Advertisement

Udupi Nejaru Case: ಚೌಗಲೆ ಹಲ್ಲೆಗೆ ಯತ್ನಿಸಿದವರಿಗೆ ನೋಟಿಸ್‌

12:09 AM Dec 12, 2023 | Team Udayavani |

ಮಲ್ಪೆ: ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದ ಪ್ರಕರಣದ ಆರೋಪಿ ಪ್ರವೀಣ್‌ ಚೌಗಲೆ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ 21 ಮಂದಿಗೆ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ.

Advertisement

ಆರೋಪಿಯನ್ನು ಪತ್ತೆ ಹಚ್ಚಿದ ಅನಂತರ ಪೊಲೀಸರು ನ. 16ರಂದು ಆರೋಪಿಯನ್ನು ಸಂತ್ರಸ್ತರ ಮನೆಗೆ ಕರೆ ತಂದಿದ್ದರು. ಅ ವೇಳೆ ಮನೆ ಸಮೀಪದಲ್ಲಿ ಜಮಾಯಿಸಿದ ಸ್ಥಳೀಯರು ಆಕ್ರೋಶಿತಗೊಂಡು ಆರೋಪಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು. ಈ ವೇಳೆ ಪರಿಸರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರೂ, ಉದ್ರಿಕ್ತ ಗುಂಪನ್ನು ಚದುರಿಸಲು ಲಾಠಿ ಚಾರ್ಚ್‌ ಮಾಡಬೇಕಾಗಿ ಬಂದಿತ್ತು.

ಪೊಲೀಸರು ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸ್‌ ಕಸ್ಟಡಿಯಲ್ಲಿದ್ದಾಗಲೇ ಆರೋಪಿ ಮೇಲೆ ಹಲ್ಲೆಗೆ ಯತ್ನಿಸಿದವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಈಗಾಗಲೇ ಮೂವರನ್ನು ವಿಚಾರಣೆ ಮಾಡಲಾಗಿದೆ. ಇನ್ನುಳಿದವರನ್ನೂ ಠಾಣೆಗೆ ಕರೆದು ವಿಚಾರಿಸಲಾಗುವುದು ಎಂದು ಮಲ್ಪೆ ಠಾಣಾಧಿಕಾರಿ ತಿಳಿಸಿದ್ದಾರೆ.

ಆರೋಪಿಯನ್ನು ಸಂತ್ರಸ್ತರ ನಿವಾಸಕ್ಕೆ ಕರೆ ತಂದಾಗ “ಸ್ಥಳೀಯರು ಆತನ ಕೊಲೆ ಮಾಡುವ ಸುವರ್ಣ ಅವಕಾಶವನ್ನು ಕಳೆದುಕೊಂಡಿದ್ದಾರೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಸಿಸಿ ಕೆಮರಾ ಅಳವಡಿಸಲು ಆಗ್ರಹ
ನೇಜಾರಿನ ಪರಿಸರದ ಸುತ್ತಮುತ್ತ ಎಲ್ಲೂ ಸಿಸಿ ಕೆಮರಾ ಇಲ್ಲ. ಈ ಕೊಲೆ ನಡೆದ ಬಳಿಕ ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರಿಗೆ ಬಹಳ ದೊಡ್ಡ ತೊಡಕಾಗಿತ್ತು. ಇದೀಗ ಪರಿಸರದ ಮುಖ್ಯ ಭಾಗಗಳಲ್ಲಿ ಕೆಮರಾ ಅಳವಡಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ. ಪೊಲೀಸರು ಈಗಾಗಲೇ ಪರಿಸರದ ಮನೆಯವರಿಗೆ ಸಿಸಿ ಕೆಮರಾ ಅಳವಡಿಸಲು ಸಲಹೆಗಳನ್ನು ನೀಡಿದ್ದಾರೆ. ನೇಜಾರಿನ ತೃಪ್ತಿ ಲೇಔಟ್‌ನ ನೂರ್‌ ಮಹಮ್ಮದ್‌ ಅವರ ನೆರೆಮನೆಯರು ತಮ್ಮ ಸುರಕ್ಷತೆಗೆ ಮನೆಯ ನಾಲ್ಕು ಸುತ್ತಲೂ ಸಿಸಿ ಕೆಮರಾ ಅಳವಡಿಸಲು ಮುಂದಾಗಿದ್ದಾರೆ.

Advertisement

ಭದ್ರತೆಗೆ ಸೂಕ್ತ ಕ್ರಮ: ಎಸ್ಪಿ ಡಾ| ಅರುಣ್‌
ನೇಜಾರಿನಲ್ಲಿ ಕೆಲವೊಂದು ಮನೆಗಳಲ್ಲಿ ಈಗಾಗಲೇ ಸಿಸಿ ಕೆಮರಾ ಅಳವಡಿಸಿಕೊಂಡಿದ್ದಾರೆ. ನೇಜಾರು, ಹಂಪನಕಟ್ಟೆ ಮುಖ್ಯ ಭಾಗಗಳಲ್ಲಿ ಸಿಸಿ ಕೆಮರಾ ಅಳವಡಿಸುವ ಬಗ್ಗೆ ಈಗಾಗಲೇ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಸಂಬಂಧಪಟ್ಟ ಆಡಳಿತಕ್ಕೆ ಸೂಚನೆಯನ್ನು ನೀಡಿದ್ದಾರೆ. ಅನುಮೋದನೆ ದೊರೆತ ಬಳಿಕ ಸಿಸಿ ಕೆಮರಾ ಸೇರಿದಂತೆ ಹೆಚ್ಚುವರಿ ಬೀದಿದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್ಪಿ ಡಾ| ಅರುಣ್‌ ಕೆ. ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next