Advertisement
ದೇಶ, ರಾಜ್ಯ ಮಟ್ಟದಲ್ಲಿ ಸೋಂಕು ಪ್ರಮಾಣ ಇಳಿಕೆಯಾಗುತ್ತಿದೆ. ಇದು ಉಡುಪಿ ಜಿಲ್ಲಾ ಮಟ್ಟದಲ್ಲಿಯೂ ಪ್ರತಿಫಲಿಸಿದೆ. ಸೋಂಕು ಹರಡುವಿಕೆಯೂ ಗಣನೀಯವಾಗಿ ಕಡಿಮೆ ಆಗಿದೆ. ಆದರೂ ಜನ ಮೈ ಮರೆತರೆ ಅಪಾಯ ತಪ್ಪಿದ್ದಲ್ಲ ಎಂದು ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಎಚ್ಚರಿಕೆ ನೀಡುತ್ತಲೇ ಇದೆ.
ಜಿಲ್ಲೆಯಲ್ಲಿ ಎರಡು ತಿಂಗಳ ಹಿಂದೆ ಪತ್ತೆಯಾಗುತ್ತಿದ್ದ ಒಟ್ಟು ಸೋಂಕಿನ ಪ್ರಮಾಣ ಶೇ. 16.2 ಇದ್ದರೆ, ಈಗ ಶೇ. 11.6ಕ್ಕೆ ಇಳಿದಿದೆ. ಕಳೆದ 3 ದಿನದಲ್ಲಿ ಪರೀಕ್ಷೆಗೆ ಕಳುಹಿಸಲಾದ ಒಟ್ಟು ಮಾದರಿಗಳಲ್ಲಿ ಶೇ. 2.3ರಷ್ಟು ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ಈ ಹಿಂದೆ ದಿನಕ್ಕೆ ಸುಮಾರು 300 ಪ್ರಕರಣಗಳು ಪತ್ತೆಯಾಗುತ್ತಿದ್ದರೆ ಒಂದು ವಾರದಿಂದ ಕೇವಲ 20ರಿಂದ 70ರ ಒಳಗೆ ವರದಿಯಾಗುತ್ತಿದೆ.
Related Articles
ಜಿಲ್ಲೆಯಲ್ಲಿ ಇಲ್ಲಿಯ ವರೆಗೆ 1,94,198 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಮಾರ್ಚ್, ಎಪ್ರಿಲ್‌ಗಳಲ್ಲಿ ಇಲ್ಲಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಆಗಸ್ಟ್ ಮತ್ತು ಸೆಪ್ಟಂಬರ್‌ನಲ್ಲಿ ಜಿಲ್ಲೆಯಲ್ಲಿ ಕೊರೊನಾ ಅಬ್ಬರಿಸಿತ್ತು. ಆಗಸ್ಟ್‌ನಲ್ಲಿ ಪ್ರತೀ ದಿನ 300ರಷ್ಟು ಪ್ರಕರಣ ಗಳು ಪತ್ತೆಯಾಗಿದ್ದರೆ ಒಂದು ದಿನ ಗರಿಷ್ಠ 421 ಪ್ರಕರಣಗಳು ದಾಖಲಾಗಿದ್ದವು.
Advertisement
427 ಸಕ್ರಿಯ ಪ್ರಕರಣಮರಣ ಪ್ರಮಾಣ ಶೇ. 1.1ರಷ್ಟಿದ್ದುದು ಕೂಡ ಕಳೆದ ಒಂದು ವಾರದಲ್ಲಿ ಶೇ. 1ಕ್ಕೆ ಇಳಿದಿದೆ. ಜಿಲ್ಲೆಯಲ್ಲಿ ಇದುವರೆಗೆ 186 ಮಂದಿ ಮೃತಪಟ್ಟಿದ್ದಾರೆ. ಪ್ರಸ್ತುತ ಇಲ್ಲಿ ಕೇವಲ 427 ಪಾಸಿಟಿವ್ ಸಕ್ರಿಯ ಪ್ರಕರಣಗಳಿವೆ. ಕೋವಿಡ್ ಚೇತರಿಕೆಯಲ್ಲಿ ರಾಜ್ಯದ ಜಿಲ್ಲಾವಾರು ಪಟ್ಟಿಯಲ್ಲಿ ಉಡುಪಿ ಅಗ್ರ ಸ್ಥಾನದಲ್ಲಿದೆ. ದಿನೇ ದಿನೇ ಕೊರೊನಾ ಪ್ರಕರಣ ಕಡಿಮೆ ಆಗುತ್ತಿವೆ. ಆದರೂ ಜನತೆ ಇನ್ನಷ್ಟು ಎಚ್ಚರಿಕೆ ವಹಿಸಬೇಕು, ನಿಯಮಗಳನ್ನು ಪಾಲಿಸಬೇಕು, ಎಚ್ಚರ ತಪ್ಪುವುದು ಸಲ್ಲದು.
– ಡಾ| ಪ್ರಶಾಂತ್ ಭಟ್, ಕೋವಿಡ್-19 ನೋಡಲ್ ಅಧಿಕಾರಿ, ಉಡುಪಿ