ಉಡುಪಿ, ಮಾ. 30: ಖಾಸಗಿಯವರ ನಿರ್ವಹಣೆಗೆ ಒಳಪಟ್ಟಿದ್ದ ನಗರದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ರಾಜ್ಯ ಸರಕಾರ ನಿರ್ಧರಿಸಿದೆ.
ಇದನ್ನೂ ಓದಿ:ಕಾಂಗ್ರೆಸ್ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ
ಈ ಸಂಬಂಧ ಮಹತ್ತರ ನಿರ್ಧಾರವನ್ನು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಈ ಆಸ್ಪತ್ರೆಗೆ ಪ್ರಸ್ತುತ ಇರುವ ಎಲ್ಲ ಸಿಬಂದಿ ಸಹಿತ 103 ಮಂದಿ ಹೆಚ್ಚುವರಿ ಸಿಬಂದಿ ಹಾಗೂ ವಾರ್ಷಿಕ ಅನುದಾನ 9.83 ಕೋ.ರೂ.ಗೆ ಅನುಮೋದನೆ ನೀಡಲಾಗಿದೆ.
ರಾಜ್ಯ ಸರಕಾರದ ಈ ಮಹತ್ವದ ನಿರ್ಧಾರವನ್ನು ಶಾಸಕ ಕೆ. ರಘುಪತಿ ಭಟ್ ಸ್ವಾಗತಿಸಿದ್ದಾರೆ. 250 ಬೆಡ್‌ಗಳ ಆಸ್ಪತ್ರೆಯಾಗಿ ಮೇಲ್ದರ್ಜೆ ಗೇರಿದ ಜಿಲ್ಲಾ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ನೂತನ ಕಟ್ಟಡದ ಶಿಲಾನ್ಯಾಸದ ಸಂದರ್ಭ ಮುಖ್ಯಮಂತ್ರಿಯವರು ಈ ಸಂಬಂಧ ಭರವಸೆ ನೀಡಿದ್ದರು.
ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರಕಾರದ ವಶಕ್ಕೆ ಪಡೆದು ಅತ್ಯುತ್ತಮವಾಗಿ ನಿರ್ವಹಿಸುವ ಕುರಿತು ವಿವರಿಸಿದ್ದರು. ಅದರಂತೆ ಇಂದು ನಿರ್ಣಯ ಕೈಗೊಳ್ಳಲಾಗಿದೆ ಎಂದು ರಘುಪತಿ ಭಟ್ ಹೇಳಿದ್ದಾರೆ. ಸರಕಾರದ ವಶದಲ್ಲಿದ್ದ ಆಸ್ಪತ್ರೆಯನ್ನು ಖಾಸಗಿ ನಿರ್ವಹಣೆಗೆ ವಹಿಸಿಕೊಡಲಾಗಿತ್ತು.