Advertisement

“ಉಡುಪಿ: 5 ತಿಂಗಳಲ್ಲಿ 364ಕ್ಕೂ ಹೆಚ್ಚು ಅಗ್ನಿ ಅವಘಡ’

09:01 PM Jun 03, 2019 | Sriram |

ಕಟಪಾಡಿ : ರಾಜ್ಯದಲ್ಲೇ ಅತೀ ಹೆಚ್ಚು ಅಗ್ನಿ ಆಕಸ್ಮಿಕ ಅವಘಡಗಳು ಉಡುಪಿ ಜಿಲ್ಲೆಯಲ್ಲಿ ವರದಿಯಾಗಿದೆ. ಕಳೆದ ಐದು ತಿಂಗಳಲ್ಲಿ ಸುಮಾರು 364ಕ್ಕೂ ಅಧಿಕ ಆಕಸ್ಮಿಕ ಅಗ್ನಿ ಅವಘಡಗಳು ಸಂಭವಿಸಿದ್ದು ಉಡುಪಿ, ಕುಂದಾಪುರ, ಕಾರ್ಕಳ, ಮಲ್ಪೆ ವಿಭಾಗದ ವಾಹನಗಳು ತುರ್ತಾಗಿ ಸ್ಥಳಕ್ಕೆ ತೆರಳಿ ಪರಿಹಾರ ಕಾರ್ಯಾಚರಣೆ ನಡೆಸಿವೆ ಎಂದು ಸಹಾಯಕ ಅಗ್ನಿಶಾಮಕ ಅಧಿಕಾರಿ ನಿಜಗುಣ ಎಂ.ಎಸ್‌. ಹೇಳಿದರು.

Advertisement

ಕಾಪು ಜೇಸಿಐ ವತಿಯಿಂದ ಪಾಂಗಾಳ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ಮೇ 30ರಂದು ಆಯೋಜಿಸಲಾಗಿದ್ದ ಅಗ್ನಿ ಶಾಮಕ ಪ್ರಾತ್ಯಕ್ಷಿಕೆ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತಾದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ನಮ್ಮ ಸುತ್ತಮುತ್ತ ನಡೆಯುವ ಬೆಂಕಿ ಅವಘಡಗಳ ಬಗ್ಗೆ ಜನರೇ ಜಾಗರೂಕತೆ ವಹಿಸುವುದು ಅತ್ಯಗತ್ಯವಾಗಿದೆ. ಅಗ್ನಿ ಅವಘಡವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿéಸಬಾರದು. ಅಗ್ನಿ ಆಕಸ್ಮಿಕ ಸಂಭವಿಸಿದ ತತ್‌ಕ್ಷಣದಲ್ಲಿ ತುರ್ತಾಗಿ ಕೈಗೆತ್ತಿಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳನ್ನು ನಡೆಸುವುದರ ಮೂಲಕ ಅಗ್ನಿ ಅವಘಡದಿಂದ ಜನರನ್ನು, ಪರಿಸರವನ್ನು ಮತ್ತು ಸೊತ್ತು ನಷ್ಟವನ್ನು ತಪ್ಪಿಸಲು ಸಾಧ್ಯವಿದೆ ಎಂದರು.

ಪ್ರಾತ್ಯಕ್ಷಿಕೆಯ ಬಳಿಕ ಜೇಸಿಐ ಭಾರತದ ಸೆಲ್ಯುಟ್‌ ದ ಸೈಲೆಂಟ್‌ ವರ್ಕರ್‌ ಕಾರ್ಯಕ್ರಮದಡಿಯಲ್ಲಿ ಅಗ್ನಿಶಾಮಕ ದಳದ ಅಧಿಕಾರಿಗಳ ಸಹಿತವಾಗಿ ಸಿಬಂದಿಗಳನ್ನು ಸಮ್ಮಾನಿಸಿ, ಗೌರವಿಸಲಾಯಿತು.

ಅಗ್ನಿಶಾಮಕ ಇಲಾಖೆಯ ಸಹಾಯಕ ಅಧಿಕಾರಿಗಳಾದ ಎಂ. ಗೋಪಾಲ್‌, ಸೂರ್ಯ ಪ್ರಕಾಶ್‌, ಮುಂಬಯಿಯ ಉದ್ಯಮಿ ಗೋವಿಂದ ಶೆಟ್ಟಿ, ಪಾಂಗಾಳ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಭೋಜರಾಜ ಶೆಟ್ಟಿ, ದಾನಿ ಸುರೇಶ್‌ ರಾವ್‌, ಪಾಂಗಾಳ ವಿದ್ಯಾವರ್ಧಕ ಫೌಢಶಾಲೆಯ ಮುಖ್ಯ ಶಿಕ್ಷಕಿ ಅರುಣಾ ಬಾೖ, ಜೇಸಿಐ ನಿಕಟಪೂರ್ವ ವಲಯಾಧ್ಯಕ್ಷರು, ಸುಧೀರ್‌ ಶೆಟ್ಟಿ, ದಿನಕರ ಶೆಟ್ಟಿ, ಕಾಪು ಜೇಸಿಐನ ಪೂರ್ವಾಧ್ಯಕ್ಷ ಪ್ರವೀಣ್‌ ಗುರ್ಮೆ ಉಪಸ್ಥಿತರಿದ್ದರು.

Advertisement

ಅಧ್ಯಕ್ಷತೆ ವಹಿಸಿದ್ದ ಕಾಪು ಜೇಸಿಐನ ಅಧ್ಯಕ್ಷೆ ಶಾರದೇಶ್ವರಿ ಗುರ್ಮೆ ಸ್ವಾಗತಿಸಿದರು. ಕಾರ್ಯದರ್ಶಿ ಸುಖಲಾಕ್ಷಿ ಬಂಗೇರ ವಂದಿಸಿದರು.

ಮಾಹಿತಿ ಕಾರ್ಯಾಗಾರ
ಬೆಂಕಿ ಅವಘಡಕ್ಕೆ ಕಾರಣವಾಗುವ ಅಂಶಗಳು, ಬೆಂಕಿ ಅವಘಡದ ಸಂದರ್ಭ ನಾಗರಿಕರು ಕೈಗೆತ್ತಿಕೊಳ್ಳಬಹುದಾದ ಕ್ರಮಗಳು, ಅಗ್ನಿ ಅವಘಡ ಸಂಭವಿಸಿದಾಕ್ಷಣ ಬೆಂಕಿ ನಂದಿಸಲು ಕೈಗೆತ್ತಿಕೊಳ್ಳಬಹುದಾದ ತುರ್ತು ಪರಿಹಾರ ಕಾರ್ಯಗಳು ಮತ್ತು ವಿವಿಧ ಮಾದರಿಯಲ್ಲಿ ನೀರನ್ನು ಚಿಮ್ಮಿಸಿ ಹೇಗೆ ಬೆಂಕಿಯನ್ನು ನಂದಿಸಬಹುದು, ಯಾವ ಸಂದರ್ಭಗಳಲ್ಲಿ ನಾಗರಿಕರು, ವಿದ್ಯಾರ್ಥಿಗಳು ಅಗ್ನಿಸಾಮಕ ಇಲಾಖೆಯನ್ನು ಸಂಪರ್ಕಿಸಬಹುದು ಇತ್ಯಾದಿ ವಿಚಾರಗಳ ಬಗ್ಗೆ ಪ್ರಾತ್ಯಕ್ಷಿಕೆ ಸಹಿತವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next