋಡೆ ನಿರ್ಮಾಣವಾಗಿದೆ.
  • ಇಲ್ಲಿ ಬಂಡೆ ಒಡೆಯುವ ಕಾರ್ಯವೂ ಚುರುಕಾಗಿ ನಡೆಯುತ್ತಿದೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next