Advertisement

Udupi: ಅಕ್ರಮ ಮೀನುಗಾರಿಕೆ ಬೋಟುಗಳಿಗೆ ಗರಿಷ್ಠ ದಂಡ: ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ

01:18 AM Oct 06, 2024 | Team Udayavani |

ಮಣಿಪಾಲ: ಜಿಲ್ಲೆಯ ಬಂದರಿಗೆ ಅಕ್ರಮವಾಗಿ ಪ್ರವೇಶಿಸುವ ಹೊರ ರಾಜ್ಯದ ಬೋಟುಗಳಿಗೆ ಗರಿಷ್ಠ ದಂಡ ವಿಧಿಸಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಈ ವಿಷಯವಾಗಿ ಮೀನುಗಾರಿಕೆ ಇಲಾಖೆ ಮತ್ತು ಕರಾವಳಿ ಕಾವಲು ಪಡೆ ಜಂಟಿ ಕಾರ್ಯಾಚರಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಹೇಳಿದರು.

Advertisement

ಹೊರ ರಾಜ್ಯದ ಬೋಟುಗಳ ಅಕ್ರಮ ಪ್ರವೇಶ, ಬುಲ್‌ಟ್ರಾಲ್‌ ಹಾಗೂ ಲೈಟ್‌ ಹಾಕಿ ಮೀನು ಹಿಡಿಯುವುದು ಸಹಿತ ಮೀನುಗಾರರ ವಿವಿಧ ಸಮಸ್ಯೆಗಳ ಕುರಿತು ಇಲಾಖೆಯ ಅಧಿಕಾರಿಗಳು ಹಾಗೂ ಮೀನುಗಾರ ಮುಖಂಡರು, ಮೀನುಗಾರ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆಸಿದರು.

ಸದ್ಯ ಕೇವಲ 5 ಸಾ. ರೂ. ದಂಡ ವಿಧಿಸುವುದರಿಂದ ಅವರಿಗೆ ಭಯ ಇಲ್ಲದಾಗಿದೆ. ಅವರಿಗೆ ಕಾನೂನಿನ ಭಯ ಹುಟ್ಟಿಸಲು ಅವರು ತರುವ ಮೀನಿನ ಮೌಲ್ಯದ 5 ಪಟ್ಟು ದಂಡ ವಿಧಿಸಿ, ಬೋಟನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಇದಕ್ಕಾಗಿ ಮೀನುಗಾರಿಕೆ ಇಲಾಖೆ ಹಾಗೂ ಕರಾವಳಿ ಕಾವಲು ಪಡೆ ಒಟ್ಟಾಗಿ ಕಾರ್ಯಾಚರಣೆ ಮಾಡಬೇಕು. ಕಾವಲು ಪಡೆಯವರು ಕರೆ ಮಾಡಿದ ಸಂದರ್ಭದಲ್ಲಿ ಇಲಾಖೆ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಬೇಕು. ಇದಕ್ಕಾಗಿ ಪ್ರತ್ಯೇಕ ತಂಡ ರಚಿಸಿ, ದಿನದ 24 ಗಂಟೆಯೂ ಕಾರ್ಯಾಚರಣೆ ಮಾಡವಂತೆ ಮಾಡಬೇಕು ಎಂದು ಸೂಚನೆ ನೀಡಿದರು.

ಕಾಯ್ದೆ ತಿದ್ದುಪಡಿಗೆ ಪ್ರಸ್ತಾವನೆ
ಅಕ್ರಮವಾಗಿ ಪ್ರವೇಶಿಸುವ ಬೋಟುಗಳಿಗೆ ಗರಿಷ್ಠ ದಂಡ ವಿಧಿಸಲು ಕಾಯ್ದೆಗೆ ಸೂಕ್ತ ತಿದ್ದುಪಡಿ ತರಲು ಬೇಕಾದ ಪ್ರಸ್ತಾವನೆಯನ್ನು ರಾಜ್ಯಕ್ಕೆ ಶೀಘ್ರದಲ್ಲೇ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಅಧಿಕಾರ ಬಳಸಿ
ಅಕ್ರಮ ತಡೆಯಲು ಸರಕಾರ ಅಧಿಕಾರ ನೀಡಿಲ್ಲ ಎಂಬುದು ಸರಿಯಲ್ಲ. ಕಾಯ್ದೆಯನ್ನು ಸರಿಯಾಗಿ ಅರ್ಥೈಸಿಕೊಂಡು ಅನುಷ್ಠಾನ ಮಾಡಬೇಕು. ಕಾಯ್ದೆಯಲ್ಲಿ ಅವಕಾಶವಿದೆ. ಅದರಂತೆ ಅಕ್ರಮ ತೆಡೆಗೆ ಕಠಿನ ಕ್ರಮ ತೆಗೆದುಕೊಳ್ಳಬೇಕು ಎಂದು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಎಸ್‌.ಪಿ. ಡಾ| ಕೆ. ಅರುಣ್‌ ನಿರ್ದೇಶಿಸಿದರು.

Advertisement

ಮೀನುಗಾರಿಕೆ ಮುಖಂಡರು ಮಾತನಾಡಿ, ಬುಲ್‌ಟ್ರಾಲ್‌, ಲೈಟ್‌ಹಾಕಿ ಮೀನು ಹಿಡಿಯುವುದು ಇತ್ಯಾದಿ ನಿಷೇಧ ಕಟ್ಟುನಿಷ್ಠಾಗಿ ಅನುಷ್ಠಾನ ಆಗಬೇಕು. ಇದು ಒಂದು ಬಂದರಿಗೆ ಸೀಮಿತವಾಗಿ ಆಗಬಾರದು. ಕರಾವಳಿಯ ಎಲ್ಲ ಬಂದರುಗಳಲ್ಲೂ ಏಕರೂಪತೆ ಇರಬೇಕು. ಹೊರ ರಾಜ್ಯಗಳಲ್ಲಿ ಹೇಗಿದೆ ಎಂಬುದನ್ನು ಪರಿಶೀಲಿಸಬೇಕು. ಒಂದು ಭಾಗದ ಮೀನುಗಾರರಿಗೆ ಸಮಸ್ಯೆ ತಂದೊಡ್ಡಬಾರದು ಎಂದು ಆಗ್ರಹಿಸಿದರು.

ನಿಷೇಧಿತ ಮೀನುಗಾರಿಕೆಗೆ ಅವಕಾಶ ನೀಡುವುದಿಲ್ಲ. ಆದರೆ ನಾಡದೋಣಿ ಮೀನುಗಾರರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಜಿಲ್ಲೆಯ ವಿವಿಧ ಭಾಗದ ಮೀನುಗಾರ ಮುಖಂಡರು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next