Advertisement

ನಿಯಮ ಉಲ್ಲಂಘಿಸುವ ವಾಹನ ಮುಟ್ಟುಗೋಲು: ಎಸ್‌ಪಿ 

04:00 AM Nov 17, 2018 | Team Udayavani |

ಉಡುಪಿ: ಕರ್ಕಶ ಹಾರನ್‌ ಬಳಕೆ, ಟಿಂಟೆಡ್‌ ಗ್ಲಾಸ್‌ ಅಳವಡಿಕೆ ಸೇರಿದಂತೆ ಮೋಟಾರು ವಾಹನ ಕಾಯಿದೆಯನ್ನು ಉಲ್ಲಂಘಿಸುವ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು ಎಂದು ಉಡುಪಿ ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ ತಿಳಿಸಿದ್ದಾರೆ. ಶುಕ್ರವಾರದಂದು ತನ್ನ ಕಚೇರಿಯಲ್ಲಿ ನೇರ ಪೋನ್‌-ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರು-ಸಲಹೆಗಳನ್ನು ಆಲಿಸಿದ ಅನಂತರ ಅವರು ಪತ್ರಕರ್ತರಿಗೆ ಮಾಹಿತಿ ನೀಡಿದರು.

Advertisement

‘ಕರ್ಕಶ ಹಾರನ್‌, ಟಿಂಟೆಡ್‌ ಗ್ಲಾಸ್‌ಗಳ ಬಳಕೆ, ಬೈಕ್‌ಗಳಲ್ಲಿ ಅದರಲ್ಲೂ ಮುಖ್ಯವಾಗಿ ಬುಲೆಟ್‌ಗಳಲ್ಲಿ ತೀವ್ರ ಶಬ್ದದ ಸೈಲೆನ್ಸರ್‌ ಬಳಕೆ ವಿರುದ್ಧ ಈಗಾಗಲೇ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಅನಂತರ ದಂಡ ವಿಧಿಸಿ ಪದೇ ಪದೇ ಎಚ್ಚರಿಕೆ ನೀಡಲಾಗಿದೆ. ಆದರೂ ನಿಯಮ ಉಲ್ಲಂಘನೆ ಪುನರಾವರ್ತನೆಯಾಗುತ್ತಿದೆ. ಹಾಗಾಗಿ ಇನ್ನು ಮುಂದೆ ಇಂತಹ ವಾಹನಗಳನ್ನು ಮುಟ್ಟುಗೋಲು ಹಾಕಿ ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು. ವಾಹನದ ಮಾಲಕರು ನ್ಯಾಯಾಲಯದಲ್ಲಿಯೇ ದಂಡ ಪಾವತಿಸಿ ವಾಹನ ವಾಪಸ್ಸು ಪಡೆಯಬೇಕಾಗುತ್ತದೆ ಎಂದು ತಿಳಿಸಿದರು. ಈ ಬಗ್ಗೆ ಕೂಡಲೇ ಕಾರ್ಯಾಚರಣೆ ಆರಂಭಿಸುವಂತೆ ಅವರು ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೀಟ್‌ ಪೊಲೀಸರಿಗೆ ಹೆಚ್ಚು ಜವಾಬ್ದಾರಿ
ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ಬೀಟ್‌ ಪೊಲೀಸ್‌ ವ್ಯವಸ್ಥೆ ಹೆಚ್ಚು ಪರಿಣಾಮಕಾರಿಯಾಗಿ ನಡೆಯುತ್ತಿದೆ. ಸ್ಥಳೀಯವಾದ ಯಾವುದೇ ವಿಚಾರಗಳ ಕುರಿತಾಗಿ ಮೊದಲಾಗಿ ಅಲ್ಲಿನ ಬೀಟ್‌ ಪೊಲೀಸ್‌ರಿಗೆ ಜವಾಬ್ದಾರಿ ನೀಡಲಾಗುತ್ತಿದೆ. ಇದರಿಂದಾಗಿ ಜನರೊಂದಿಗೆ ಉತ್ತಮ ಸಂಪರ್ಕ ಕೂಡ ಸಾಧ್ಯವಾಗಿದೆ ಎಂದು ಎಸ್‌ಪಿ ತಿಳಿಸಿದರು.

ಒಳಚರಂಡಿ ಅವ್ಯವಸ್ಥೆ, ಆಟೋ ಚಾಲಕರ ಸಮಸ್ಯೆ, ಚೌಳಿ ಕೆರೆಗೆ ತಡೆಗೋಡೆ ನಿರ್ಮಾಣ ಮೊದಲಾದ ಪೊಲೀಸ್‌ ಇಲಾಖೆಗೆ ನೇರವಾಗಿ ಸಂಬಂಧಪಡದ ವಿಚಾರಗಳು ಕೂಡ ಪ್ರಸ್ತಾಪವಾದವು. ಈ ಕುರಿತು ಸಂಬಂಧಿಸಿದ ಇಲಾಖೆಗಳೊಂದಿಗೆ ಕೂಡಲೇ ಸಂವಹನ ನಡೆಸಿ ತನ್ನಿಂದಾದ ಪ್ರಯತ್ನ ಮಾಡುವುದಾಗಿ ಎಸ್‌ಪಿ ಭರವಸೆ ನೀಡಿದರು. ಯಡ್ತಾಡಿಯಲ್ಲಿ ರಸ್ತೆಗೆ ಬಾಗಿದ ಒಣಗಿದ ಮರದಿಂದ ಉಂಟಾಗಬಹುದಾದ ಅಪಾಯದ ಕುರಿತು ಮೂರನೇ ಬಾರಿಗೆ ಸ್ಥಳೀಯರೊಬ್ಬರು ಕರೆ ಮಾಡಿದರು. 

ಹೆಲ್ಮೆಟ್‌ ರಹಿತ ಸವಾರಿ: 1,949 ಪ್ರಕರಣ
ಕಳೆದ ಅ.26ರಿಂದ ನ.15ರ ವರೆಗೆ ಜಿಲ್ಲೆಯಲ್ಲಿ ಹೆಲ್ಮೆಟ್‌ ರಹಿತವಾಗಿ ದ್ವಿಚಕ್ರ ಓಡಿಸಿದ 1,949 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಟ್ಕಾ ವಿರುದ್ಧ 5 ಪ್ರಕರಣ ದಾಖಲಿಸಿ 5 ಮಂದಿಯನ್ನು, ಇಸ್ಪೀಟು ಜುಗಾರಿಗೆ ಸಂಬಂಧಿಸಿ 40 ಮಂದಿಯನ್ನು, ಅಕ್ರಮ ಮದ್ಯ ಪ್ರಕರಣದಲ್ಲಿ ಒಬ್ಬರನ್ನು ಬಂಧಿಸಲಾಗಿದೆ. 4 ಎನ್‌ಡಿಪಿಎಸ್‌, 52 ಕೋಟಾ³ ಪ್ರಕರಣ, ಕುಡಿದು ವಾಹನ ಚಲಾಯಿಸಿದ 22 ಮಂದಿ ವಿರುದ್ಧ, ಕರ್ಕಶ ಹಾರನ್‌ ಬಳಕೆ ಮಾಡಿರುವುದಕ್ಕೆ 120 ಪ್ರಕರಣ, ಚಾಲನೆ ವೇಳೆ ಮೊಬೈಲ್‌ ಬಳಸಿರುವ 49 ಮಂದಿ ವಿರುದ್ಧ, ಅತಿ ವೇಗದ ಚಾಲನೆ ಮಾಡಿದ 61 ಮಂದಿ ವಿರುದ್ಧ ಹಾಗೂ ಇತರ ಮೋಟಾರು ವಾಹನಗಳ ಕಾಯಿದೆ ಉಲ್ಲಂಘನೆಯಾಗಿರುವುದಕ್ಕೆ ಒಟ್ಟು 2,702 ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ತಿಳಿಸಿದರು.

Advertisement

ಸುಳ್ಳು ದೂರು!
ಕಳೆದ ಪೋನ್‌-ಇನ್‌ನಲ್ಲಿ ಕಾರ್ಕಳ ಕಲ್ಲು ಕುಂಟಾಡಿಯ ಮಾಜಿ ಜನಪ್ರತಿನಿಧಿಯೋರ್ವರ ವಿರುದ್ಧ ಅಕ್ರಮ ಸಾರಾಯಿ ಮಾರಾಟ ಕುರಿತು ನೀಡಿರುವ ದೂರು ಸುಳ್ಳು ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಎಸ್‌ಪಿ ಇದೇ ಸಂದರ್ಭದಲ್ಲಿ ತಿಳಿಸಿದರು.

ದೂರು-ದುಮ್ಮಾನ
– ಉಡುಪಿ ಸಿಟಿ ಬಸ್‌ ನಿಲ್ದಾಣ ಪ್ರವೇಶಿಸುವ ಬಸ್‌ಗಳು ಅತ್ಯಂತ ವೇಗ ಮತ್ತು ಅಜಾಗರೂಕತೆಯಿಂದ ನುಗ್ಗುತ್ತವೆ. ಪ್ರಯಾಣಿಕರು ದಿಕ್ಕಾಪಾಲಾಗಿ ಓಡುವಂತಾಗುತ್ತದೆ. ಕರ್ಕಶ ಹಾರನ್‌ ಹಾವಳಿಯೂ ಹೆಚ್ಚಾಗಿದೆ. ನಿಲ್ದಾಣ ಪ್ರವೇಶಿಸುವಲ್ಲಿ ಹಂಪ್ಸ್‌ಗಳನ್ನು ಹಾಕಿ.

– ಉದ್ಯಾವರ ಪಡುಕರೆಯಲ್ಲಿ ಕಡಲ್ಕೊರೆತ ತಡೆಗೆ ಕಲ್ಲುಗಳನ್ನು ಸಾಗಿಸುವ ಲಾರಿಗಳನ್ನು ರಸ್ತೆಯಲ್ಲೇ ನಿಲ್ಲಿಸುವುದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

– ಮಣಿಪಾಲ ಸಿಂಡಿಕೇಟ್‌ ಸರ್ಕಲ್‌ ಬಳಿ ಉಡುಪಿ ಕಡೆಗೆ ಬರುವ ಬಸ್‌ಗಳನ್ನು ಬಸ್‌ ನಿಲ್ದಾಣದಲ್ಲಿ ನಿಲ್ಲಿಸದೆ ಮನೋಹರ ವೈನ್ಸ್‌ ಬಳಿ ನಿಲ್ಲಿಸುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. 

– ಮೀನು ಸಾಗಾಟದ ಲಾರಿಗಳು ರಸ್ತೆಯುದ್ದಕ್ಕೂ ನೀರು ಚೆಲ್ಲಿಕೊಂಡು ಹೋಗುತ್ತಿವೆ.

– ಕೋಟ ಬೇಳೂರು ಗ್ರಾಮದಲ್ಲಿ ಇತ್ತೀಚೆಗೆ ಕಳ್ಳತನ ಯತ್ನ ನಡೆದಿದೆ. ರಾತ್ರಿ ರೌಂಡ್ಸ್‌ ಸಮರ್ಪಕವಾಗಿ ಮಾಡಬೇಕು. ಈ ಭಾಗದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು ಗುಂಡಿಗಳಿಗೆ ತಡೆಗೋಡೆ ಹಾಕಿಲ್ಲ.

– ಉಡುಪಿ-ಮಣಿಪಾಲ ರಸ್ತೆಯಲ್ಲಿ  ಪ್ರಖರ ಬೆಳಕಿನ ಬಲ್ಬ್ ಅಳವಡಿಸಿದ ವಾಹನಗಳ ಓಡಾಟ ಹೆಚ್ಚಾಗಿದೆ.

– ಇಂದ್ರಾಳಿ ಶಾಲೆ ಬಳಿ ಮೇಲ್ಸೇತುವೆ ನಿರ್ಮಿಸಬೇಕು.

– ಉಡುಪಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ವೇಶ್ಯಾವಾಟಿಕೆ, ಕುಡುಕರ ಹಾವಳಿ ಇದೆ.

– ಬ್ರಹ್ಮಾವರ ದೂಪದಕಟ್ಟೆ, ಕೃಷ್ಣ ಡೈರಿ ಮೊದಲಾದೆಡೆ ವಿರುದ್ಧ ದಿಕ್ಕಿನಲ್ಲಿ ವಾಹನಗಳು ಸಂಚರಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next