Advertisement
ಡೆಂಗ್ಯೂ ಜ್ವರಡೆಂಗ್ಯೂ ಜ್ವರ ಡೆಂಗ್ಯೂ ವೈರಸ್‌ನಿಂದ ಉಂಟಾಗುತ್ತದೆ. “ಈಡೀಸ್ ಈಜಿಪ್ಟ್’ ಎಂಬ ಸೊಳ್ಳೆಯ ಕಚ್ಚುವಿಕೆಯಿಂದ ಹರಡುತ್ತದೆ. ಹಗಲಿನಲ್ಲಿ ಕಚ್ಚುವ ಈ ಸೊಳ್ಳೆಗಳು ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಡೆಂಗ್ಯೂ ಜ್ವರ, ಡೆಂಗ್ಯೂ ರಕ್ತಸ್ರಾವ ಜ್ವರ, ಡೆಂಗ್ಯೂ ಶಾಕ್ ಸಿಂಡ್ರೋಮ್ ಇದರ ಮೂರು ವಿಧಗಳು.
– ತೀವ್ರ ತರವಾದ ಮತ್ತು ಒಂದೇ ಸಮನೆ ಹೊಟ್ಟೆ ನೋವು, ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ
– ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು
– ರಕ್ತ ಸಹಿತ ಅಥವಾ ರಕ್ತ ರಹಿತವಾದ ವಾಂತಿ ಪದೇ ಪದೇ ಆಗುವುದು
-ವಿಪರೀತ ಬಾಯರಿಕೆ ಹಾಗೂ ಬಾಯಿ ಒಣಗುವುದು, ತಣ್ಣನೆಯ ಬಿಳಿಚಿದ ಚರ್ಮ, ಚಡಪಡಿಸುವಿಕೆ ಅಥವಾ ಜ್ಞಾನ ತಪ್ಪುವುದು ಲಕ್ಷಣಗಳು
– ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು
– ತೀಕ್ಷ್ಣವಾದ ಜ್ವರದ ಅನಂತರ ರಕ್ತಸ್ರಾವ, ಮೈ ಊತ, ರಕ್ತದ ಒತ್ತಡದ ಕುಸಿತವೂ ಉಂಟಾಗಬಹುದು.
– ಜ್ವರ ಬಂದ 3-5 ದಿನಗಳಲ್ಲಿ ರಕ್ತಸ್ರಾವದ ಮತ್ತು ಮೈ ಊತ
– 5-6 ದಿನಗಳ ಅನಂತರವೂ ಜ್ವರ ಮುಂದುವರಿದಲ್ಲಿ ಮಧ್ಯದಲ್ಲಿ ಸ್ವಲ್ಪ ಕಡಿಮೆಯಾಗಿ ಮತ್ತೆ ಹೆಚ್ಚಾಗುತ್ತದೆ. ಈ ವೇಳೆ ರೋಗಿಗಳು ತೀವ್ರ ನಿಶ್ಶಕ್ತಿಗೂ ಒಳಗಾಗಬಹುದು.
Related Articles
ಚಿಕಿತ್ಸೆಗೆ ನಿರ್ದಿಷ್ಟವಾದ ಔಷಧ ಇಲ್ಲ. ಸರಿಯಾದ ಪೂರ್ವಭಾವಿ ಚಿಕಿತ್ಸೆ ನೀಡಿದರೆ ರೋಗದ ಲಕ್ಷಣಗಳನ್ನು ಪರಿಹರಿಸಿ ಮುಂದಾಗಬಹುದಾದ ತೊಂದರೆ ಮತ್ತು ಸಾವನ್ನು ನಿಯಂತ್ರಿಸಬಹುದು. ಈ ಜ್ವರಕ್ಕೆ “ಆಸ್ಪಿರಿನ್’ ಮತ್ತು “ಬ್ರೂಫಿನ್’ ಕೊಡಬಾರದು. ಏಕೆಂದರೆ ಇವು ರಕ್ತಸ್ರಾವ ಮತ್ತು ಹೊಟ್ಟೆ ನೋವನ್ನು ಇನ್ನಷ್ಟು ತೀವ್ರಗೊಳಿಸುತ್ತದೆ. ವೈದ್ಯರ ಸಲಹೆ ಮೇರೆಗೆ “ಪ್ಯಾರಸಿಟಮಾಲ್’ ನೀಡಬಹುದು. ಡೆಂಗ್ಯೂ ರಕ್ತಸ್ರಾವ ಜ್ವರದ ಲಕ್ಷಣಗಳು ಒಂದಕ್ಕಿಂತ ಹೆಚ್ಚು ಕಂಡು ಬಂದರೆ ರೋಗಿಯನ್ನು ತುರ್ತಾಗಿ ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಬೇಕು. ರೋಗಿಯನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ದ್ರವ ಆಹಾರವನ್ನು ಕುಡಿಯಲು ನೀಡಬೇಕು.
Advertisement
ನಿಯಂತ್ರಣ ಕ್ರಮ ಹೇಗೆ?– ಮನೆಯೊಳಗೆ ಮತ್ತು ಮೇಲ್ಛಾವಣೆಯ ನೀರಿನ ತೊಟ್ಟಿಗಳಲ್ಲಿ ತಪ್ಪದೆ ವಾರಕ್ಕೊಮ್ಮೆ ನೀರನ್ನು ಖಾಲಿ ಮಾಡಿ ಉಜ್ಜಿ ಒಣಗಿಸಿ ಮತ್ತಿ ಭರ್ತಿ ಮಾಡಿ ಭದ್ರವಾಗಿ ಮುಚ್ಚಳಿಕೆಯಿಂದ ಮುಚ್ಚಬೇಕು.
– ಮನೆಯ ಒಳಗೆ ಹಾಗೂ ಹೊರಭಾಗದಲ್ಲಿ ಯಾವುದೇ ಕಾರಣಕ್ಕೂ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು.
– ಒಡೆದ ಬಾಟಲಿ, ಟಿನ್, ಟೈರ್‌ಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು.
– ಏರ್‌ಕೂಲರ್‌ಗಳಲ್ಲಿ ನೀರನ್ನು ಆಗಾಗ ಬದಲಿಸುತ್ತಿರಬೇಕು. ಏರ್‌ಕೂಲರ್ ಕೆಟ್ಟಾಗ, ಉಪಯೋಗಿಸದಿದ್ದಾಗ ಏರ್‌ಕೂಲರ್‌ನ ನೀರನ್ನು ಖಾಲಿ ಮಾಡಬೇಕು.
– ಮೈ ತುಂಬಾ ಬಟ್ಟೆ ಧರಿಸಬೇಕು. ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನಿಯಂತ್ರಣ ಜಾಲರಿಗಳನ್ನು ಅಳವಡಿಸಬೇಕು.