ಉಡುಪಿ: ತ್ಯಾಜ್ಯ ಮುಕ್ತ ಜಿಲ್ಲೆಯಾಗಿ ಮುಂದಿನ ವರ್ಷದಲ್ಲಿ ಉಡುಪಿಯನ್ನು ಘೋಷಣೆ ಮಾಡುವ ನಿಟ್ಟಿನಲ್ಲಿ ಸ್ವತ್ಛ ಉಡುಪಿ ಮಿಷನ್ ಮೂಲಕ ಮಣಿಪಾಲದ ರಜತಾದ್ರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ 411 ದಿನಗಳ ಯೋಜನೆಯ ಕೌಂಟ್‌ಡೌನ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಚಾಲನೆ ನೀಡಿದರು.
ಕಸ ವಿಂಗಡಿಸಿ ತ್ಯಾಜ್ಯ ಮುಕ್ತ ಜಿಲ್ಲೆಯಾಗಿ ಘೋಷಿಸುವ ಯೋಜನೆಯು ಕನಿಷ್ಟ ಸಮಸ್ಯೆಗಳಿರುವ ಉಡುಪಿ ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಾಧ್ಯವಾಗುತ್ತದೆ. 2018ರ ಅ. 2ರಂದು ಅಧಿಕೃತ ಘೋಷಣೆಯಾಗಬೇಕಿದೆ.
ಇಲ್ಲಿ ಯಾವುದೇ ಲಾಬಿಗಳಿಗೆ
ಮಣಿಯದೆ ಜನರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮಾತ್ರ ಕಾರ್ಯನಿರ್ವಹಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ನಾಗರಿಕರು ಮುಖ್ಯವಾಗಿ ಮಹಿಳೆಯರು ಸಂಪೂರ್ಣ ತೊಡಗಿಸಿಕೊಂಡರೆ ಉಡುಪಿಯು ಸಮಸ್ಯೆ ಮುಕ್ತ ಜಿಲ್ಲೆಯಾಗಲಿದೆ ಎನ್ನುವ ವಿಶ್ವಾಸವಿದೆ. ತ್ಯಾಜ್ಯ ವಿಂಗಡನೆಯ ಯೋಜನೆಯಿಂದ ಸುಮಾರು 5 ಸಾವಿರ ಉದ್ಯೋಗವೂ ಸೃಷ್ಟಿಯಾಗಲಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಅವರು ಹೇಳಿದರು.
ಪ್ರಥಮ ಹಂತದ ಪೈಲಟ್ ಯೋಜನೆಯಲ್ಲಿ ಆಯ್ಕೆಯಾದ ವಾರಂಬಳ್ಳಿ, ನಿಟ್ಟೆ ಮತ್ತು ಗಂಗೊಳ್ಳಿಯ ಗ್ರಾ.ಪಂ.ಗೆ ಕಸ ವಿಂಗಡಣೆಯ ಬಕೆಟ್‌ಗಳನ್ನು ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅವರು ವಿತರಿಸಿದರು. ಸಂಪನ್ಮೂಲ ವ್ಯಕ್ತಿ ವೆಲ್ಲೂರು ಶ್ರೀನಿವಾಸನ್ ಅವರು ತ್ಯಾಜ್ಯ ವಿಂಗಡನೆಯ ಕುರಿತು ಮಾಹಿತಿ ನೀಡಿದರು.
ಉಡುಪಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ, ಕೃಷಿ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿ.ಪಂ. ಸಿಇಒ ಶಿವಾನಂದ ಕಾಪಶಿ ಮೊದಲಾದವರು ಉಪಸ್ಥಿತರಿದ್ದರು.