Advertisement

Udupi ಬಂಡಾಯ: ಟ್ರಬಲ್‌ ಶೂಟರ್‌ ಯಾರು?

12:51 AM Apr 15, 2023 | Team Udayavani |

ಉಡುಪಿ: ಬಿಜೆಪಿ ಪಾಳೆಯದಲ್ಲಿ ಟಿಕೆಟ್‌ ಹಂಚಿಕೆಯ ಅನಂತರ ಸೂರ್ಯೋ ದಯದ ಹೊತ್ತಿಗೆ ಭುಗಿಲೆದ್ದಿದ್ದ ಭಿನ್ನಮತ ಸೂರ್ಯಾಸ್ತದ ವೇಳೆಗೆ ಶಮನಗೊಂಡಿತು. ಈ ಹಿನ್ನೆಲೆಯಲ್ಲಿ ಅಸಮಾಧಾನಿತರನ್ನು ಮನವೊಲಿಸುವ ಕೆಲಸದಲ್ಲಿ ಟ್ರಬಲ್‌ ಶೂಟರ್‌ ಆಗಿ ಕೆಲಸ ಮಾಡಿದವರು ಯಾರು ಎಂಬುದೇ ಕುತೂಹಲಕ್ಕೆ ಕಾರಣವಾಗಿದೆ. ಪಕ್ಷ ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದ ಶಾಸಕ ಕೆ. ರಘುಪತಿ ಭಟ್‌ ಅವರು ಒಂದೇ ದಿನ ದಲ್ಲಿ ಪಕ್ಷದ ಕಚೇರಿಗೆ ಆಗಮಿಸಿ ಪಕ್ಷದ ಅಭ್ಯರ್ಥಿಗೆ ಪೂರ್ಣ ಬೆಂಬಲ, ಸಹಕಾರ ಘೋಷಿಸಿದರು. ಬೈಂದೂರಿನಲ್ಲಿ ರಾತೋ ರಾತ್ರಿ ಎದ್ದಿದ್ದ ಭಿನ್ನಮತವೂ ಮರು ದಿನ ಸಂಜೆಯೊಳಗೆ ಬಹುತೇಕ ತಣ್ಣಗಾಗಿದೆ.

Advertisement

ಜಿಲ್ಲಾ ನಾಯಕರು ಇಷ್ಟು ಬೇಗ ಸಮಸ್ಯೆ ಸರಿಪಡಿಸಿದರೆ ಅಥವಾ ರಾಜ್ಯ ನಾಯಕರು ಪ್ರಭಾವ ಬೀರಿದರೆ? ಅಥವಾ ಕೇಂದ್ರದ ವರಿಷ್ಠರು ರಂಗ ಪ್ರವೇಶದ ಎಚ್ಚರಿಕೆ ನೀಡಿದ್ದರೆ? ಹೀಗೆ ಚರ್ಚೆಗಳು ಜನರಲ್ಲಿ ಸಾಗುತ್ತಿವೆ. ಕೀಲಿ ಕೈ ಎಲ್ಲಿದೆ ಎಂಬುದು ಸ್ಪಷ್ಟವಾಗಿ ಯಾರಿಗೂ ಗೋಚರಿಸುತ್ತಿಲ್ಲ.
ಒಂದು ಮೂಲಗಳ ಪ್ರಕಾರ ರಾಜ್ಯ ಸಂಘಟನ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಅವರು ಅಸಮಾಧಾನಿತ ರೊಂದಿಗೆ ನೇರವಾಗಿ ದೂರವಾಣಿ ಮಾತುಕತೆ ನಡೆಸಿದರೆನ್ನಲಾಗಿದೆ. ಆದರೆ ಬಂಡಾಯ ಘೋಷಿಸಿದವರು ಕೇವಲ ದೂರವಾಣಿ ಕರೆಗೆ ಸುಮ್ಮನಾದರೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಉಡುಪಿ ಕ್ಷೇತ್ರದ ವಿಷಯದಲ್ಲಿ ಸಂಘದ ಹಿರಿಯರು, ಬಿಜೆಪಿಯ ಹಿರಿಯ ಕಾರ್ಯಕರ್ತರು ಮತ್ತು ರಾಜ್ಯದ ನಾಯಕರು ಪ್ರಭಾವ ಬೀರಿದ್ದಾರೆ ಎನ್ನಲಾಗುತ್ತಿದೆ. ಬೈಂದೂರು ವಿಷಯವಾಗಿ ಕೇಂದ್ರ ನಾಯಕರು ಮತ್ತು ಯಡಿಯೂರಪ್ಪನವೇ ಹೆಚ್ಚು ಮಧ್ಯ ಪ್ರವೇಶಿಸಿದ್ದಾರೆ ಎನ್ನಲಾಗಿದೆ.

ಉಡುಪಿ : ಕಾಂಗ್ರೆಸ್‌ ನಲ್ಲಿ ಆರದ ಬಂಡಾಯ
ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ಬಳಿಕ ಭುಗಿಲೆದ್ದಿದ್ದ ಬಂಡಾಯವನ್ನು ಪೂರ್ಣ ಪ್ರಮಾಣದಲ್ಲಿ ಶಮನ ಇನ್ನೂ ಆಗಿಲ್ಲ. ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಕೆ.ಕೃಷ್ಣಮೂರ್ತಿ ಆಚಾರ್ಯ ಅವರು ಎ.17 ರಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಸಂಭವವಿದೆ.

ಕೃಷ್ಣಮೂರ್ತಿ ಆಚಾರ್ಯ ಅವರೊಂದಿಗೆ ಈಗಾಗಲೇ ಕಾಂಗ್ರೆಸ್‌ ಮುಖಂಡರಾದ ಬಿ.ಕೆ. ಹರಿಪ್ರಸಾದ್‌ ಸೇರಿದಂತೆ ಜಿಲ್ಲಾಧ್ಯಕ್ಷರು ಮತ್ತು ಅಧಿಕೃತ ಅಭ್ಯರ್ಥಿ ಪ್ರಸಾದ್‌ ರಾಜ್‌ ಕಾಂಚನ್‌ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಆದರೂ ಕೃಷ್ಣಮೂರ್ತಿ ಆಚಾರ್ಯ ತಮ್ಮ ನಿರ್ಧಾರವನ್ನು ಬದಲಿಸಿಲ್ಲ. ನಾಮಪತ್ರ ಸಲ್ಲಿಕೆಯ ಅನಂತರದಲ್ಲಿ ಏನೇನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next