Advertisement
ಉಡುಪಿ ನಗರಾದ್ಯಂತ ವಿದ್ಯುದ್ದೀ ಪಾಲಂಕಾರವಿದ್ದು ಜನಮನ ಗೆದ್ದಿದೆ. ವಿವಿಧೆಡೆಗಳಲ್ಲಿ ಸಾಂಸ್ಕೃತಿಕ ರಸದೌತಣ ನೀಡಲಾಗಿದೆ. ನಗರಪೂರ್ತಿ ಜಾಗರವಿದ್ದು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರನ್ನು ಸ್ವಾಗತಿಸುವರು.
Related Articles
Advertisement
2002ರಲ್ಲಿ ಆರಂಭಗೊಂಡ 31ನೇ ಚಕ್ರದಲ್ಲಿ ಈಗ 248ನೇ ಶ್ರೀ ಪೇಜಾವರ ಮಠದ ಪರ್ಯಾಯ ಕೊನೆಗೊಂಡು 249ನೇ ಪರ್ಯಾಯದೊಂದಿಗೆ 32ನೇ ಪರ್ಯಾಯ ಚಕ್ರ 2018ರ ಜನವರಿ 18ರಂದು ಆರಂಭಗೊಳ್ಳುತ್ತಿದೆ. ಇದರೊಂದಿಗೆ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ದಾಖಲೆಯ ಐದನೆಯ ಪರ್ಯಾಯವನ್ನು ನಡೆಸಿ ಪೀಠದಿಂದ ನಿರ್ಗಮಿಸುತ್ತಿದ್ದಾರೆ.
ಪರ್ಯಾಯ ಸಡಗರ ಹೀಗೆ…ಗುರುವಾರ ಮುಂಜಾನೆ ಕಾಪು ಬಳಿಯ ದಂಡತೀರ್ಥಕ್ಕೆ ತೆರಳಿ ಅಲ್ಲಿ ಸ್ನಾನ, ಅಲ್ಲಿಂದ ಜೋಡುಕಟ್ಟೆಗೆ ಆಗಮನ, ಅಲ್ಲಿ ಪರ್ಯಾಯೋತ್ಸವದ ದಿನ ಮಾತ್ರ ಮಠಾಧೀಶರು ಪೇಟ ಸುತ್ತಿಕೊಳ್ಳುವ ಸಂಪ್ರದಾಯ, ಅಲ್ಲಿ ವಿವಿಧ ಬ್ಯಾಂಡ್ ಸೆಟ್, ವಾದ್ಯೋಪಕರಣಗಳು- ಟ್ಯಾಬ್ಲೋಗಳ ವೈಭವದ ಮೆರವಣಿಗೆ, ಭಾವೀ ಪರ್ಯಾಯ ಪೀಠಾಧೀಶರ ಪಟ್ಟದ ದೇವರಾದ ರಾಮಸೀತಾಲಕ್ಷ್ಮಣ ಆಂಜನೇಯನ ಪ್ರತಿಮೆಯನ್ನು ಪಲ್ಲಕಿಯಲ್ಲಿರಿಸಿ ಹಿಂದಿನಿಂದ ಪಲಿಮಾರು ಮಠಾಧೀಶರು, ಅನಂತರ ಆಶ್ರಮ ಜೇಷ್ಠತ್ವದಂತೆ ಕೃಷ್ಣಾಪುರ ಮೊದಲಾದ ಶ್ರೀಗಳು ಮೆರವಣಿಗೆಯಲ್ಲಿ ರಥಬೀದಿಗೆ ಆಗಮನವೇ ಮೊದಲಾದ ಪ್ರಕ್ರಿಯೆ ನಡೆಯುತ್ತದೆ. ರಥಬೀದಿಗೆ ಪ್ರವೇಶವಾಗುತ್ತಿದ್ದಂತೆ ವಾಹನದಿಂದ ಕೆಳಗೆ ಇಳಿದು ಹಾಸುಗಂಬಳಿಯ ಮೇಲೆ ಆಗಮಿಸುವ ಶ್ರೀಪಾದರು ಮೊದಲು ಕನಕನ ಕಿಂಡಿ ಮೂಲಕ ದೇವರ ದರ್ಶನ,
ನವಗ್ರಹದಾನ ಪ್ರದಾನ, ಚಂದ್ರೇಶ್ವರ, ಅನಂತೇಶ್ವರ ದರ್ಶನ ಮಾಡಿದಬಳಿಕ ಕೃಷ್ಣಮಠದ ಮುಂಭಾಗ ನಿರ್ಗಮನ ಪೀಠಾಧೀಶರು ಆಗಮನ ಪೀಠಾಧೀಶರನ್ನು ಸ್ವಾಗತಿಸುವರು. ಮಧ್ವಸರೋವರದಲ್ಲಿ ಪಾದಪ್ರಾಕ್ಷಾಲನ ಬಳಿಕ ದೇವರ ದರ್ಶನ, ಅಕ್ಷಯಪಾತ್ರೆಯ ಹಸ್ತಾಂತರ ನಡೆದು ಸರ್ವಜ್ಞ ಸಿಂಹಾಸನದಲ್ಲಿ ಆರೋಹಣ ನಡೆಯಲಿದೆ. ಬಳಿಕ ಬಡಗು ಮಾಳಿಗೆಯಲ್ಲಿ ಇತರ ಮಠಾಧೀಶರಿಗೆ ಗಂಧ್ಯದುಪಚಾರ ನಡೆದು ಬಳಿಕ ಪರ್ಯಾಯ ದರ್ಬಾರ್ ಸಭೆ ನಡೆಯುವುದು. ಪರ್ಯಾಯ ಮೆರವಣಿಗೆ ಜೋಡುಕಟ್ಟೆ, ಕೆ.ಎಂ.ಮಾರ್ಗವಾಗಿ ರಥಬೀದಿಯನ್ನು ಪ್ರವೇಶಿಸುವುದು. ಈ ಮಾರ್ಗ ಬದಲಾವಣೆ ಎರಡನೇ ಬಾರಿ ನಡೆಯುತ್ತಿದೆ. ತೆಂಕಪೇಟೆ ಮಾರ್ಗ ಅಗಲ ಕಿರಿದಾಗಿರುವುದರಿಂದ ದೊಡ್ಡ ಮಟ್ಟದ ಮೆರವಣಿಗೆ ಹೋಗಲು ಇಕ್ಕಟ್ಟಾಗುತ್ತದೆ. ಜನಸಾಗರ
ಉಡುಪಿ: ಪರ್ಯಾಯ ಸಂಭ್ರಮದಲ್ಲಿ ಮುಳುಗಿರುವ ಉಡುಪಿಯಲ್ಲಿ ಬುಧವಾರ ಸಂಜೆಯಾಗುತ್ತಲೇ ಜನಸಾಗರವೇ ಕಾಣಿಸಿತು. ಕರಾವಳಿ ಮಾತ್ರವಲ್ಲದೆ, ಹೊರ ಜಿಲ್ಲೆಗಳ, ರಾಜ್ಯಗಳ ಭಕ್ತರು ಉಡುಪಿಗೆ ದೌಡಾಯಿಸಿದ್ದಾರೆ. ಉಡುಪಿ ನಗರದ ಸುತ್ತಮುತ್ತ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ರಾತ್ರಿ 8 ಗಂಟೆಗೆ ಆರಂಭಗೊಂಡಿದ್ದು, ಹೆಚ್ಚಿನ ಕಡೆ ಕಾಲು ಹಾಕುವುದಕ್ಕೂ ಜಾಗವಿಲ್ಲದಷ್ಟು ಜನ ಸೇರಿದ್ದರು. ಉಡುಪಿ ನಗರದೊಳಗೆ ವಾಹನ ಸಂಚಾರವನ್ನು ಸಂಪೂರ್ಣ ಸ್ತಬ್ಧಗೊಳಿಸಲಾಗಿತ್ತು. ಬಿಗು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.