Advertisement

Udupi: ಸಹಪಾಠಿ ಶ್ರೀಪಾದರೊಂದಿಗೆ ಜನ್ಮ ನಕ್ಷತ್ರ ಆಚರಿಸಿದ ಪುತ್ತಿಗೆ ಶ್ರೀ

06:11 PM Sep 10, 2024 | Team Udayavani |

ಉಡುಪಿ: ತಮ್ಮೆಲ್ಲ ಸಾಧನೆಗಳಿಗೆ ಸ್ಫೂರ್ತಿದಾಯಕರಾಗಿ ಶ್ರೀ ವಿಬುಧೇಶತೀರ್ಥರ ನೆನಪಲ್ಲಿ ವಿಶ್ವಪ್ರಿಯರನ್ನು, ಗುರು ವಿದ್ಯಾಮಾನ್ಯರ ಪ್ರತೀಕರಾಗಿ ಶ್ರೀ ವಿದ್ಯೇಶತೀರ್ಥರನ್ನು ಕಾಣುತ್ತಿದ್ದೇವೆ. ಇವರಿಬ್ಬರ ಆಶೀರ್ವಾದ ಫಲವನ್ನು ಇಲ್ಲಿ ನೋಡುತ್ತಿದ್ದೇವೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನುಡಿದರು.

Advertisement

ಶ್ರೀಕೃಷ್ಣ ಮಠದಲ್ಲಿ ಜರಗಿದ ಪುತ್ತಿಗೆ ಶ್ರೀಪಾದರು ತಮ್ಮ 63ನೇ ಜನ್ಮನಕ್ಷತ್ರ ಕಾರ್ಯಕ್ರಮದಲ್ಲಿ ಸಹಪಾಠಿಗಳಾದ ಶ್ರೀ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರನ್ನು ಗಂಧಾದ್ಯುಪಚಾರಗಳಿಂದ ಗೌರವಿಸಿ ತಮ್ಮ ವಿದ್ಯಾಭ್ಯಾಸ ಕಾಲವನ್ನು ಸ್ಮರಿಸಿದರು.

ಪರ್ಯಾಯ ಮಠದ ವತಿಯಿಂದ ದಿವಾನರಾದ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯರು ಅದಮಾರು ಮತ್ತು ಭಂಡಾರಕೇರಿ ಶ್ರೀಪಾದರನ್ನು ಮಾಲಿಕೆ ಮಂಗಳಾರತಿ ಮಾಡಿ ಸಂಸ್ಥಾನ ಗೌರವ ಅರ್ಪಿಸಿದರು. ಪರ್ಯಾಯ ಶ್ರೀಪಾದರು ಗಂಧಾದ್ಯುಪಚಾರಗಳನ್ನು ಮಾಡಿ ಇತರರನ್ನೂ ಸತ್ಕರಿಸಿದರು.

ಆದಮಾರು ಶ್ರೀಪಾದರು ಶ್ರೀ ಪುತ್ತಿಗೆ ಶ್ರೀಗಳನ್ನು ಸಮ್ಮಾನಿಸಿ, ಶ್ರೀಪಾದರು ವಿಶ್ವಂಭರನೆನಿಸಿದ ಗಣೇಶನ ಹಬ್ಬದ ದಿನಗಳ ಮಧ್ಯೆ ಹುಟ್ಟಿದ್ದರಿಂದ ವಿಶ್ವದಾದ್ಯಂತ ಧರ್ಮಪ್ರಚಾರ ಮಾಡುತ್ತಾ ವಿಶ್ವಂಭರನ ಕೃಪೆಗೆ ಪಾತ್ರರಾಗಿದ್ದಾರೆ. ಅವರ ಸಾಧನೆ ಇನ್ನಷ್ಟು ಉತ್ತುಂಗಕ್ಕೇರಲಿ ಎಂದು ಅನುಗ್ರಹಿಸಿದರು.

Advertisement

ಭಂಡಾರಕೇರಿ ಶ್ರೀಪಾದರು ಪುತ್ತಿಗೆ ಶ್ರೀಗಳನ್ನು ಗೌರವಿಸಿ, ಶ್ರೀಗಳ ಬಾಲ್ಯ ಸಾಧನೆಗಳನ್ನು ನೆನಪಿಸಿದರು. ಧರ್ಮ ಪ್ರಚಾರವನ್ನು ಶ್ರೀಪಾದರು ಸುಗುಣ ವಿದ್ಯಾಪೀಠ ಮತ್ತು ಸುಗುಣಮಾಲಾ ಪತ್ರಿಕೆಗಳ ರೂಪದಲ್ಲಿ  ಅತ್ಯಂತ ವ್ಯವಸ್ಥಿತವಾಗಿ ನಡೆಸುತ್ತಿರುವುದನ್ನು ಶ್ಲಾಘನೀಯ ಎಂದರು.

ಪುತ್ತಿಗೆ ಕಿರಿಯ ಯತಿ ಶ್ರೀ ಸುಶ್ರಿಂದ್ರತೀರ್ಥ ಶ್ರೀಪಾದರು ಮಾತನಾಡಿ, ಗುರುಗಳು 63ರಂತೆ ಇಲ್ಲದೆ 36 ವರ್ಷದಂತೆ ಯುವ ಉತ್ಸಾಹದಲ್ಲಿ ಕರ್ತವ್ಯಗಳನ್ನು ನಡೆಸುತ್ತಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಅವರ ಅನುಗ್ರಹದಿಂದ ನಾವು ಸಾಧನೆ ಮಾಡುವಂತಾಗಲಿ ಎಂದು ಪ್ರಾರ್ಥಿಸಿದರು.

ಗುರುಗಳಿಗೆ ಪುಷ್ಪದ ಕಿರೀಟ ತೊಡಿಸಿದರು.

ಶ್ರೀಪಾದರಿಗೆ ಶ್ರೀ ಪುತ್ತಿಗೆ ವಿದ್ಯಾಪೀಠದ ಹಳೇ ವಿದ್ಯಾರ್ಥಿಗಳು, ಮಠದ ಸಿಬಂದಿ ಮಾಲಿಕೆ ಮಂಗಳಾರತಿಯೊಂದಿಗೆ ವಿಶೇಷ ಗೌರವ ಅರ್ಪಿಸಿದರು. ಶ್ರೀಪಾದರ ಎರಡು ಕೃತಿಗಳನ್ನು ಅದಮಾರು ಶ್ರೀಪಾದರು, ಭಂಡಾರಕೇರಿ ಶ್ರೀಪಾದರು ಬಿಡುಗಡೆಗೊಳಿಸಿದರು. ಕೃತಿ ಸಂಗ್ರಹ ಮಾಡಿ ಪ್ರಕಟಿಸಲು ಶ್ರಮಿಸಿದ ಓಂಪ್ರಕಾಶ ಭಟ್ಟರನ್ನು ಶ್ರೀಪಾದರು ಗೌರವಿಸಿದರು.

ವಿದ್ವಾಂಸರು, ಶ್ರೀ ಪುತ್ತಿಗೆ ವಿದ್ಯಾಪೀಠದ ಹಳೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶ್ರೀಮಠದ ವಿದ್ವಾಂಸ ಡಾ| ಬಿ. ಗೋಪಾಲಾಚಾರ್ಯ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next