ಉಡುಪಿ: ಜಿಲ್ಲೆಯ ದೇವಸ್ಥಾನಗಳಲ್ಲಿ ರಾಮೋತ್ಸವ, ಮನೆ ಮನೆಗಳಲ್ಲಿ ದಿನವಿಡೀ ದೀಪಾವಳಿ ಸಂಭ್ರಮ. ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆಯ ಕೈಂಕರ್ಯ ಆರಂಭವಾಗುತ್ತಿದ್ದಂತೆ ಜಿಲ್ಲೆಯ ದೇವಸ್ಥಾನ, ಭಜನ ಮಂದಿರ, ಧಾರ್ಮಿಕ ಕೇಂದ್ರಗಳಲ್ಲೂ ಶ್ರೀ ದೇವರ ಆರಾಧನೆ ಆರಂಭವಾಗಿತ್ತು.
ದೇವರಿಗೆ ವಿಶೇಷ ಅಲಂಕಾರ, ದೇವಸ್ಥಾನಕ್ಕೆ ಬಗೆಬಗೆಯ ಹೂವಿನ ಸಿಂಗಾರ, ಊರಿನ ಬೀದಿ ಬೀದಿಗಳಲ್ಲಿ ಕೇಸರಿ ಪತಾಕೆ, ಶ್ರೀ ರಾಮ ದೇವರ ಚಿತ್ರವಿರುವ ಬಾವುಟಗಳು ಎಲ್ಲೆಡೆ ರಾರಾಜಿಸುವ ದೃಶ್ಯ ಸಾಮಾನ್ಯವಾಗಿತ್ತು. ಸಂಜೆ ದೀಪೋತ್ಸವ, ಉತ್ಸವ, ರಥೋತ್ಸವ ಹೀಗೆ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆಯನ್ನು ಊರ ಹಬ್ಬದಂತೆ ಸಂಭ್ರಮದಿಂದ ಆಚರಿಸಲಾಗಿದೆ.
ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಕರಸೇವಕರಿಗೆ ಸಮ್ಮಾನ ನರೆವೇರಿಸಿದರು. ಇದೇ ರೀತಿಯಲ್ಲಿ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲೂ ಕರಸೇವಕರಿಗೆ ಸಮ್ಮಾನ ಮಾಡಲಾಗಿತ್ತು.
ರಿಕ್ಷಾ, ಟ್ಯಾಕ್ಸಿ, ಬಸ್ ಸೇರಿದಂತೆ ವಾಹನಗಳಿಗೆ ಸ್ವಯಂ ಪ್ರೇರಿತವಾಗಿ ಕೇಸರಿ ಬಾವುಟ ಕಟ್ಟಿದ್ದರು. ರಿಕ್ಷಾ ನಿಲ್ದಾಣಗಳನ್ನು ಹೂವಿನಿಂದ ಸಿಂಗರಿಸಿದ್ದರು. ಮಕ್ಕಳಿಗೆ ದೇವರ ವೇಷ ಧರಿಸಿದ್ದರು. ಕೆಲವೆಡೆ ಸಿಹಿ ತಿಂಡಿ, ಲಡ್ಡು, ಹಾಲು ಪಾಯಸ, ಪಾನಕ, ಕೊಸಂಬರಿ ಇತ್ಯಾದಿಗಳನ್ನು ಭಕ್ತರಿಗೆ ವಿತರಿಸಲಾಗಿದೆ.
ಮನೆಗಳಲ್ಲಿ ಸಂಭ್ರಮ: ಸಂಜೆಯ ಬಳಿಕ ಜಿಲ್ಲೆಯಾದ್ಯಂತ ವಿವಿಧ ಮನೆಗಳು, ಅಪಾರ್ಟ್‌ಮೆಂಟ್‌ಗಳಲ್ಲಿ ದೀಪ ಹಚ್ಚುವ ಮೂಲಕ “ದೀಪಾವಳಿ’ ಸಂಭ್ರಮಾಚರಣೆ ನಡೆಯಿತು. ಕೆಲವು ಖಾಸಗಿ ಬಸ್‌ಗಳು, ಆಟೋರಿಕ್ಷಾಗಳು ಉಚಿತ ಸೇವೆ ನೀಡಿದರು. ಕೆಲವು ಅಂಗಡಿ ಮಾಲಕರು ಸ್ವಯಂಕೃತವಾಗಿ ಅಂಗಡಿಗಳನ್ನು ಮುಚ್ಚವ ಮೂಲಕ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಾ ದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು. ಜ. 21ರಂದು ರಾತ್ರಿ ಫ್ಲೆಕ್ಸ್ ಹರಿದ ವಿಚಾರಕ್ಕೆ ಸಂಬಂಧಿಸಿದಂತೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.