ಬೆಂಗಳೂರು: ಉಡುಪಿ ಜಿಲ್ಲೆಯಲ್ಲಿ ಡೀಮ್ಡ್ ಫಾರೆಸ್ಟ್ ವಿರಹಿತಗೊಂಡ ಸ್ಥಳದಲ್ಲಿ ವಾಸ್ತವ್ಯವಿರುವ ಫಲಾನುಭವಿಗಳಿಗೆ 94 ಸಿಸಿ ಮತ್ತು 94 ಸಿ ಅಡಿ ಹಕ್ಕುಪತ್ರ ನೀಡಲು ಇರುವ ತಾಂತ್ರಿಕ ಸಮಸ್ಯೆ ನಿವಾರಣೆಗೆ ಸರಕಾರ ತೆಗೆದುಕೊಂಡಿರುವ ನಿಯಮಗಳ ಬಗ್ಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧಿವೇಶನದಲ್ಲಿ ಪ್ರಶ್ನಿಸಿದ್ದಾರೆ.
ಇದಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಉತ್ತರಿಸಿ, ಭಾಗಶಃ ಡೀಮ್ಡ್ ಫಾರೆಸ್ಟ್ ಜಮೀನುಗಳಿಗೆ ಸಂಬಂಧಿಸಿ
ದಂತೆ ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಅಳತೆ ಪೂರ್ಣಗೊಂಡ ಬಳಿಕ ಅರ್ಹರಿಗೆ ನಿಯಾಮಾನುಸಾರ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಉಡುಪಿ ತಾಲೂಕಿನಲ್ಲಿ 64, ಕುಂದಾಪುರ 364, ಕಾರ್ಕಳ 235, ಬ್ರಹ್ಮಾವರ 154, ಬೈಂದೂರು 360, ಕಾಪು 13, ಹೆಬ್ರಿ 78 ಸೇರಿ 1,268 ಡೀಮ್ಡ್ ಫಾರೆಸ್ಟ್ ಸರ್ವೇ ನಂಬರ್‌ಗಳಿವೆ. ಉಡುಪಿ 5, ಕುಂದಾಪುರ 7, ಕಾರ್ಕಳ 18, ಬ್ರಹ್ಮಾವರ 4, ಬೈಂದೂರು 28, ಕಾಪು 4, ಹೆಬ್ರಿ 11 ಸೇರಿ 78 ಸರ್ವೇ ಸಂಖ್ಯೆಯಲ್ಲಿ ಜಂಟಿ ಅಳತೆ ನಡೆಸಲಾಗಿದೆ. ಜಿಲ್ಲೆಯಲ್ಲಿ 1,190 ಸರ್ವೇ ಸಂಖ್ಯೆಗಳಲ್ಲಿ ಬಾಕಿಯಿದೆ. ಕಾಪು ತಾಲೂಕಿಗೆ ಸಂಬಂಧಿಸಿ ದಂತೆ ಜಂಟಿ ಅಳತೆ ಕಾರ್ಯ ಪ್ರಗತಿಯಲ್ಲಿದ್ದು ಪೂರ್ಣಗೊಂಡ ಅನಂತರ ನಿಯಮಾನುಸಾರ ಹಕ್ಕುಪತ್ರ ನೀಡಲಾಗುವುದು ಎಂದು ಉತ್ತರಿಸಿದ್ದಾರೆ.
1,167 ಪಡಿತರ ಅರ್ಜಿ ವಿಲೇ:
ಬಿಪಿಎಲ್ ಪಡಿತರ ಚೀಟಿ ವಿತರಿಸಲು ಇರುವ ತಾಂತ್ರಿಕ ತೊಡಕುಗಳ ಬಗ್ಗೆ ಸುರೇಶ್ ಶೆಟ್ಟಿ ಪ್ರಶ್ನೆಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಉತ್ತರಿಸಿ, ಕಾಪು ಕ್ಷೇತ್ರದಲ್ಲಿ 1,167 ಅರ್ಜಿಗಳನ್ನು ವಿಲೇ ಮಾಡಿದ್ದು, ಪ್ರಸ್ತುತ 597 ವಿಲೇಗೆ ಬಾಕಿ ಇವೆ ಎಂದರು.