Advertisement

ಉಡುಪಿಯಲ್ಲಿ ಸಂಭ್ರಮದ ಲಕ್ಷದೀಪೋತ್ಸವ ಆರಂಭ

08:46 PM Nov 27, 2020 | sudhir |

ಉಡುಪಿ: ಶ್ರೀಕೃಷ್ಣಮಠದಲ್ಲಿ ಶುಕ್ರವಾರ ಉತ್ಥಾನದ್ವಾದಶಿಯಂದು ಬೆಳಗ್ಗೆ ತುಳಸೀಪೂಜೆ ನಡೆದರೆ, ಸಂಜೆ ಕ್ಷೀರಾಬ್ದಿ ಪೂಜೆ ನಡೆದ ಬಳಿಕ ತೆಪ್ಪೋತ್ಸವ ಸಹಿತ ಲಕ್ಷದೀಪೋತ್ಸವ, ವಾರ್ಷಿಕ ರಥೋತ್ಸವ ಆರಂಭಗೊಂಡಿತು.

Advertisement

ದ್ವಾದಶಿಯಾದ ಕಾರಣ ಮುಂಜಾವದಿಂದ ಮಹಾಪೂಜೆಯನ್ನು, ಬಳಿಕ ತುಳಸೀ ಪೂಜೆಯನ್ನು ಪರ್ಯಾಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು ನೆರವೇರಿಸಿದರು. ಇದಕ್ಕೂ ಮುನ್ನ ಒಂದು ತಿಂಗಳಿಂದ ನಡೆಯುತ್ತಿದ್ದ ಪಶ್ಚಿಮಜಾಗರ ಪೂಜೆಯನ್ನು ಸಮಾಪನಗೊಳಿಸಿದರು. ಸಂಜೆ ಮಧ್ವಸರೋವರದ ಮಧ್ಯದ ಮಂಟಪದಲ್ಲಿ ಕ್ಷೀರಾಬ್ಧಿ ಅರ್ಘ್ಯವನ್ನು ನೀಡಲಾಯಿತು. ಪೂಜೆಯಲ್ಲಿ ಪರ್ಯಾಯ ಅದಮಾರು ಮಠದ ಹಿರಿಯ, ಕಿರಿಯ, ಕೃಷ್ಣಾಪುರ, ಪಲಿಮಾರು ಹಿರಿಯ, ಕಿರಿಯ, ಪೇಜಾವರ ಸ್ವಾಮೀಜಿಯವರು ಅರ್ಘ್ಯವನ್ನು ನೀಡಿದರು.

ಅಪರಾಹ್ನ ರಥಬೀದಿಯಲ್ಲಿ ಅಳವಡಿಸಿದ ದಳಿಗಳ ಮೇಲೆ ಗೋಮಯವನ್ನು ಇಟ್ಟು ಅದರ ಮೇಲೆ ಹಣತೆ ಇಡುವ ಮುಹೂರ್ತವನ್ನು ವಿವಿಧ ಸ್ವಾಮೀಜಿಯವರು ನೆರವೇರಿಸಿದರು. ಸಂಜೆ ಕ್ಷೀರಾಬ್ಧಿ ಬಳಿಕ ರಾತ್ರಿ ಪೂಜೆ ನಡೆಯಿತು. ಪೂಜೆಯ ಬಳಿಕ ಚಾತುರ್ಮಾಸ್ಯವ್ರತ ಕಾಲದಲ್ಲಿ ಒಳಗಿದ್ದ ಉತ್ಸವ ಮೂರ್ತಿಯನ್ನು ಬಿರುದಾವಲಿಗಳಲ್ಲಿ ಹೊರಗೆ ತಂದು ರಾತ್ರಿ ಆಕರ್ಷಕ ತೆಪ್ಪೋತ್ಸವ ನಡೆಯಿತು. ಇದೇ ವೇಳೆ ರಥಬೀದಿ, ಮಧ್ವಸರೋವರದಲ್ಲಿ ಸಾವಿರಾರು ಹಣತೆಗಳ ದೀಪಗಳು ಕಂಗೊಳಿಸಿದವು. ಮಧ್ವಸರೋವರದಲ್ಲಿ ಭಕ್ತಿ ಗೀತೆಗಳನ್ನು ಏರ್ಪಡಿಸಲಾಗಿತ್ತು. ತೆಪ್ಪೋತ್ಸವದ ಬಳಿಕ ರಥೋತ್ಸವ ನಡೆಯಿತು.

ಶ್ರೀಕೃಷ್ಣಮುಖ್ಯಪ್ರಾಣ, ಶ್ರೀಅನಂತೇಶ್ವರ, ಶ್ರೀಚಂದ್ರಮೌಳೀಶ್ವರ ಉತ್ಸವ ಮೂರ್ತಿಗಳನ್ನು ಗರುಡರಥ ಮತ್ತು ಮಹಾಪೂಜಾ ರಥಗಳಲ್ಲಿರಿಸಿ ಉತ್ಸವ ನಡೆಸಲಾಯಿತು. ಪರ್ಯಾಯ ಅದಮಾರು ಹಿರಿಯ, ಕಿರಿಯ, ಕೃಷ್ಣಾಪುರ, ಪಲಿಮಾರು ಹಿರಿಯ, ಕಿರಿಯ, ಪೇಜಾವರ, ಕಾಣಿಯೂರು ಸ್ವಾಮೀಜಿಯವರು ಉತ್ಸವದಲ್ಲಿ ಪಾಲ್ಗೊಂಡರು.

Advertisement

ವಿರಳ ಜನಸ್ತೋಮ
ಕೊರೊನಾ ಕಾರಣದಿಂದ ಸೀಮಿತ ಭಕ್ತರಿಗೆ ಮಾತ್ರ ಅವಕಾಶವಿದ್ದ ಕಾರಣ ಆಯ್ದ ಕಾರ್ಯಕರ್ತರು ಹಣತೆಗಳನ್ನು ಬೆಳಗಿದರು. ರಥಬೀದಿ ಪ್ರವೇಶಿಸದಂತೆ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು. ಈ ಕಾರಣದಿಂದ ರಥಬೀದಿಯಲ್ಲಿ ದೊಡ್ಡ ಪ್ರಮಾಣದ ಭಕ್ತ ವರ್ಗ ಇದ್ದಿರಲಿಲ್ಲ.

ಪರಿಶುದ್ಧ ಎಳ್ಳೆಣ್ಣೆಯಲ್ಲಿ ಉತ್ಸವ
ಪರಿಶುದ್ಧವಾಗಿ ಮಾಡಿಸಿದ ಎಳ್ಳೆಣ್ಣೆಯಲ್ಲಿ ಲಕ್ಷದೀಪೋತ್ಸವವನ್ನು ಆಚರಿಸಲಾಯಿತು. ನ. 30ರ ವರೆಗೆ ನಿತ್ಯ ಲಕ್ಷದೀಪೋತ್ಸವ ನಡೆಯಲಿದೆ. ನಾಲ್ಕು ದಿನಗಳ ಕಾಲ ಸುಮಾರು 600 ಲೀ. ಎಳ್ಳೆಣ್ಣೆಯಲ್ಲಿ ದೀಪಗಳನ್ನು ಉರಿಸಲಾಗುತ್ತದೆ.

ಶುಚಿಗೊಳಿಸುವವರಿಗೂ ಸೇವಾವಕಾಶ
ನಿತ್ಯ ರಥಬೀದಿಯನ್ನು ಶುಚಿಗೊಳಿಸುವ ಪೌರಕಾರ್ಮಿಕರಿಗೂ ಲಕ್ಷದೀಪೋತ್ಸವದಲ್ಲಿ ಇತರ ಕಾರ್ಯಕರ್ತರ ಜತೆ ದೀಪಗಳನ್ನು ಬೆಳಗಿಸಲು ಅವಕಾಶ ಕಲ್ಪಿಸಲಾಗಿತ್ತು.

4,000 ಗೋಮಯ ಹಣತೆ
ದೀಪಾವಳಿ ಸಂದರ್ಭ ಝಾರ್ಖಂಡ್‌ನಿಂದ ತರಿಸಿ ವಿತರಿಸಿದ ಕಡಿಯಾಳಿ ಗಣೇಶೋತ್ಸವ ಸಮಿತಿಯವರು ಲಕ್ಷ ದೀಪೋತ್ಸವಕ್ಕೆ ಸುಮಾರು 4,000 ಗೋಮಯ ಹಣತೆಯನ್ನು ಲಕ್ಷದೀಪೋತ್ಸವದಲ್ಲಿ ದೀಪಗಳನ್ನು ಬೆಳಗಿಸಲು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next