Advertisement
ಉಡುಪಿ: ನಗರಸಭೆಯ ಕೆಲವು ಅಧಿಕಾರಿಗಳು ಉದ್ದೇಶಪೂರ್ವಕ ವಾಗಿ ನಿರ್ಲಕ್ಷ್ಯ ವಹಿಸಿದ ಪರಿಣಾಮ ಇಂದು ಪಾರ್ಕಿಂಗ್ ಸಮಸ್ಯೆ ಕೈ ಮೀರಿದೆ.
Related Articles
ನಗರ ಯೋಜನೆಯ ನಿಯಮಗಳ ಪ್ರಕಾರ ಎಲ್ಲ ವಾಣಿಜ್ಯ ಕಟ್ಟಡಗಳ (ಅಂತಸ್ತುಗಳ)ಲ್ಲಿ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದಾರೆಯೇ? ಇಲ್ಲವೇ? ಎಂಬುದನ್ನು ಪರಿಶೀಲಿಸಬೇಕು. ಇದು ಕಡ್ಡಾಯ. ಒಂದುವೇಳೆ ಸ್ಥಳಾವಕಾಶ ಕಲ್ಪಿಸದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ಅನುಮತಿ ನಿರಾಕರಿಸಲೂ ಅವಕಾಶವಿದೆ. ಆದರೆ ಹಲವು ವರ್ಷಗಳಿಂದ ಅಧಿಕಾರಿಗಳು ಅದನ್ನು ಪಾಲಿಸಿಯೇ ಇಲ್ಲ. ಅಕ್ರಮಗಳು ನಡೆಯುತ್ತಿದ್ದರೂ ಬೆಕ್ಕಿನಂತೆ ಕಣ್ಣು ಮುಚ್ಚಿ ಅಧಿಕಾರಿಗಳು ಹಾಲು ಕುಡಿದರು ಎಂಬುದು ಸಾರ್ವಜನಿಕವಾಗಿ ಕೇಳಿಬರುತ್ತಿರುವ ಟೀಕೆ.
Advertisement
ಡೋರ್ ನಂಬರ್ ವಾಸ್ತವವಾಗಿ ನಿಯಮದ ಪ್ರಕಾರ, ವಾಣಿಜ್ಯ ಸಂಕೀರ್ಣಗಳಲ್ಲಿ ಪಾರ್ಕಿಂಗ್‌ಗೆ ಮೀಸಲಿಡಬೇಕಾದ ಸ್ಥಳವನ್ನು ಬೇರೆ ಉದ್ದೇಶಕ್ಕೆ, ವಾಣಿಜ್ಯ ಉದ್ದೇಶಕ್ಕೆ ಬಳಸಿದರೆ ಅದನ್ನು ಮಾನ್ಯ ಮಾಡುವಂತಿಲ್ಲ. ಜತೆಗೆ ಅದಕ್ಕೆ ಡೋರ್ ನಂಬರ್ ನೀಡುವಂತಿಲ್ಲ. ವಿಚಿತ್ರವೆಂದರೆ ಅಧಿಕಾರಿಗಳು ಹಣಕ್ಕಾಗಿ ಡೋರ್ ನಂಬರ್ ನೀಡುವ ಮೂಲಕ ಅಕ್ರಮವನ್ನು ಬೆಂಬಲಿಸಿದರು. ಅದರಂತೆ ಮಳಿಗೆಯವರು ನಗರಸಭೆಗೆ ತೆರಿಗೆಯನ್ನೂ ಕಟ್ಟ ತೊಡಗಿದರು. ಈಗ ಅದನ್ನು ಸರಿಪಡಿಸುವುದು ಹೇಗೆ ಎಂಬ ಸಂಕಷ್ಟದಲ್ಲಿ ನಗರಸಭೆ ಸಿಲುಕಿಕೊಂಡಿದೆ. ವಾಣಿಜ್ಯ ಸಂಕೀರ್ಣದವರಿಗೂ ಸ್ಥಳವಿಲ್ಲ
ವಾಣಿಜ್ಯ ಸಂಕೀರ್ಣಕ್ಕೆ ಬರುವ ಗ್ರಾಹಕರು ಬಿಡಿ, ಆಯಾ ಸಂಕೀರ್ಣದಲ್ಲಿನ ಮಳಿಗೆಯ ಮಾಲಕರು ಹಾಗೂ ಸಿಬಂದಿಗಾದರೂ ಆ ಸಂಕೀರ್ಣದಲ್ಲಿ ವಾಹನ ನಿಲ್ಲಿಸಲು ಅವಕಾಶ ಇರಬೇಕಿತ್ತು. ಆಗಲಾದರೂ ಸಾರ್ವಜನಿಕ ಸ್ಥಳದ ಮೇಲೆ ಒತ್ತಡ ಕಡಿಮೆಯಾಗುತ್ತಿತ್ತು. ಅದನ್ನೂ ಮಾಡಿಲ್ಲ. ಅವುಗಳೂ ರಸ್ತೆಗಳ ಮೇಲೆ ನಿಲ್ಲಬೇಕಾದ ಸ್ಥಿತಿ ಇದೆ. ಅಕ್ರಮ ಹಣಕ್ಕಾಗಿ ನಿಯಮ ಉಲ್ಲಂಘನೆಯನ್ನೂ ಕೆಲವು ಅಧಿಕಾರಿಗಳು ಮಾನ್ಯ ಮಾಡಿದ್ದರಿಂದ ಈ ಸ್ಥಿತಿ ಉದ್ಭವಿಸಿದೆ. ಇದರೊಂದಿಗೆ ಜನ ಪ್ರತಿ ನಿಧಿಗಳೂ ಕ್ರಮ ಕೈಗೊಳ್ಳುವ ಮೊದಲು ಇಡೀ ಸಮಸ್ಯೆ ಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಎಲ್ಲ ದರ ಪರಿಣಾಮ ಈ ಪರಿಸ್ಥಿತಿ ಕೈ ಮೀರಿ ಹೋಗಿದೆ. ಕೊನೆಗೂ ಹೊಸ ಷರತ್ತು
ತನ್ನ ತಪ್ಪಿನಿಂದ ಎಚ್ಚೆತ್ತಿರುವ ನಗರಸಭೆ ಇತ್ತೀಚೆಗೆ ಒಂದು ವರ್ಷದಿಂದ ವಾಣಿಜ್ಯ ಸಂಕೀರ್ಣಕ್ಕೆ ಅನುಮತಿ ನೀಡುವ ಮೊದಲು ಸಂಬಂಧಪಟ್ಟವರಿಂದ ಅಫಿಡವಿಟ್ ಪಡೆಯುತ್ತಿದೆ. ಅದರಲ್ಲಿ ಒಂದುವೇಳೆ ಪಾರ್ಕಿಂಗ್ ಸ್ಥಳವನ್ನು ಅನ್ಯ ಉದ್ದೇಶಕ್ಕೆ ಬಳಸುವುದಾದರೆ ಯಾವಾಗಲಾದರೂ ಅಧಿಕಾರಿಗಳು ಭೇಟಿ ನೀಡಿ ಕ್ರಮ ಕೈಗೊಳ್ಳಬಹುದು ಎಂಬುದೂ ಸೇರಿದಂತೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಇದು ಪ್ರತ್ಯಕ್ಷ ಅನುಭವ
ದಿನೇ ದಿನೆ ಮನುಷ್ಯರಿಗಿಂತ ವಾಹನಗಳೇ ಹೆಚ್ಚಾಗುತ್ತಿವೆ. ಒಂದು ಮನೆಯ ನಾಲ್ಕು ಜನರು ನಾಲ್ಕು ಗಾಡಿಯಲ್ಲಿ ನಗರಕ್ಕೆ ತೆರಳಿ ಎಲ್ಲೆಂದರಲ್ಲಿ ನಿಲ್ಲಿಸಿದರೆ ಉಳಿದವರ ಪಾಡೇನು? ನಾನೂ ಒಂದೆರಡು ಬಾರಿ ಕಾರು ಚಲಾಯಿಸಿಕೊಂಡು ನಗರದ ಟ್ರಾಫಿಕ್‌ನಲ್ಲಿ ಸಿಕ್ಕಿಬಿದ್ದು ಸಾಕಾಗಿ, ಆಟೋ ರಿಕ್ಷಾ ಬಳಸಲಾರಂಭಿಸಿದ ಪ್ರಮೇಯವೂ ಇದೆ. ಬಿಪಿ, ಮಧುಮೇಹ ಪರೀಕ್ಷೆಗೆಂದು ಆದರ್ಶ ಆಸ್ಪತ್ರೆಗೆ ಹೋಗಿ ವಾಹನ ಪಾರ್ಕಿಂಗ್‌ಗಾಗಿ ಸ್ಥಳ ಹುಡುಕಿ ಕೆಲವರಿಂದ ಬೈಸಿಕೊಂಡು ಬರುವಷ್ಟರಲ್ಲಿ ಬಿಪಿ, ಶುಗರ್ ಎರಡೂ ನಿಯಂತ್ರಣ ಮೀರಿ ಹೋಗಿತ್ತು. ಹಾಗಾಗಿ ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿರುವಂಥ ಆಸ್ಪತ್ರೆ,ಅಂಗಡಿಗಳಿಗೆ ಮಾತ್ರ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
-ರಾಜಶ್ರೀ ಸುಧಾರಾಮ, ಅಜ್ಜರಕಾಡು