Advertisement

Udupi: ಶ್ರೀಪಾದರಾಜ ಮಠದ ನವೀಕರಣ; ಜ. 16ರಂದು ಉದ್ಘಾಟನೆ

11:44 PM Jan 12, 2024 | Team Udayavani |

ಉಡುಪಿ: ರಥಬೀದಿಯಲ್ಲಿರುವ ಶ್ರೀಪಾದರಾಜ ಮಠದ (ಮುಳಬಾಗಿಲು) ಶಾಖಾ ಮಠವು ನವೀಕೃತಗೊಂಡು ಉದ್ಘಾಟನೆಗೆ ಸಿದ್ಧಗೊಂಡಿದೆ.

Advertisement

ಆಚಾರ್ಯ ಮಧ್ವರ ಶಿಷ್ಯ ಶ್ರೀ ಪದ್ಮನಾಭತೀರ್ಥರ ಪರಂಪರೆಯ ಶ್ರೀಪಾದರಾಜ ಮಠದ ಮೂಲಮಠ ಕೋಲಾರ ಜಿಲ್ಲೆಯ ಮುಳುಬಾಗಿಲಿನಲ್ಲಿದೆ. ಸೋದೆ ವಿಷ್ಣುತೀರ್ಥ ಮಠವು ವಾದಿರಾಜ ಮಠ ಎಂದು ಕರೆಯಲ್ಪಡುವ ರೀತಿಯಲ್ಲಿಯೇ ದಾಸ ಪರಂಪರೆಯ ಮೂಲ ಪ್ರವರ್ತಕ ಶ್ರೀಪಾದರಾಜರ ಕಾರಣದಿಂದ ಅವರ ಹೆಸರಿನಲ್ಲೇ ಈ ಮಠವು ಪ್ರಸಿದ್ಧವಾಗಿದೆ. ಕನ್ನಡದಲ್ಲಿ ಹಲವಾರು ಪದ್ಯಗಳನ್ನು ರಚಿಸಿ ದೇವರನ್ನು ಆರಾಧಿಸಿದವರು ಶ್ರೀಪಾದರಾಜತೀರ್ಥರು. ದಾಸ ಸಾಹಿತ್ಯದ ಮೂಲ ಪ್ರವರ್ತಕರಾಗಿ ಬುನಾದಿ ಹಾಕಿಕೊಟ್ಟವರು. ಪುರಂದರ ದಾಸರ ಹಾಗೂ ಕನಕದಾಸರ ಗುರು ವ್ಯಾಸರಾಜರು ಇವರ ಶಿಷ್ಯರಾಗಿದ್ದರು. ಈ ಹಿನ್ನೆಲೆಯಲ್ಲಿ ಮಾಧ್ವ ಪರಂಪರೆ ಹಾಗೂ ದಾಸ ಸಾಹಿತ್ಯ ಪರಂಪರೆಯಲ್ಲಿ ಶ್ರೀಪಾದರಾಜ ಮಠಕ್ಕೆ ವಿಶೇಷ ಸ್ಥಾನವಿದೆ.

ರಥಬೀದಿಯಲ್ಲಿ ಶ್ರೀಪಾದರಾಜ ಮಠಕ್ಕೆ 2017ರಲ್ಲಿ ಶಂಕುಸ್ಥಾಪನೆ ನೆರವೇರಿತ್ತು. ಕೆಳ ಅಂತಸ್ತಿನಲ್ಲಿ ಸಭಾಭವನ, ಮೇಲಿನ ಅಂತಸ್ತಿನಲ್ಲಿ ಕೊಠಡಿಗಳನ್ನು ಒಳಗೊಂಡಿದೆ. ಭಕ್ತರಿಗೆ ಪೂಜೆ, ಪಾಠಪ್ರವಚನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ದಾಸ ಪರಂಪರೆಯ ಯತಿಗಳ ಭಾವಚಿತ್ರವನ್ನು ಅಳವಡಿಸುವ ಯೋಜನೆ ಇದೆ. ಅಂದು ಶಂಕುಸ್ಥಾಪನೆಯು ಶ್ರೀ ಕೇಶವನಿಧಿ ತೀರ್ಥ ಶ್ರೀಪಾದರು ಉಪಸ್ಥಿತಿಯಲ್ಲಿ ನೆರವೇರಿತ್ತು. ನೂತನ ಶಾಖಾ ಮಠದ ಉದ್ಘಾಟನೆಯು ಶ್ರೀ ಸುಜಯನಿಧಿತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನೆರವೇರಲಿದೆ. ಮುಂದಿನ 15 ದಿನಗಳಲ್ಲಿ ಶ್ರೀ ಕೇಶವನಿಧಿ ಶ್ರೀಪಾದರ ಆರಾಧನೆ ನಡೆಯಲಿದ್ದು, ಶಾಖಾ ಮಠದ ಕಟ್ಟಡದ ಉದ್ಘಾಟನೆಯನ್ನು ಆರಾಧನೆ ದಿನದ ಸಮೀಪವಾಗಿಯೇ ಲೋಕರ್ಪಣೆಗೊಳಿಸಲಾಗುತ್ತಿದೆ. ಜ. 16ರಂದು ಪರ್ಯಾಯ ಶ್ರೀ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಮಠದ ಕಟ್ಟಡದ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಮಠದ ವ್ಯವಸ್ಥಾಪಕ ಲಕ್ಷ್ಮೀನಾರಾಯಣ ಆಚಾರ್ಯ ತಿಳಿಸಿದ್ದಾರೆ.

ವಾದಿರಾಜರ ಸ್ನೇಹದ ಕುರುಹು
400 ವರ್ಷಗಳ ಹಿಂದೆ ಶ್ರೀಪಾದರಾಜ ಮಠದ ಶ್ರೀ ಹಯಗ್ರೀವತೀರ್ಥ ಶ್ರೀಪಾದರು, ರಾಘವೇಂದ್ರ ಮಠದ
ವಿಜಯೀಂದ್ರ ತೀರ್ಥ ಶ್ರೀಪಾದರು ವಾದಿರಾಜ ಶ್ರೀಪಾದರ ಪರ್ಯಾ ಯೋತ್ಸವಕ್ಕೆ ಉಡುಪಿಗೆ ಆಗಮಿಸಿದ್ದ ಸಂದರ್ಭ ಸ್ನೇಹದ ಕುರುಹು ಆಗಿ ಘಟ್ಟದ ಮೇಲಿನ ಮಠಗಳಾದ ಶ್ರೀಪಾದರಾಜರ ಮಠ (ಮುಳಬಾಗಿಲು ಮಠ), ಶ್ರೀ ವ್ಯಾಸ ರಾಜ ಮಠ, ಶ್ರೀ ರಾಘವೇಂದ್ರ ಮಠ (ಕುಂಭಕೋಣ ಮಠ), ಶ್ರೀ ಉತ್ತರಾದಿ ಮಠಕ್ಕೆ ರಥಬೀದಿಯಲ್ಲಿ ಜಾಗವನ್ನು ವಾದಿರಾಜ ತೀರ್ಥರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next