Advertisement
ಶುಕ್ರವಾರ ಮಳೆ ಕಡಿಮೆ ಪ್ರಮಾಣ ಇರುವುದರಿಂದ ಮಳೆ ನೀರು ಹರಿಯುವ ಕಾಲುವೆ, ಇಂದ್ರಾಣಿ ನದಿ ತುಂಬಿ ಹರಿಯುವ ಪ್ರಮಾಣದ ವೇಗ ತಗ್ಗಿದ್ದು, ಹಲವೆಡೆ ತಗ್ಗು ಪ್ರದೇಶಗಳಲ್ಲಿಯೂ ನೀರು ಕಡಿಮೆಯಾಗಿದೆ. ಗುರುವಾರ ಮನೆಗಳಿಗೆ ನೀರು ನುಗ್ಗಿದ್ದರಿಂದ ಪರದಾಡಿದ ಜನರು, ಶುಕ್ರವಾರ ನೆರೆ ಕಡಿಮೆಯಾದ ಬಳಿಕ ಮನೆಗಳನ್ನು ಸ್ವತ್ಛ ಮಾಡಲು ಪರದಾಡಿದರೆ, ಬಡಗುಪೇಟೆಯಲ್ಲಿ ವ್ಯಾಪಾರಿಗಳು ಮಳಿಗೆಗಳನ್ನು ಸ್ವತ್ಛಗೊಳಿಸಿದರು.
ನೆರೆಯಿಂದಾಗಿ ನಗರದ ಕೆಲವು ಕಡೆಗಳಲ್ಲಿ ನೆರೆ ಪ್ರಮಾಣ ತಗ್ಗಿದ್ದರೂ ಕೆಲವೆಡೆ ಕೊಂಚ ನೀರು ಇರುವುದರಿಂದ ಸಾಂಕ್ರಾಮಿಕ ರೋಗ ಭೀತಿ ಜನರಿಗೆ ಕಾಡುತ್ತಿದೆ. ಸಣ್ಣ ಚರಂಡಿಗಳಲ್ಲಿ ಅಪಾರ ಪ್ರಮಾಣದಲ್ಲಿ ತ್ಯಾಜ್ಯ ಹರಿದು ಬಂದಿದ್ದು ಹಲವೆಡೆ ಬ್ಲಾಕ್ ಆಗಿ ನೀರಿನ ಹರಿವು ಸಮಸ್ಯೆಯಾಗಿದೆ. ಇದರಲ್ಲಿ ಸೊಳ್ಳೆ, ಕ್ರಿಮಿ ಕೀಟಗಳು ಉತ್ಪತ್ತಿಯಾಗಿ ರೋಗ ಹಬ್ಬುವ ಸಾಧ್ಯತೆ ಇರುವುದರಿಂದ ನಗರಸಭೆ, ಆರೋಗ್ಯ ಇಲಾಖೆ ಈ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಿದೆ. ಪ್ರತೀ ವರ್ಷವು ನಿಲ್ಲದ ಗೋಳು
ಉಡುಪಿ ನಗರದಲ್ಲಿ ಕೆಲವು ಸೂಕ್ಷ್ಮ ಪ್ರದೇಶಗಳು ಪ್ರತೀವರ್ಷ ನೆರೆ ಬಾಧಿತ ಸ್ಥಳವಾಗಿ ಜನರು ಗೋಳಾಟ ಅನುಭವಿಸುವ ಸ್ಥಿತಿ ಬಂದಿದೆ. ಬೈಲಕೆರೆ, ಮಠದಬೆಟ್ಟು, ಬನ್ನಂಜೆ ಗರಡಿ ರಸ್ತೆ, ಗುಂಡಿಬೈಲು ಪರಿಸರ ಪ್ರತೀವರ್ಷ ನೆರೆ ಹಾಟ್‌ಸ್ಪಾಟ್ ಆಗಿದೆ. ಇಲ್ಲಿನ ಜನರು ನೆರೆಯಿಂದಾಗಿ ರೋಸಿ ಹೋಗಿದ್ದಾರೆ. ಮನೆಗೆ ನೀರು ನುಗ್ಗಿದಾಗ ರಕ್ಷಣ ಕಾರ್ಯಚರಣೆಗೆ ತೆರಳಿದರೆ ಕೆಲವರು ಮನೆ ಬಿಟ್ಟು ಬರುವುದಿಲ್ಲ ಎಂದು ಪಟ್ಟು ಹಿಡಿಯುತ್ತಾರೆ. ನಮ್ಮ ಈ ಸಂಕಷ್ಟಕ್ಕೆ ಕೊನೆ ಯಾವಾಗ ಎಂಬುದು ಈ ಭಾಗದ ಜನರ ಪ್ರಶ್ನೆಯಾಗಿದೆ.
Related Articles
ಉಡುಪಿ ನಗರ ಸಂಪೂರ್ಣ ಅವೈಜ್ಞಾನಿಕವಾಗಿ ರೂಪುಗೊಳ್ಳುತ್ತಿರುವುದು ಈ ಸಮಸ್ಯೆಗೆ ಕಾರಣವಾಗಿದೆ ಎಂಬುದು ತಜ್ಞರ ಅಭಿಪ್ರಾಯ. ತಗ್ಗು ಪ್ರದೇಶದ ಕೃಷಿ ಭೂಮಿಗಳು ಜನ ವಸತಿ ಪ್ರದೇಶಗಳಾಗಿ ಬದಲಾಗಿರುವುದು, ಮಳೆ ನೀರು ಹರಿಯುವ ಕಾಲುವೆಗಳ ಒತ್ತುವರಿ, ಮಳೆ ನೀರು ಸಾಗಲು ವಿಶಾಲವಾದ ಕಾಲುವೆಗಳಿಗೆ ಜಾಗದ ಕೊರತೆಯಿಂದಾಗಿ ಈ ಸಮಸ್ಯೆ ಮರುಕಳಿಸುತ್ತಲೇ ಇರುತ್ತದೆ. ಇಂದ್ರಾಳಿಯಿಂದ ಕಲ್ಸಂಕ ಗುಂಡಿಬೈಲು, ಕೊಡಂಕೂರು, ನಿಟ್ಟೂರು ಮೂಲಕ ಸಾಗುವ ಇಂದ್ರಾಣಿ ನದಿಗೆ. ನಗರದ ಹಲವು ಭಾಗದಲ್ಲಿ ಮಳೆ ನೀರು ಸಂಪರ್ಕಿಸುವ ಸಣ್ಣ ತೋಡು, ಕಾಲುವೆಗಳು ಇವೆ. ಇದರಲ್ಲಿ ಶೇ.60ರಷ್ಟರಲ್ಲಿ ಮಾತ್ರ ಮಳೆ ನೀರು ಹರಿದು ಹೋಗುವ ವ್ಯವಸ್ಥೆ ಇದೆ. ಶೇ.40ರಷ್ಟು ನಗರದ ಒಳಗಿನ ಪರಿಸರದಲ್ಲಿ ಬ್ಲಾಕ್ ಆಗುತ್ತದೆ. ಉಳಿದಂತೆ ಇಂದ್ರಾಣಿ ಹರಿಯುವ ಮುಖ್ಯ ಕಾಲುವೆ ಕಿರಿದಾಗಿರುವುದರಿಂದ ಹರಿವು ಪ್ರಮಾಣ ಹೆಚ್ಚಾಗಿ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿಸಿ ಅವಾಂತರ ಸೃಷ್ಟಿಸುತ್ತದೆ. ಈ ಬಗ್ಗೆ ತಜ್ಞರಿಂದ ವೈಜ್ಞಾನಿಕವಾಗಿ ಸಮೀಕ್ಷೆ, ವರದಿ ಸಿದ್ಧಪಡಿಸಿ ಪರಿಹಾರ ಕ್ರಮ ತೆಗೆದುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ನಗರಸಭೆ ಗಂಭೀರ ಚಿಂತನೆ ನಡೆಸಬೇಕು ಎಂಬುದು ತಜ್ಞರ ಅಭಿಪ್ರಾಯ.
Advertisement