Advertisement

Udupi: ಎಂಜಿಎಂ ಅಮೃತ ಮಹೋತ್ಸವ ಬೃಹತ್‌ ಶೋಭಾಯಾತ್ರೆ; 2,000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ

03:32 PM Dec 01, 2024 | Team Udayavani |

ಉಡುಪಿ: ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ ಅಂಗವಾಗಿ ಶನಿವಾರ ಬೆಳಗ್ಗೆ ಶ್ರೀ ಕೃಷ್ಣ ಮಠದಿಂದ ಕಾಲೇಜಿನ ವರೆಗೆ ಬೃಹತ್‌ ಶೋಭಾಯಾತ್ರೆ ನಡೆಯಿತು. ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಶೋಭಾಯಾತ್ರೆಯ ಜ್ಯೋತಿ ಹಸ್ತಾಂತರ ಪ್ರಕ್ರಿಯೆಯನ್ನು ಶ್ರೀಕೃಷ್ಣ ಮಠದೆದುರು ರಥಬೀದಿಯಲ್ಲಿ ನಡೆಸಿದರು.

Advertisement

ಎಂಜಿಎಂ ಕಾಲೇಜು ಆರಂಭವಾದಾಗ ಶ್ರೀಕೃಷ್ಣದೇವರಲ್ಲಿ ಪ್ರಾರ್ಥನೆ ನಡೆಸಲಾಗಿತ್ತು. ಆ ಸಮಾರಂಭದಲ್ಲಿ ನಮ್ಮ ಗುರುಗಳೂ ಪಾಲ್ಗೊಂಡು ಆಶೀರ್ವದಿಸಿದ್ದರು. ಅದರ ದ್ಯೋತಕವಾಗಿ ಸಂಸ್ಥೆಯ ಸುವರ್ಣ ಮಹೋತ್ಸವ, ವಜ್ರ ಮಹೋತ್ಸವದಲ್ಲಿಯೂ ಇಲ್ಲಿ ಪ್ರಾರ್ಥನೆ ನಡೆಸಿ ಜ್ಯೋತಿಯನ್ನು ಕೊಂಡೊಯ್ಯುವ ಪದ್ಧತಿ ಬೆಳೆದುಬಂದಿದೆ. ಶ್ರೀಕೃಷ್ಣನ ಆಶೀರ್ವಾದದಿಂದ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಸ್ವಾಮೀಜಿ ಹಾರೈಸಿದರು.

ಅನಂತರ 1949ರಲ್ಲಿ ಎಂಜಿಎಂ ಕಾಲೇಜು ಆರಂಭವಾದ ಗಾಂಧಿ ಮೈನ್‌ ಸ್ಕೂಲ್‌ನಿಂದ ಶೋಭಾಯಾತ್ರೆಯು ಹೊರಟಿತು. ಇಲ್ಲಿ ಡಾ| ಟಿ.ಎಂ.ಎ. ಪೈ ಫೌಂಡೇಶನ್‌ ಅಧ್ಯಕ್ಷ ಟಿ. ಅಶೋಕ್‌ ಪೈ ಅವರು ಶೋಭಾಯಾತ್ರೆಗೆ ಚಾಲನೆ ನೀಡಿದರು. ಸಿಟಿ ಬಸ್‌ನಿಲ್ದಾಣ ಮಾರ್ಗವಾಗಿ ಕಲ್ಸಂಕದ ಮಾಂಡವಿ ಟೈಮ್ಸ್‌ ಸ್ಕ್ವೇರ್‌ ಮುಂಭಾಗದಿಂದ ಕಾಲೇಜು ವಿದ್ಯಾರ್ಥಿಗಳು ಸಹಿತವಾಗಿ ಹಲವು ಟ್ಯಾಬ್ಲೋ ಒಳಗೊಂಡ ಶೋಭಾಯಾತ್ರೆ ಕಡಿಯಾಳಿಯಾಗಿ ಎಂಜಿಎಂ ಕಾಲೇಜು ಆವರಣ ತಲುಪಿತು. ಕಾಲೇಜಿನ ಸುಮಾರು 2000 ಸಮವಸ್ತ್ರಧಾರಿ ವಿದ್ಯಾರ್ಥಿಗಳು ಪಾಲ್ಗೊಂಡು ಶೋಭಾಯಾತ್ರೆಯ ಮೆರುಗ‌ನ್ನು ಹೆಚ್ಚಿಸಿದರು. ಹುಲಿವೇಷ, ನೃತ್ಯಗಾರರು, ನಾಸಿಕ್‌ ಬ್ಯಾಂಡ್‌, ಚೆಂಡೆ, ಯಕ್ಷಗಾನ, ಬೆಂಕಿ ಉಗುಳುವ ರಾಕ್ಷಸ ವೇಷ ಸಹಿತ ವೇಷಭೂಷಣಗಳು ಪ್ರಮುಖ ಆಕರ್ಷಣೆಯಾಗಿತ್ತು. ಇದರ ಜತೆಗೆ ಡಾ| ಟಿಎಂಎ ಪೈ ಅವರ ಜೀವನದ ಟ್ಯಾಬ್ಲೊ ಎಲ್ಲರ ಗಮನ ಸೆಳೆಯಿತು.

ಕಾಲೇಜಿಗೆ ಆಗಮಿಸಿದ ಜ್ಯೋತಿಯನ್ನು ಎಂಜಿಎಂ ಕಾಲೇಜು ಟ್ರಸ್ಟ್‌ ಅಧ್ಯಕ್ಷ ಟಿ.ಸತೀಶ್‌ ಯು. ಪೈ ಸಹಿತ ವಿವಿಧ ಗಣ್ಯರು ಬರಮಾಡಿಕೊಂಡರು. ಸಭಾಮಂಟಪದಲ್ಲಿ ದೀಪ ಬೆಳಗಿಸುವುದರೊಂದಿಗೆ ಎರಡನೇ ದಿನದ ಉದ್ಘಾಟನಾ ಸಮಾರಂಭ ನೆರವೇರಿತು. ಎಂಜಿಎಂ ವಿದ್ಯಾರ್ಥಿಗಳ ಹುಲಿವೇಷ ಮತ್ತು ನಾಸಿಕ್‌ ಬ್ಯಾಂಡ್‌ನ‌ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಭ್ರಮವನ್ನು ಹೆಚ್ಚಿಸಿದವು. ಅತಿಥಿಗಳು ಕಾಲೇಜಿನಲ್ಲಿ ಭಾಷಾ ವಿಚಾರ ಸಂಕಿರಣ ನಡಾವಳಿ ಪುಸ್ತಕ ಬಿಡುಗಡೆ ಮಾಡಿದರು.

Advertisement

ಎಂಜಿಎಂ ನೆನಪು: ಎಂಜಿಎಂ ನೆನಪು ವಿಶೇಷ ಕಾರ್ಯಕ್ರಮದಲ್ಲಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ, ಹಳೆ ವಿದ್ಯಾರ್ಥಿ ಪ್ರೊ| ಎಂ.ಎಲ್‌.ಸಾಮಗ ಮಾತನಾಡಿ, ಈ ಸಂಸ್ಥೆಯೊಂದಿಗೆ ಸಂಬಂಧ ಹೊಂದಲು ನನಗೆ ಹೆಮ್ಮೆ ಅನಿಸುತ್ತದೆ. ಎಂಜಿಎಂ ಶೈಕ್ಷಣಿಕ ಶ್ರೇಷ್ಠತೆಯ ಕೇಂದ್ರ ಮಾತ್ರವಲ್ಲದೆ ಸಾಂಸ್ಕೃತಿಕ ಕೇಂದ್ರವಾಗಿದೆ. ಇದು ಹಲವಾರು ವಿದ್ವಾಂಸರನ್ನು ಬೆಳೆಸಿದೆ ಮತ್ತು ಉಳಿಸಿದೆ. ಸಂಸ್ಥೆಯ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದ ಕೀರ್ತಿ ಪ್ರಾಚಾರ್ಯರಾಗಿದ್ದ ಕು.ಶಿ. ಹರಿದಾಸ್‌ ಭಟ್‌ ಅವರಿಗೆ ಸಲ್ಲುತ್ತದೆ” ಎಂದರು.

ಹಳೇ ವಿದ್ಯಾರ್ಥಿಯಾದ ಲೆಕ್ಕಪರಿಶೋಧಕ ಗುಜ್ಜಾಡಿ ಪ್ರಭಾಕರ ನಾಯಕ್‌ ಅವರು ಎಂಜಿಎಂನ ಅವರ ವಿದ್ಯಾರ್ಥಿ ಕಾಲವನ್ನು ಮೆಲುಕು ಹಾಕಿದರು. ‘ಈ ಕಾಲೇಜು ನನಗೆ ಅಮೂಲ್ಯವಾದ ಜೀವನ ಪಾಠಗಳನ್ನು ಕಲಿಸಿತು. ಇಲ್ಲಿನ ಶಿಕ್ಷಣವು ತುಂಬಾ ಗಂಭೀರವಾಗಿತ್ತು. ನನ್ನ ಸಿಎ ಇಂಟರ್‌ಮೀಡಿಯೆಟ್‌ ಪರೀಕ್ಷೆಯನ್ನು ಶಿಕ್ಷಕರು ನೀಡಿದ ಟಿಪ್ಪಣಿಗಳಲ್ಲಿ ತೇರ್ಗಡೆ ಮಾಡಿದ್ದೆ’ ಎಂಬುದನ್ನು ನೆನಪು ಮಾಡಿಕೊಂಡರು.

ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿ, “ಎಂಜಿಎಂ ಕಾಲೇಜು 50,000 ಹಳೆ ವಿದ್ಯಾರ್ಥಿಗಳನ್ನು ಹೊಂದಿದೆ. ಇಂದಿನ ಮೆರವಣಿಗೆಯಲ್ಲಿ ಸುಮಾರು 2,000 ವಿದ್ಯಾರ್ಥಿಗಳು ಭಾಗವಹಿಸಿದ್ದು, ಇದು ಕಾಲೇಜಿನ ಮೇಲಿರುವ ಅಭಿಮಾನಕ್ಕೆ ಸಾಕ್ಷಿ” ಎಂದರು.

ಎಜಿಇ ಕಾರ್ಯದರ್ಶಿ ಬಿ.ಪಿ.ವರದರಾಯ ಪೈ, ಟಿ.ಮೋಹನ್‌ದಾಸ್‌ ಪೈ ಕೌಶಲಾಭಿವೃದ್ಧಿ ಕೇಂದ್ರದ ನಿರ್ದೇಶಕ ಟಿ.ರಂಗ ಪೈ, ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ| ದೇವಿದಾಸ್‌ ನಾಯ್ಕ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಎಂಜಿಎಂ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ ಸ್ವಾಗತಿಸಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊ| ವನಿತಾ ಮಯ್ಯ ವಂದಿಸಿದರು. ಆಂಗ್ಲ ಭಾಷಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸ್ಫೂರ್ತಿ ಕೆ. ನಿರೂಪಿಸಿದರು.

ಎಂಜಿಎಂ ನಡೆದು ಬಂದ ಹಾದಿ ಸಾಕ್ಷ್ಯಚಿತ್ರ ಪ್ರದರ್ಶನ
ಎಂಜಿಎಂ ಕಾಲೇಜು ನಡೆದು ಬಂದ ಹಾದಿಯ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು. ಮಧ್ಯಾಹ್ನದ ಅನಂತರದ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಸಂಪನ್ನಗೊಂಡಿತು. ಸಂಜೆ 5ರ ಅನಂತರ ಪ್ರಸಿದ್ಧ ಸೀತಾರ್‌ ವಾದಕ ಮುಂಬಯಿ ಚಿಂತನ ಕಟ್ಟಿ ಮತ್ತು ಬಳಗದಿಂದ ಭಾರತೀಯ ಶಾಸ್ತ್ರೀಯ ಸಂಗೀತ ರಾಗಗಳನ್ನೊಳಗೊಂಡ ವಾದ್ಯಮೇಳ ‘ಊರ್ಜಾ’ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next