Advertisement

ಉಡುಪಿ ದ್ವಿಶತಕ; ಕೋವಿಡ್ ಸರ್ವಾಧಿಕ ; ರಾಜ್ಯದಲ್ಲಿ ಒಂದೇ ದಿನ 515 ಸೋಂಕು

06:55 AM Jun 06, 2020 | Hari Prasad |

ಉಡುಪಿ: ಕೋವಿಡ್ ಆಟ ಆರಂಭವಾದ ಬಳಿಕ ಶುಕ್ರವಾರ ಉಡುಪಿ ಜಿಲ್ಲೆಯದು ಸರ್ವಾಧಿಕ ಗಳಿಕೆ.

Advertisement

ಶುಕ್ರವಾರ ಜಿಲ್ಲೆಯಲ್ಲಿ 204 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಒಟ್ಟು 768 ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ದ್ವಿತೀಯ ಸ್ಥಾನದಲ್ಲಿ ಕಲಬುರಗಿ ಇದ್ದು, ಅಲ್ಲಿ 552 ಪ್ರಕರಣ ದೃಢಪಟ್ಟಿವೆ.

ಗುರುವಾರ ಉಡುಪಿಯಲ್ಲಿ 92 ಪ್ರಕರಣಗಳು ದಾಖಲಾಗಿ ಒಟ್ಟು ಪ್ರಕರಣಗಳ ಸಂಖ್ಯೆ 564ರಲ್ಲಿದ್ದರೆ, ಕಲಬುರಗಿಯಲ್ಲಿ ಒಂದೂ ಪ್ರಕರಣ ಇಲ್ಲದೆ ಒಟ್ಟು ಪ್ರಕರಣ 510 ಇತ್ತು. ಆಗ ಎರಡೂ ಜಿಲ್ಲೆಗಳ ಅಂತರ 54 ಆಗಿದ್ದರೆ, ಶುಕ್ರವಾರ ಈ ಅಂತರ 216ಕ್ಕೇರಿದೆ.

ಉಡುಪಿಯಲ್ಲಿ ಶುಕ್ರವಾರದ ಪ್ರಕರಣಗಳಲ್ಲಿ 203 ಕೂಡ ಮಹಾರಾಷ್ಟ್ರದಿಂದ ಬಂದವರು. ಒಬ್ಬರು ಚೆಕ್‌ ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್‌ ಸಿಬಂದಿ.

ಮೊದಲ ಸ್ಥಾನ ಮುಂದುವರಿಕೆ
ಅತೀ ಹೆಚ್ಚು ಪ್ರಕರಣ ಪತ್ತೆ ವಿಚಾರದಲ್ಲಿ ಉಡುಪಿ ಜಿಲ್ಲೆ ಜೂ. 2ರಂದು ಮೊದಲ ಬಾರಿ ಮೊದಲ ಸ್ಥಾನ ಕ್ಕೇರಿತ್ತು. ಈಗ ಮೂರನೆಯ ಬಾರಿಗೆ ಅದೇ ಸ್ಥಾನದಲ್ಲಿ ಮುಂದುವರಿದಿದೆ. ಜಿಲ್ಲೆಯಲ್ಲಿ ಇದುವರೆಗೆ 768 ಪ್ರಕರಣಗಳು ವರದಿಯಾಗಿದ್ದು, 132 ಮಂದಿ ಗುಣ ಹೊಂದಿದ್ದಾರೆ. 634 ಸಕ್ರಿಯ ಪ್ರಕರಣಗಳಿವೆ.

Advertisement

ರಾಜ್ಯದ ಮಟ್ಟಿಗೂ ಈ ಶುಕ್ರವಾರದ್ದು ದಾಖಲೆ ಪ್ರಮಾಣದ ಸೋಂಕು ಪತ್ತೆ. ಈ ಹಿಂದೆ ಮೇ 31ರಂದು 299 ಪ್ರಕರಣಗಳು ದೃಢವಾಗಿದ್ದವು. ಜೂ.2ರಂದು 388 ಮಂದಿಗೆ ಸೋಂಕು ದೃಢವಾಗಿದ್ದರೆ ಜೂ.3ರಂದು 267 ಪ್ರಕರಣಗಳು ದಾಖಲಾಗಿದ್ದವು.

ಈ ಹಿಂದೆ ಒಂದೇ ದಿನ ಅತೀ ಹೆಚ್ಚು ಪ್ರಕರಣ 388 ಆಗಿದ್ದರೆ ಶುಕ್ರವಾರ ಇದು 515 ಆಗಿದೆ. ಗುರುವಾರ 257 ಪ್ರಕರಣಗಳು ದೃಢಪಟ್ಟಿದ್ದರೆ ಶುಕ್ರವಾರ ಅದಕ್ಕಿಂತ 258 ಹೆಚ್ಚುವರಿ ಪ್ರಕರಣಗಳು ವರದಿಯಾಗಿವೆ. ಎಲ್ಲ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲು ನಿರ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದ್ದಾರೆ.

ಒಂದೆರಡು ದಿನ ಇದೇ ಪ್ರಮಾಣ ಸಾಧ್ಯತೆ
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ 12,528 ಮಾದರಿಗಳಲ್ಲಿ769 ಮಾದರಿಗಳ ವರದಿ ಮಾತ್ರ ಬರಲು ಬಾಕಿ ಇದೆ. ಶುಕ್ರವಾರ 767 ನೆಗೆಟಿವ್‌ ಪ್ರಕರಣ ಮತ್ತು ಇದುವರೆಗೆ ಒಟ್ಟು 10,992 ನೆಗೆಟಿವ್‌ ಪ್ರಕರಣ ವರದಿಯಾಗಿದೆ. ಈ ಲೆಕ್ಕಾಚಾರದಲ್ಲಿ ಇನ್ನು ಒಂದೆರಡು ದಿನ ಮಾತ್ರ ಇದೇ ಪ್ರಮಾಣದಲ್ಲಿ ಪಾಸಿಟಿವ್‌ ವರದಿಯಾಗಬಹುದು. ಅನಂತರ ಪಾಸಿಟಿವ್‌ ವರದಿಗಳ ಪ್ರಮಾಣ ಕಡಿಮೆಯಾಗಲಿದೆ.

ಗುರುವಾರ ಉಡುಪಿ ಜಿಲ್ಲೆಗೆ ರೈಲಿನಲ್ಲಿ ಸುಮಾರು 200 ಜನರು ಆಗಮಿಸಿದ್ದು ಶುಕ್ರವಾರ 374 ಜನರು ಬಂದಿದ್ದಾರೆ. ಇವರಲ್ಲಿ 367 ಮಹಾರಾಷ್ಟ್ರದವರು. ಮಹಾರಾಷ್ಟ್ರದಿಂದ ಬಂದವರಿಗೆ ಏಳು ದಿನ ಸಾಂಸ್ಥಿಕ ಕ್ವಾರಂಟೈನ್‌ ಮತ್ತು ಉಳಿದವರಿಗೆ ಮನೆ ಕ್ವಾರಂಟೈನ್‌ ವಿಧಿಸಲಾಗುತ್ತದೆ.

ದುಬಾೖಯಿಂದ ಬಂದಿದ್ದ ಗರ್ಭಿಣಿಗೆ ನೆಗೆಟಿವ್‌
ಕಟಪಾಡಿ: ದುಬಾೖಯಿಂದ ಮರಳಿ ಉಡುಪಿಯಲ್ಲಿ ಕ್ವಾರಂಟೈನ್‌ ಮುಗಿಸಿ ಮನೆಗೆ ಬಂದಿದ್ದ ಗರ್ಭಿಣಿಯೊಬ್ಬರನ್ನು ಕೋವಿಡ್ ಪಾಸಿಟಿವ್‌ ವರದಿ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮತ್ತೆ ವರದಿ ನೆಗೆಟಿವ್‌ ಬಂದ ಹಿನ್ನೆಲೆಯಲ್ಲಿ ಜೂ. 5ರಂದು ಮನೆಗೆ ಹಿಂದಿರುಗಿರುತ್ತಾರೆ ಎಂದು ಕಾಪು ತಹಶೀಲ್ದಾರ್‌ ತಿಳಿಸಿದ್ದಾರೆ. ಕೋಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಟ್ಟು ವಿಷ್ಣುಮೂರ್ತಿ ದೇವಸ್ಥಾನದ ಪರಿಸರದಲ್ಲಿ ಸೀಲ್‌ಡೌನ್‌ ನಡೆಸಲಾಗಿತ್ತು.

ಉಡುಪಿ ಜಿಲ್ಲೆ: 79 ಪ್ರದೇಶ ಸೀಲ್‌ಡೌನ್‌
ಸರಕಾರದ ಸುತ್ತೋಲೆ ಪ್ರಕಾರ 7 ದಿನಗಳ ಕ್ವಾರಂಟೈನ್‌ ಅವಧಿ ಪೂರೈಸಿದವರಲ್ಲಿ ಯಾವುದೇ ರೋಗ ಲಕ್ಷಣ ಇಲ್ಲದಿದ್ದರೆ ಅವರು ಹೋಂ ಕ್ವಾರಂಟೈನ್‌ಗೆ ತೆರಳಬಹುದು. ಮಾದರಿ ಪರೀಕ್ಷೆಯ ವರದಿ ಬಾರದಿದ್ದರೂ ಅವಧಿ ಮುಗಿದ ಕಾರಣ ಮನೆಗೆ ತೆರಳಿದ ಹಲವು ಮಂದಿ ಅವರಲ್ಲಿದ್ದಾರೆ. ಆ ಬಳಿಕ ವರದಿ ಪಾಸಿಟಿವ್‌ ಬಂದಿರುವುದರಿಂದ ಜಿಲ್ಲೆಯಲ್ಲಿ 79 ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.

ಸೀಲ್‌ಡೌನ್‌ ಪ್ರದೇಶಗಳು
ಕಾಪು ತಾಲೂಕಿನ ಪಾಂಗಳದ ಬಳಿ, ನಡ್ಪಾಲು ಗ್ರಾಮ, ಮಟ್ಟು, ಮೂಡಬೆಟ್ಟು, ಬೈಂದೂರಿನ ನಾಡಾ, ನಾವುಂದ, ಕುಂದಾಪುರದ ಹಕ್ಲಾಡಿ, ಹಕ್ಲೂರು, ಹೆಮ್ಮಾಡಿ, ಗಂಗೊಳ್ಳಿ, ದೇವಲ್ಕುಂದ, ಬಳ್ಕೂರು, ಕುಂದಬಾರಂದಾಡಿ, ಉಡುಪಿಯ ಮಠದಬೆಟ್ಟು ಬಳಿಯ ಮನೆ, ಸಂತೆಕಟ್ಟೆ ಬಳಿಯ ಅಪಾರ್ಟ್‌ಮೆಂಟ್‌, ಸುಬ್ರಹ್ಮಣ್ಯ ನಗರದ ಬಬ್ಬುಸ್ವಾಮಿ ದೈವಸ್ಥಾನದ ಬಳಿಯ ಮನೆ, ದೊಡ್ಡಣಗುಡ್ಡೆಯ ನೇಕಾರ ಕಾಲನಿ, ಮಲ್ಪೆಯ ಕೊಪ್ಪಲತೋಟ ಬಳಿಯ ಮನೆ ಸಹಿತ ವಿವಿಧ ತಾಲೂಕುಗಳಲ್ಲಿ ಹಲವಾರು ಮನೆಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.
ಪೆರ್ಡೂರು ಗ್ರಾ.ಪಂ.ನ ಹೆರ್ಡೆಕಟ್ಟೆ, ಉಜಿರೆ ಬೈಲು, ಹೆಬ್ರಿ ಗ್ರಾ. ಪಂ.ನ ಸೇಳಂಜೆ, ಮಡಾಮಕ್ಕಿ ಕಾಸಾನುಮಕ್ಕಿಯಲ್ಲಿ ತಲಾ 1 ಮನೆ, ಮುದ್ರಾಡಿಯಲ್ಲಿ 2 ಮನೆಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.

ಇಟಲಿ ಮೀರಿಸಿದ ಭಾರತ
ಜಾಗತಿಕವಾಗಿ ಪ್ರಕರಣ ಸಂಖ್ಯೆಯಲ್ಲಿ ಭಾರತವು ಇಟಲಿಯನ್ನು ಮೀರಿಸಿ, 6ನೇ ಸ್ಥಾನಕ್ಕೆ ತಲುಪಿದೆ. ಶುಕ್ರವಾರ ದೇಶದಲ್ಲಿ 8,818ಕ್ಕೂ ಹೆಚ್ಚು ಪ್ರಕರಣ ದೃಢ ಪಟ್ಟಿವೆ. ಈ ಮೂಲಕ ಒಟ್ಟು ಸಂಖ್ಯೆ 2.35 ಲಕ್ಷ ದಾಟಿದೆ. ಇಟಲಿಯದ್ದು 2.34 ಲಕ್ಷ.

Advertisement

Udayavani is now on Telegram. Click here to join our channel and stay updated with the latest news.

Next