ಉಡುಪಿ: ಕಿನ್ನಿಮೂಲ್ಕಿಯ ಸ್ವಾಗತಗೋಪುರ ಸುಮಾರು 30 ವರ್ಷಗಳ ಬಳಿಕವೂ ಉಡುಪಿಯ ಹೆಗ್ಗುರುತಾಗಿ ಗುರುತಿಸಿಕೊಂಡಿದೆ. ಈ ಸ್ವಾಗತಗೋಪುರದಲ್ಲಿ ರಥದಲ್ಲಿ ಅರ್ಜುನನಿಗೆ ಗೀತೆ ಬೋಧಿಸುವ ಕೃಷ್ಣನ ಸುಂದರ ಮುಖಾವರಣ ಇಲ್ಲಿನ ವಿಶೇಷ. ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ 2ನೇ ಪರ್ಯಾಯ ಅವಧಿಯಲ್ಲಿ ಪರಮಗುರುಗಳಾದ ಶ್ರೀ
ಸುಧೀಂದ್ರತೀರ್ಥ ಶ್ರೀಗಳ ಸ್ಮರಣಾರ್ಥ ಈ ಸ್ವಾಗತ ಗೋಪುರ ನಿರ್ಮಿಸಿದ್ದರು.
1992ರ ಜ.18ರಂದು ಪರ್ಯಾಯ ಸಂದರ್ಭ ಇದರ ಶಿಲಾನ್ಯಾಸ ನೆರವೇರಿತ್ತು. ದಂಡತೀರ್ಥದಲ್ಲಿ ಸ್ನಾನ ಮುಗಿಸಿ ಜೋಡುಕಟ್ಟೆಗೆ ಆಗಮಿಸುವ ದಾರಿ ಮಧ್ಯೆ ಗೋಪುರಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. 1993ರ ಮಾರ್ಚ್‌ನಲ್ಲಿ ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ಈ ಗೋಪುರ ಉದ್ಘಾಟಿಸಿದ್ದರು.
40 ಲಕ್ಷ ರೂ.ವೆಚ್ಚದಲ್ಲಿ40ಅಡಿ ಎತ್ತರ ಹಾಗೂ 40 ಅಡಿ ಉದ್ದದಲ್ಲಿ ಈ ಗೋಪುರವನ್ನು ನಿರ್ಮಿಸಲಾಗಿತ್ತು. ಶೇಷಶಯನ ಮಹಾವಿಷ್ಣು, ಹನುಮ, ಭೀಮ, ಮಧ್ವಾಚಾರ್ಯರು, ಕನಕ ದಾಸರು, ಪುರಂದರ ದಾಸರ ಪ್ರತಿಮೆ ಇದರಲ್ಲಿ ಕಾಣಬಹುದು. ಮಧ್ಯಭಾಗದ ವೃತ್ತದಲ್ಲಿ ಕೃಷ್ಣನ ಗೀತೋಪದೇಶ ಕಲಾಕೃತಿ ಆಕರ್ಷಣೀಯವಾಗಿ ರೂಪುಗೊಂಡಿದೆ.
2008ರಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದಾಗಿ ಗೋಪುರದ ಅಸ್ತಿತ್ವಕ್ಕೆ ಸಮಸ್ಯೆಯಾಗುವ ಸಂದರ್ಭ ಇದನ್ನು ಉಳಿಸಿಕೊಳ್ಳ ಲು ಸುಗುಣೇಂದ್ರ ತೀರ್ಥ ಶ್ರೀಪಾದರು ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಹೆದ್ದಾರಿ ಕಾಮಗಾರಿಯ ನಕ್ಷೆಯಲ್ಲಿ ಬದಲಾವಣೆ ಮಾಡಿ ಅಂಡರ್ ಪಾಸ್ ನಿರ್ಮಿಸಿ ನಗರ ಪ್ರವೇಶಿಸುವ
ವಾಹನಗಳು ಗೋಪುರವನ್ನು ಹಾದು ಹೋಗುವಂತೆ ಮಾಡಲಾಯಿತು.