Advertisement

ಅಪರೂಪದ ಅಂಚೆ ಚೀಟಿ ಸಂಗ್ರಹಕಾರ ಲಕ್ಷ್ಮೀನಾರಾಯಣ ನಾಯಕ್‌

01:54 AM Nov 01, 2021 | Team Udayavani |

ಉಡುಪಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಅಪರೂಪದ ಅಂಚೆ ಚೀಟಿ ಸಂಗ್ರಹಕಾರ ಲಕ್ಷ್ಮೀನಾರಾಯಣ ನಾಯಕ್‌ ಅವರು ಜಿಲ್ಲಾದ್ಯಂತ 75 ಕಡೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ವಿಶೇಷ ಅಂಚೆ ಚೀಟಿ ಪ್ರದರ್ಶನವನ್ನು ಹಮ್ಮಿಕೊಂಡಿದ್ದಾರೆ.

Advertisement

ಲಕ್ಷ್ಮೀನಾರಾಯಣ ನಾಯಕ್‌ ಸಂತೆಕಟ್ಟೆ ಕಲ್ಯಾಣಪುರದ ನಿವಾಸಿ. ಪ್ರಸ್ತುತ ಮಣಿಪಾಲದ ಎಂಐಟಿಯಲ್ಲಿ ಸಿಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಕಲ್ಯಾಣಪುರ ಹಿಂದೂ ಹಿ.ಪ್ರಾ. ಶಾಲೆಯಲ್ಲಿ ಪಾಠ ಕೇಳುವಾಗ ಶಿಕ್ಷಕರ ಪ್ರೇರಣೆಯಿಂದ ಮೊದಲ ಬಾರಿಗೆ ಅಂಚೆ ಚೀಟಿ ಸಂಗ್ರಹಕ್ಕೆ ಕೈ ಹಾಕಿದ ಲಕ್ಷ್ಮೀನಾರಾಯಣ ಅನಂತರ ಹಿಂದಿರುಗಿ ನೋಡಲಿಲ್ಲ. ಅವರ ಆಸಕ್ತಿಗೆ ಬ್ಯಾಂಕ್‌ ಉದ್ಯೋಗಿಯಾಗಿದ್ದ ತಂದೆ ಪ್ರೇರಣೆ ನೀಡುತ್ತಿದ್ದರು.

ವಿಶೇಷ ಸಂಗ್ರಹ
ಲಕ್ಷ್ಮೀನಾರಾಯಣ ಅವರಲ್ಲಿ ಕರ್ನಾಟಕ ರಾಜ್ಯೋತ್ಸವಕ್ಕೆ ಸಂಬಂಧಿಸಿದ ವಿಶೇಷ ಸಂಗ್ರಹವಿದೆ. ರಾಜ್ಯ ಸರಕಾರ ಇದುವರೆಗೆ ಬಿಡುಗಡೆ ಗೊಳಿಸಿದ ಸಾಧಕರ, ಪ್ರವಾಸಿ ಸ್ಥಳಗಳ, ಶ್ರದ್ಧಾ ಕೇಂದ್ರ, ರಾಜ್ಯದ ನೆಲ ಜಲ, ಸಂಸ್ಕೃತಿಗೆ ಸಂಬಂಧಿಸಿದ 95 ಅಂಚೆ ಚೀಟಿಗಳ ಪೈಕಿ ಲಕ್ಷ್ಮೀನಾರಾಯಣ ನಾಯಕ್‌ ಅವರ ಬಳಿ ಉಡುಪಿಯ ಶಂಕರಪುರ ಮಲ್ಲಿಗೆ, ಕವಿಮುದ್ದಣ ಅಂಚೆ ಚೀಟಿ ಸೇರಿದಂತೆ ಇತರ 87 ಅಂಚೆ ಚೀಟಿಗಳ ಬೃಹತ್‌ ಸಂಗ್ರಹವಿದೆ. ಇದುವರೆಗೆ ಶಾಲಾ ಕಾಲೇಜುಗಳಲ್ಲಿ, ಸಾಹಿತ್ಯ ಸಮ್ಮೇಳನಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ. ಇದಕ್ಕೆ ಯಾವುದೇ ರೀತಿಯಾದ ಸಂಭಾವನೆ ಹಾಗೂ ಇತರ ವಸ್ತುಗಳ ಬೇಡಿಕೆ ಇಡುವುದಿಲ್ಲ.

ಇದನ್ನೂ ಓದಿ:ಜಮ್ಮು- ಕಾಶ್ಮೀರ: 3 ವಾರದಲ್ಲಿ 25 ಶಂಕಿತರ ಬಂಧನ: ಎನ್‌ಐಎ

28 ಸಾವಿರ ಅಂಚೆ ಚೀಟಿ
ದೇಶದ ಮೂಲೆ ಮೂಲೆಗಳಿಂದ ಸರಕಾರ ವಿಶೇಷ ಸಂದರ್ಭಗಳಲ್ಲಿ ಹೊರತಂದ ನಾಣ್ಯ, ಅಂಚೆ ಚೀಟಿಗಳನ್ನು ಸಂಗ್ರಹಿಸಿದ್ದಾರೆ. ಇದುವರೆ 168 ದೇಶಗಳ 6,000ಕ್ಕೂ ಅಧಿಕ ನಾಣ್ಯ ಹಾಗೂ ನೋಟು, ದೇಶ-ವಿದೇಶಗಳ ಸುಮಾರು 28ಸಾವಿರಕ್ಕೂ ಅಧಿಕ ಅಂಚೆ ಚೀಟಿಗಳ ಸಂಗ್ರಹವಿದೆ.

Advertisement

ಪ್ರೋತ್ಸಾಹದಿಂದ ಉತ್ಸಾಹ
ನಮ್ಮ ಕಾಲದಲ್ಲಿ ಅಂಚೆ ಚೀಟಿ ಸಂಗ್ರಹದಿಂದಲೇ ಮನೋರಂಜನೆ ಸಿಗುತ್ತಿತ್ತು. ಪೋಷಕರು ನೀಡುತ್ತಿದ್ದ ಹಣವನ್ನು ಕ್ರೋಡೀಕರಿಸಿ ಅಂಚೆ ಚೀಟಿ ಖರೀದಿಸುತ್ತಿದ್ದೆ. ಸಾರ್ವಜನಿಕರ ಪ್ರೋತ್ಸಾಹ ನನ್ನ ಹವ್ಯಾಸಕ್ಕೆ ಹೊಸ ಉತ್ಸಾಹ ನೀಡುತ್ತಿದೆ.
– ಲಕ್ಷ್ಮೀನಾರಾಯಣ ನಾಯಕ್‌,
ಅಂಚೆ ಚೀಟಿ ಸಂಗ್ರಹಕಾರ

Advertisement

Udayavani is now on Telegram. Click here to join our channel and stay updated with the latest news.

Next