ಉಡುಪಿ: ಜಿಲ್ಲೆಯಲ್ಲಿ ಎಸೆಸೆಲ್ಸಿ ಫಲಿತಾಂಶ ಉನ್ನತೀಕರಿಸಲು ವಿದ್ಯಾರ್ಥಿಗಳಿಗೆ ವಿಷಯ ತಜ್ಞರ ಮೂಲಕ ಆನ್‌ಲೈನ್‌ನಲ್ಲಿ ತರಬೇತಿ ನೀಡಲು ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತ್ ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ ಮುಂದಾಗಿದೆ. ಈ ಮೂಲಕ ಜಿಲ್ಲಾಡಳಿತ ಮುಂದಾಗಿದೆ.
ಫಲಿತಾಂಶ ಉನ್ನತೀಕರಣದ ವಿಷಯದಲ್ಲಿ ಶಾಲಾವಾರು ವಿವಿಧ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ. ಇದರ ಮುಂದುವರಿದ ಭಾಗವಾಗಿ ಜಿಲ್ಲೆಯ ಸರಕಾರಿ ಪ್ರೌಢಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿ ಗಳಿಗೆ ನಿತ್ಯವೂ ಒಂದು ಗಂಟೆ ಆನ್‌ಲೈನ್ ಮೂಲಕ ತರಬೇತಿ ನೀಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ.
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಆವರಣದಲ್ಲಿರುವ ತರಬೇತಿ ಕೇಂದ್ರದ ಸ್ಟುಡಿಯೋದಿಂದ ಈಗಾಗಲೇ ಪಿಯುಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಸಿಇಟಿ, ನೀಟ್ ತರಬೇತಿ ನೀಡ ಲಾಗುತ್ತದೆ. ಜತೆಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಯನ್ನು ಗ್ರಾ.ಪಂ.ಗಳ ಯುವ ಜನತೆಗೆ ಆನ್‌ಲೈನ್ ಮೂಲಕ ನೀಡಲಾಗುತ್ತದೆ. ಇದೇ ಸ್ಟುಡಿಯೋ ಬಳಸಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ವಿಷಯ ತಜ್ಞರನ್ನು ಸಜ್ಜುಗೊಳಿಸಲಾಗುತ್ತಿದೆ.
3 ವಿಷಯಗಳಲ್ಲಿ ತರಬೇತಿ
ವಿದ್ಯಾರ್ಥಿಗಳಿಗೆ ನಿತ್ಯವೂ ಅಪರಾಹ್ನ 1 ಗಂಟೆ ಆನ್‌ಲೈನ್ ತರಗತಿ ಇರಲಿದೆ. ಇದರಲ್ಲಿ ಇಂಗ್ಲಿಷ್, ಗಣಿತ ಹಾಗೂ ವಿಜ್ಞಾನ ವಿಷಯವನ್ನೇ ಕೇಂದ್ರೀಕರಿಸಿ ತರಬೇತಿ ನೀಡಲಾಗುತ್ತದೆ. ಈ ಮೂರು ವಿಷಯದ ಎಲ್ಲ ಪಾಠಗಳು ವಿದ್ಯಾರ್ಥಿಗಳಿಗೆ ಬೋಧಿಸಲು, ಪ್ರಶ್ನೋತ್ತರ, ಕ್ಲಿಷ್ಟತೆಗೆ ಪರಿಹಾರ ಒದಗಿಸಲು ಅನುಕೂಲ ಆಗುವಂತೆ ತರಬೇತಿ ರೂಪರೇಖೆ ಸಿದ್ಧವಾಗುತ್ತಿದೆ.
ವಿಷಯ ತಜ್ಞರ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದೇವೆ. ಒಂದು ವಾರದಲ್ಲಿ ಇನ್ನೊಂದು ಸಭೆ ನಡೆಸಿ, ತರಬೇತಿ ದಿನಾಂಕವನ್ನು ನಿಗದಿಪಡಿಸಲಿದ್ದೇವೆ. ಎಲ್ಲ ವಿದ್ಯಾರ್ಥಿಗಳಿಗೂ ಏಕರೂಪದಲ್ಲಿ ಪಾಠ ಮತ್ತು ಮಾಹಿತಿ ನೀಡಲು ಇದು ಸಹಕಾರಿಯಾಗಲಿದೆ.
– ಕೆ. ಗಣಪತಿ, ಡಿಡಿಪಿಐ, ಉಡುಪಿ