ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಚೌಗಲೆ ಯನ್ನು ಉಡುಪಿ ಕೋರ್ಟಿಗೆ ಬುಧವಾರ ಹಾಜರುಪಡಿಸಲಾಯಿತು. ಆತನಿಗೆ ಡಿಸೆಂಬರ್ 5 ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯ ಆದೇಶಿಸಿದೆ.
ವಿಚಾರಣೆ ಮುಗಿಸಿ ಆರೋಪಿಯನ್ನು ಮಲ್ಪೆ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದರು. ಈ ಮೊದಲು ಪೊಲೀಸರು ನವೆಂಬರ್ 28 ರವರೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದರೂ ಮಹಜರು ಪ್ರಕ್ರಿಕೆ ಪೂರ್ಣಗೊಂಡಿರುವ ಕಾರಣ ಮುಂಚಿತವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಘಟನೆಯ ವಿವರ: ನವೆಂಬರ್ 12ರಂದು ನೇಜಾರಿನ ತೃಪ್ತಿ ಲೇಔಟ್ ನಲ್ಲಿರುವ ಮನೆಗೆ ಬಂದು ತಾಯಿ ಮೂವರು ಮಕ್ಕಳನ್ನು ಕೊಲೆ ಮಾಡಿದ್ದ.ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ನೂರ್ ಮೊಹಮ್ಮದ್ ಅವರ ಪತ್ನಿ ಹಸೀನಾ (48), ಪುತ್ರಿಯರಾದ ಅಫ್ನಾನ್ (23), ಅಯ್ನಾಝ್ (21), ಪುತ್ರ ಅಸೀಮ್ (14) ಹತ್ಯೆಗೀಡಾಗಿದ್ದರು.
ನೂರ್ ಮೊಹಮ್ಮದ್ ಅವರ ತಾಯಿ ಹಾಜಿರಾಬಿ (70) ಮೇಲೆಯೂ ದಾಳಿ ನಡೆಸಲಾಗಿತ್ತು.
ಆರೋಪಿ ಬೆಳಗಾವಿಯಲ್ಲಿರುವ ಕುಡಚಿಯ ಸಂಬಂಧಿ ಮನೆಯಲ್ಲಿ ಅಡಗಿ ಇರುವ ಬಗ್ಗೆ ಉಡುಪಿಯ ಡಿವೈಎಸ್‌ಪಿ ನೇತೃತ್ವದ ತಂಡವು ಬೆಳಗಾವಿ ಪೊಲೀಸರಿಗೆ ಮಾಹಿತಿಯನ್ನು ನೀಡಲಾಗಿತ್ತು. ತಕ್ಷಣವೇ ಬೆಳಗಾವಿ ಪೊಲೀಸರು ಮಫ್ತಿಯಲ್ಲಿ ಮನೆ ಸುತ್ತುವರಿದಿದ್ದರು. ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಆರೋಪಿ ಅರುಣ್ ಮನೆಯೊಂದರಲ್ಲಿ ಇರುವುದು ಖಚಿತವಾಗಿತ್ತು.ಇತ್ತ ಉಡುಪಿಯಿಂದ ಹೊರಟಿದ್ದ ತಂಡವೂ ಕುಡಚಿ ತಲುಪುತ್ತಿದ್ದಂತೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದರು.