Advertisement

Udupi: ವಾರ್ಷಿಕೋತ್ಸವದಲ್ಲಿ ಹಾಡಿದ ಹಾಡಿಗೆ ದೇಶಾದ್ಯಂತ ಮೆಚ್ಚುಗೆ

03:37 PM Dec 31, 2024 | Team Udayavani |

ಉಡುಪಿ: ಟ್ಯಾಲೆಂಟ್ಸ್‌ ಡೇ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೋರ್ವನ 5 ನಿಮಿಷದ ಹಾಡು ಸಾಮಾಜಿಕ ಜಾಲತಾಣದಲ್ಲಿ 3.1 ಮಿಲಿಯನ್‌ ವೀವ್ಸ್‌ ಪಡೆದುಕೊಂಡಿದ್ದು, ಆತನನ್ನು ಈಗಾಗಲೇ ಹಲವಾರು ಸಂಘ-ಸಂಸ್ಥೆಗಳು ಕಾರ್ಯಕ್ರಮ ನೀಡುವಂತೆ ಪ್ರೋತ್ಸಾಹಿಸುತ್ತಿದ್ದಾರೆ.

Advertisement

ಉಡುಪಿಯ ಪೂರ್ಣಪ್ರಜ್ಞ ಪ.ಪೂ. ಕಾಲೇಜಿನಲ್ಲಿ ಪ್ರಥಮ ಪಿಯುಸಿ ಮಾಡುತ್ತಿರುವ ವಿದ್ಯಾರ್ಥಿ ಶ್ರೀಕೃಷ್ಣ ರೇವಣ್ಕರ್‌ ಅವರು ಪ್ರಸಿದ್ಧ ಗಾಯಕ ಎಡ್‌ ಶಿರಿನ್‌ ಅವರ ‘ಪರ್ಫೆಕ್ಟ್’ ಹಾಡನ್ನು 5 ನಿಮಿಷಗಳ ಕಾಲ ಹಾಡಿದ್ದರು. ಪಾಶ್ಚಾತ್ಯ ಹಾಡಿಗೆ ವೀಣೆ ಸಂಯೋಜನೆ ಮಾಡುವ ಮೂಲಕ ನೆರೆದ ವಿದ್ಯಾರ್ಥಿಗಳನ್ನು ಸಂಗೀತ ಲೋಕಕ್ಕೆ ಕೊಂಡೊಯ್ದಿದ್ದರು. ಕ್ಲಾಸಿಕ್‌ ಹಾಗೂ ಸೆಮಿ ಕ್ಲಾಸಿಕ್‌ ಹಾಡು ಹೇಳುತ್ತಿದ್ದ ಶ್ರೀಕೃಷ್ಣ ರೇವಣ್ಕರ್‌ ಆಂಗ್ಲ ಭಾಷೆಯ ಹಾಡು ಹೇಳಿರುವುದು ಇದೇ ಮೊದಲು.

ತಬಲ, ವೀಣೆಯಲ್ಲಿ ಆಸಕ್ತಿ
ತಬಲಾ ಹಾಗೂ ವೀಣೆಯಲ್ಲಿ ಈತನಿಗೆ ಅಪಾರವಾದ ಆಸಕ್ತಿ. ಆನ್‌ಲೈನ್‌ ಮೂಲಕ ಪ್ರಸಿದ್ಧ ಕೊಳಲು ವಾದಕ ಪ್ರವೀಣ್‌ ಗೋಡ್ಕಿಂಡಿ ಅವರ ಸಂಜೋಕ್‌ ಬಾನ್ಸೂಲಿ ವಿದ್ಯಾಲಯದ ಮೂಲಕ ಆನ್‌ಲೈನ್‌ನಲ್ಲಿ ಸುಮಾರು 7 ವರ್ಷಗಳ ಕಾಲ ಗೋಡ್ಕಿಂಡಿಯವರ ಶಿಷ್ಯ ಸುನಿಲ್‌ ಅವರಿಂದ ತರಬೇತಿ ಪಡೆದುಕೊಂಡಿದ್ದಾನೆ.

11 ವರ್ಷಗಳಿಂದ ಮುಕುಂದಕೃಪಾ ಸಂಗೀತ ವಿದ್ಯಾಲಯದಲ್ಲಿ ಮಾಧವಾ ಚಾರ್ಯ ಅವರಿಂದ ತಬಲ ಕಲಿಯುತ್ತಿದ್ದಾನೆ. ಭಜನೆ, ಭಾವಗೀತೆಯಲ್ಲಿಯೂ ಈತನಿಗೆ ಅಪಾರ ವಾದ ಆಸಕ್ತಿ. ಸಂಗೀತ ಕ್ಷೇತ್ರವಷ್ಟೇ ಅಲ್ಲದೆ ಕ್ರೀಡೆಯಲ್ಲಿಯೂ ಈತನಿಗೆ ಒಲವಿದೆ. ಟೇಬಲ್‌ ಟೆನ್ನಿಸ್‌ ಹಾಗೂ ಬ್ಯಾಡ್ಮಿಂಟನ್‌ನಲ್ಲಿಯೂ ಸೈ ಎನಿಸಿಕೊಂಡಿದ್ದಾನೆ.

ಸಂಗೀತ ನಿರ್ದೇಶಕನಾಗುವ ಕನಸು
ವಿವಿಧ ಪ್ರಕಾರದ ಸಂಗೀತಗಳನ್ನು ಕಲಿತುಕೊಂಡು ಸಂಗೀತ ನಿರ್ದೇಶಕನಾಗುವ ಕನಸು ಕಂಡಿದ್ದಾರೆ ಶ್ರೀಕೃಷ್ಣ ರೇವಣ್ಕರ್‌. ಕೇವಲ 16 ವರ್ಷದ ಈತನ ಸಾಧನೆಗೆ ತಂದೆ-ತಾಯಿ ಹಾಗೂ ಸಹೋದರಿಯ ಪ್ರೋತ್ಸಾಹವೂ ಇದೆ. ತಂದೆ ಚಿನ್ನದ ಕೆಲಸಗಾರರಾಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಒಬ್ಬಳು ಸಹೋದರಿಯಿದ್ದು, ಆಕೆಯೂ ಹಾಡುಗಾರಿಕೆ ಹಾಗೂ ತಬಲಾದಲ್ಲಿ ಅಪಾರವಾದ ಆಸಕ್ತಿ ಹೊಂದಿದ್ದಾರೆ. ಕಾಲೇಜಿನಲ್ಲಿ ಹಾಡಿದ ಈ ಹಾಡಿನ ಬಗ್ಗೆ ಸಂಸ್ಥೆಯವರು ಸಹಿತ ಎಲ್ಲ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ವೈರಲ್‌ ಆಗುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ಮತ್ತಷ್ಟು ಸಂಗೀತ ಸಂಯೋಜನೆಗಳನ್ನು ಮಾಡಲು ಆಸಕ್ತನಾಗಿದ್ದೇನೆ ಎನ್ನುತ್ತಾರೆ ಶ್ರೀಕೃಷ್ಣ ರೇವಣ್ಕರ್‌.

Advertisement

ಬಾಲ್ಯದಿಂದಲೇ ಆಸಕ್ತಿ
ಆತನಿಗೆ ಬಾಲ್ಯದಿಂದಲೇ ಸಂಗೀತದ ಬಗ್ಗೆ ಆಸಕ್ತಿಯಿತ್ತು. ಆನ್‌ಲೈನ್‌ ಮೂಲಕವೇ ವೀಣೆಯನ್ನು ಕಲಿತುಕೊಂಡಿದ್ದಾನೆ. ಹಲವು ವರ್ಷಗಳಿಂದ ತಬಲಾವನ್ನು ಕಲಿತಿದ್ದಾನೆ. ಆದರೆ ವೇದಿಕೆಗೆ ಹೋಗಿ ಹಾಡಿದ್ದು ಕಡಿಮೆ. ಕಾಲೇಜಿನಲ್ಲಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಹಾಡಿದ ಹಾಡು ಈಗ ಮತ್ತಷ್ಟು ಜನಮನ್ನಣೆ ಗಳಿಸುತ್ತಿರುವುದು ಬಹಳಷ್ಟು ಖುಷಿ ನೀಡಿದೆ.
-ನಾಗಭೂಷಣ್‌ ಶೇಟ್‌, ಶ್ರೀಕೃಷ್ಣ ರೇವಣ್ಕರ್‌ ಅವರ ತಂದೆ

Advertisement

Udayavani is now on Telegram. Click here to join our channel and stay updated with the latest news.

Next