Advertisement

“ಬಿಲ್‌’ನಿಂದ ವಿದ್ಯೆ!

01:04 PM Dec 15, 2018 | |

ನೀವು ಇಲ್ಲಿ ನೀರುದೋಸೆ ತಿಂದರೆ, ನಿಮ್ಮ ಹೊಟ್ಟೆಯಷ್ಟೇ ತುಂಬುವುದಿಲ್ಲ… ಅಲ್ಲೆಲ್ಲೋ ಕುಂದಾಪುರದ ಕೆರಾಡಿ ಎಂಬ ಪುಟ್ಟ ಗ್ರಾಮದ ಬಡ ಮಕ್ಕಳ ವಿದ್ಯೆಯ ಹಸಿವೂ ನೀಗುತ್ತೆ! ನೀರ್‌ದೋಸೆ ಮಾತ್ರವೇ ಅಲ್ಲ, ಈ ಹೋಟೆಲ್‌ನ ಯಾವುದೇ ಖಾದ್ಯ ಸವಿದರೂ, ನೀವು ಕೊಡುವ ಬಿಲ್‌ ಹಣದಿಂದ ಒಂದಿಷ್ಟು ಮಂದಿ ಬಡ ವಿದ್ಯಾರ್ಥಿಗಳು ನೆಮ್ಮದಿಯಿಂದ ಓದುತ್ತಾರೆ. ಅದುವೇ “ಶ್ರೀ ಉಡುಪಿ ಪಾರ್ಕ್‌’ ಹೋಟೆಲ್‌ನ ಬಹುದೊಡ್ಡ ಉಪಕಾರ.

Advertisement

ಹಳೇ ಏರ್‌ಪೋರ್ಟ್‌ ರಸ್ತೆಯ ಮುರುಗೇಶ್‌ ಪಾಳ್ಯದಲ್ಲಿರುವ “ಶ್ರೀ ಉಡುಪಿ ಪಾರ್ಕ್‌’, ಈ ವೈಶಿಷ್ಟéವನ್ನು ಮೆರೆಯಲು ಕಾರಣವೂ ಉಂಟು. ಇದರ ಮಾಲೀಕರಾದ ಕೆರಾಡಿ ಚಂದ್ರಶೇಖರ ಶೆಟ್ಟಿ ಅವರಿಗೆ ಓದುವ ಆಸೆ ಇತ್ತಂತೆ. ಆದರೆ, ಅನಿವಾರ್ಯ ಕಾರಣಗಳಿಂದ ಅದು ಆಗಿರಲಿಲ್ಲ. ಹಿಂದೆಲ್ಲ ಕರಾವಳಿ ಮಂದಿಗೆ, ಹೋಟೆಲ್‌ ಇಡುವುದೇ ಒಂದು ಕನಸು. ಆ ಕನಸನ್ನಿಟ್ಟುಕೊಂಡೇ ಇವರೂ 1993ರಲ್ಲಿ ಬೆಂಗಳೂರಿಗೆ ಬಂದು, ಈ ಹೋಟೆಲ್‌ ಇಟ್ಟರಂತೆ. ಆದರೆ, ಒಮ್ಮೆ ಹಿಂತಿರುಗಿ ತಮ್ಮ ಹುಟ್ಟೂರನ್ನು ನೋಡಿದಾಗ, ಅಲ್ಲಿ ಬಡ ಮಕ್ಕಳೇ ಕಂಡರಂತೆ. “ಅವರ ವಿದ್ಯೆಯ ಹಸಿವಿಗೆ, ನನ್ನ ಹೋಟೆಲ್‌ ಯಾವ ರೀತಿ ನೆರವಾಗಬಹುದು ಎಂದು ಯೋಚಿಸಿ, ಅಲ್ಲಿಗೆ ಬಹುಪಾಲು ಸ್ಪಂದಿಸುತ್ತಿದ್ದೇನೆ’ ಎನ್ನುತ್ತಾರೆ ಇವರು.

ದೋಸೆಗಳದ್ದೇ ದರ್ಬಾರ್‌
ಉಡುಪಿ ಕಡೆಯ ಹೋಟೆಲ್‌ ಅಂದ್ರೆ, ಅಲ್ಲಿ “ಚೊಂಯ್‌’ ಎಂದು ಸದ್ದು ಮಾಡುವುದು, ನೀರ್‌ದೋಸೆಯೇ. ಆದರೆ, ಈ ಹೋಟೆಲ್‌ನಲ್ಲಿ ದೋಸೆ ಸವಿದು ಮುಗಿಯುವಂಥದ್ದೇ ಅಲ್ಲ. ಪನ್ನೀರ್‌ ದೋಸೆ, ರಾಗಿದೋಸೆ, ರವಾ ದೋಸೆ, ರವಾ ಈರುಳ್ಳಿ ದೋಸೆ, ಈರುಳ್ಳಿ ದೋಸೆ, ಮಸಾಲೆ, ಸಾಗು ದೋಸೆ, ಸೌತೆಕಾಯಿ ದೋಸೆಗಳು ಇಲ್ಲಿ ಆಸೆಹುಟ್ಟಿಸುತ್ತವೆ. ರುಚಿಯಲ್ಲಿ ಒಂದಕ್ಕಿಂತ ಒಂದು ಭಿನ್ನ. ನಾಲಿಗೆ ಎಂದಿಗೂ ಮರೆಯದ ಆಸ್ವಾದ.

ಇದುವೆ ನಮ್ಮ “ಉತ್ತರ’
ಮಂಗಳೂರು ಶೈಲಿಯಲ್ಲದೇ, ಉತ್ತರ ಭಾರತೀಯ ಶೈಲಿಯ ಖಾದ್ಯಗಳಿಗೂ ಈ ಹೋಟೆಲ್‌ ಹೆಸರುವಾಸಿ. ಇಲ್ಲಿನ ಬಾಣಸಿಗರು ನಾನ್‌, ರೋಟಿ, ಬಟರ್‌ ರೋಟಿ, ಕುಲ್ಚಾ, ಬಟರ್‌ ನಾನ್‌, ರುಮಾಲಿ ರೋಟಿ, ನವರತ್ನ ಕುರ್ಮಾ, ಮಿಕ್ಸೆಡ್‌ ವೆಜಿಟೇಬಲ್‌ ಕರ್ರಿ, ಮಲೈಕೊಪ್ತಾ, ಅಣಬೆ ಮಸಾಲ, ದಾಲ್‌ ಫ್ರೈ, ಬೇಬಿ ಕಾರ್ನ್ ಮಂಚೂರಿ ತಯಾರಿಸುವುದರಲ್ಲೂ ಎತ್ತಿದ ಕೈ. ಉತ್ತರ ಭಾರತೀಯ ಅಲ್ಲ, ನಮ್ಮೂರಿನದ್ದೇ ತಿನಿಸು ಎನ್ನುವಂಥ ಆಪ್ತರುಚಿ.
ಈ ಹೋಟೆಲ್‌ನ ಇನ್ನೊಂದು ವೈಶಿಷ್ಟé, ಗ್ರಾಮೀಣ ಸಿಹಿ. ಸುಕ್ಕಿನುಂಡೆ, ಕ್ಯಾರೆಟ್‌ ಹಲ್ವಾ, ಬಾದಾಮ್‌ ಹಲ್ವಾ, ಒಬ್ಬಟ್ಟು, ಬೇಳೆ ಪಾಯಸ, ಸಬ್ಬಕ್ಕಿ ಪಾಯಸಗಳು ಪರಿಮಳದಲ್ಲೇ ಆಸೆ ಹುಟ್ಟಿಸುತ್ತವೆ. ಹಬ್ಬ ಹರಿದಿನಗಳಲ್ಲಿ 17ಕ್ಕೂ ಅಧಿಕ ಭಕ್ಷ್ಯಗಳ ಭೋಜನ ಇಲ್ಲಿರುತ್ತದೆ.

ಎಲ್ಲೆಲ್ಲಿ ಶಾಖೆಗಳಿವೆ?
ಮುರುಗೇಶ್‌ ಪಾಳ್ಯ (ಹಳೇ ಏರ್‌ಪೋರ್ಟ್‌ ರಸ್ತೆ), ರೆಸಿಡೆನ್ಸಿ ರಸ್ತೆ, ಮಹದೇವಪುರ, ಮಾರತ್‌‌ಹಳ್ಳಿ ಬಳಿಯ ರಿಂಗ್‌ ರಸ್ತೆ, ಕುಂದವನ ಹಳ್ಳಿ, ಎಇಸಿಎಸ್‌ ಲೇಔಟ್‌, ವೈಟ್‌ಫೀಲ್ಡ್‌ ರಸ್ತೆ, ಎಚ್‌ಎಸ್‌ಆರ್‌ ಲೇಔಟ್‌, ಚಾಮರಾಜ ಪೇಟೆ, ಕಾರ್ತಿಕ ನಗರ.

Advertisement

ಸಂಪರ್ಕ: 9972719999

 ಬಳಕೂರು ವಿ.ಎಸ್‌. ನಾಯಕ್‌

Advertisement

Udayavani is now on Telegram. Click here to join our channel and stay updated with the latest news.

Next