ಉಡುಪಿ: ಅಂಗ ನ್ಯೂನತೆಯಿದ್ದರೂ, ಒಂದೇ ಕೈಯಿಂದ ಸುಮಾರು 15 ಮಾಸ್ಕ್ ತಯಾರಿಸಿ ಶಾಲೆಗೆ ನೀಡಿ ಕೋವಿಡ್-19 ಕೋವಿಡ್ ವಾರಿಯರ್ಸ್‌ಗೆ ಬೆಂಬಲ ನೀಡಿದ ಬಾಲಕಿ ಸಿಂಧೂರಿ ಅವರ ತೆಂಕನಿಡಿಯೂರು ಮನೆಗೆ ಶಾಸಕ ಕೆ.ರಘುಪತಿ ಭಟ್ ಗುರುವಾರ ಭೇಟಿ ನೀಡಿದರು.
ಬಾಲಕಿಯ ಸಾಧನೆಯನ್ನು ಗುರುತಿಸಿ, ಅಭಿನಂದಿಸಿದರು. ಆಕೆಯ ಮುಂದಿನ ಶೈಕ್ಷಣಿಕ ಜೀವನಕ್ಕೆ ಸಹಕಾರ ನೀಡುವ ಭರವಸೆ ನೀಡಿದರು.
ಮೌಂಟ್ ರೋಸರಿ ಶಾಲೆಯ 5ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಸಿಂಧೂರಿ ಹುಟ್ಟಿನಿಂದಲೇ ಎಡಗೈಯ ಬೆಳವಣಿಗೆಯನ್ನು ಕಳೆದುಕೊಂಡಿದ್ದರು. ಈ ನಡುವೆ ಆಕೆ ಮಾಸ್ಕ್ ತಯಾರಿಸಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತಗೊಂಡಿತ್ತು.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಕೂಡ ಸಿಂಧೂರಿ ಸಾಧನೆಯನ್ನು ಮೆಚ್ಚಿ ಟ್ವೀಟ್ ಮಾಡಿದ್ದರು. ತೆಂಕನಿಡಿಯೂರು ಗ್ರಾ.ಪಂ. ಅಧ್ಯಕ್ಷ ಕೃಷ್ಣಯ್ಯ ಶೆಟ್ಟಿ, ಸದಸ್ಯ ರವಿ ಆಚಾರ್ಯ, ವಿಶು ಕುಮಾರ್ ಕಲ್ಯಾಣಪುರ, ಅಪ್ಪು ಜತ್ತನ್, ಸತೀಶ್, ನಾಗರಾಜ್, ಕೃಷ್ಣ, ನವೀನ್ ಉಪಸ್ಥಿತರಿದ್ದರು.