Advertisement

“ಚಿಣ್ಣ ಕೃಷ್ಣ’ನಿಂದ ಉಡುಪಿ ಚಿನ್ನದ ನಾಡು

12:50 PM Jun 04, 2019 | keerthan |

ಉಡುಪಿ: ಉಡುಪಿಯ ಶ್ರೀಕೃಷ್ಣ ಚಿಣ್ಣ ಸ್ವರೂಪಿ ಅಂದರೆ ಬಾಲಕ. ಈತನಿಗೆ ಚಿನ್ನದ ಗೋಪುರ ಸಮರ್ಪಿಸುವ ಮೂಲಕ ಚಿನ್ನದ ನಾಡಾಗಲಿ ಎಂದು ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹಾರೈಸಿದರು.

Advertisement

ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪಲಿಮಾರು ಸ್ವಾಮೀಜಿಯವರು ನಿರ್ಮಿಸಿದ ಸ್ವರ್ಣ ಗೋಪುರದ ಸಮರ್ಪಣೋತ್ಸವದ ಅಂಗವಾಗಿ ಶನಿವಾರ ಜೋಡುಕಟ್ಟೆಯಿಂದ ಶ್ರೀಕೃಷ್ಣ ಮಠದವರೆಗೆ ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿ, ಕಿದಿಯೂರು ವಿಷ್ಣುಮೂರ್ತಿ ಮತ್ತು ವನದುರ್ಗಾ ಸೇವಾ ಸಮಿತಿ ನೇತೃತ್ವದಲ್ಲಿ ಸುವರ್ಣ ಶಿಖರ ಮತ್ತು ರಜತ ಕಲಶದ ಅದ್ದೂರಿ ಐತಿಹಾಸಿಕ ಕ್ಷಣಗಳ ಮೆರವಣಿಗೆಯ ಭವ್ಯ ಶೋಭಾಯಾತ್ರೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಇದು ಐತಿಹಾಸಿಕ, ಅಭೂತಪೂರ್ವ ಕಾರ್ಯಕ್ರಮ ಎಂದು ಬಣ್ಣಿಸಿದರು.

ಭಗವಂತನಿಗೆ ನಮ್ಮ ಹಣ, ಚಿನ್ನ, ಬೆಳ್ಳಿ ಯಾವುದೂ ಬೇಡ. ಆತನಿಗೆ ಲಾಭವೂ ಇಲ್ಲ, ನಷ್ಟವೂ ಇಲ್ಲ. ಆತ ನಿತ್ಯತೃಪ್ತ. ಆದರೆ ಲೋಕಕಲ್ಯಾಣಾರ್ಥವಾಗಿ ಇಂತಹ ಭಗವತ್ಪ್ರೇರಿತ ಕಾರ್ಯಕ್ರಮ ಗಳನ್ನು ಪಲಿಮಾರು ಶ್ರೀಗಳು ಆಯೋಜಿಸಿದ್ದಾರೆಂದು ಹೇಳಿದರು.

ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಡಾ| ಜಿ. ಶಂಕರ್‌, ಮಣಿಪಾಲ ವಿ.ವಿ. ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಶುಭ ಕೋರಿದರು. ಶ್ರೀ ಉತ್ತರಾದಿ ಮಠದ ಯತಿ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ. ರಘುಪತಿ ಭಟ್‌, ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ಮನೋಹರ್‌ ಎಸ್‌. ಶೆಟ್ಟಿ, ಭುವನೇಂದ್ರ ಕಿದಿಯೂರು, ಹರಿಯಪ್ಪ ಕೋಟ್ಯಾನ್‌ ಉಪಸ್ಥಿತರಿದ್ದರು.

ರಜತ ಕಲಶಗಳ ರಥ, ಶ್ರೀಕೃಷ್ಣಾರ್ಜುನ ಭೀಮರು, ಟ್ಯಾಬ್ಲೋ
ಶ್ರೀಕೃಷ್ಣ ಮಠದ ಮೂರು ರಥಗಳ ಪತಾಕೆಯನ್ನು 1008 ಬೆಳ್ಳಿಯ ಕಲಶಗಳನ್ನು ಬಳಸಿ ಮಾಡಲಾದ ಅತ್ಯಾಕರ್ಷಕ ಸ್ತಬ್ಧಚಿತ್ರ, ಶ್ರೀಕೃಷ್ಣ ಮಠದ ಗರ್ಭಗುಡಿಯನ್ನು ಹೋಲುವ ತದ್ರೂಪಿ ಕಲಾಕೃತಿ, ಸ್ಟಾರ್‌ ಪ್ಲಸ್‌ ಧಾರಾವಾಹಿಯ ಮಹಾ ಭಾರತ ಖ್ಯಾತಿಯ ಶ್ರೀಕೃಷ್ಣ, ಅರ್ಜುನ ಮತ್ತು ಭೀಮನ ಪಾತ್ರಧಾರಿಗಳಾದ ಸೌರಭ್‌ ಜೈನ್‌, ಶಹೀರ್‌ ಶೇಖ್‌, ಭೀಮ ಪಾತ್ರಧಾರಿ ಶರತ್‌ ಕೋರೆ ಅವರು ಶೋಭಾಯಾತ್ರೆಯ ಮುಖ್ಯ ಆಕರ್ಷಣೆ ಆಗಿದ್ದರು. ಒಟ್ಟು ಮರೆವಣಿಗೆಯು ಪರ್ಯಾಯ ಮೆರವಣಿಗೆ ಯನ್ನು ನೆನಪಿಸುವಂತಿತ್ತು.

Advertisement

ಉಡುಪಿಯಲ್ಲಿ “ಭೀಮ ಗರ್ಜನೆ’
ತಪ್ಪನ್ನು ಎದುರಿಸುವ ಸಂಕಲ್ಪ ಶಕ್ತಿಯನ್ನು ಬೆಳೆಸಿಕೊಳ್ಳ ಬೇಕು ಎಂದು ಮಹಾಭಾರತದ ದುಶಾಸನ ಮತ್ತು ದುರ್ಯೋಧನನ ಪ್ರಸಂಗವನ್ನು ಉಲ್ಲೇಖೀಸಿ ಸ್ಟಾರ್‌ ಪ್ಲಸ್‌ ಮಹಾಭಾರತ ಧಾರಾವಾಹಿಯ ಭೀಮಸೇನನ ಪಾತ್ರಧಾರಿ ಶರತ್‌ ಕೋರೆ ಹೇಳಿದರು. ಮೆರವಣಿ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಸೌರಭ್‌ ಜೈನ್‌, ಶಹೀರ್‌ ಶೇಖ್‌ ಅವರು ಉಡುಪಿಯ ಸಂಸ್ಕೃತಿ ಇಲ್ಲಿನ ದೇವಾಲಯದ ಹಿನ್ನೆಲೆಯ ಕುರಿತು ತಿಳಿದು ಸಂತೋಷವಾಗಿದೆ ಎಂದರು. ಪರ್ಯಾಯ ಪಲಿಮಾರು ಮಠಾಧೀಶರು, ಅದಮಾರು ಕಿರಿಯ ಶ್ರೀಗಳು ಆಶೀರ್ವಚನ ನೀಡಿದರು. ಉದ್ಯಮಿ ಭುವನೇಂದ್ರ ಕಿದಿಯೂರು ಕೃತಜ್ಞತೆ ಸಲ್ಲಿಸಿದರು. ಕೊರ್ಲಹಳ್ಳಿ ವೆಂಕಟೇಶ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

ಉಪವಾಸವಿದ್ದರೂ ಪಾನೀಯ
ಕೋರ್ಟ್‌ ಎದುರು ಪೇಜಾವರ ಶ್ರೀಪಾದರ ಮುಸ್ಲಿಂ ಅಭಿಮಾನಿ ಬಳಗದವರು ತಮಗೆ ರಮ್ಜಾನ್‌ ಉಪವಾಸವಿದ್ದರೂ ತಂಪು ಪಾನೀಯ ವಿತರಿಸಿ ಸೌಹಾರ್ದ ಮೆರೆದರು.

Advertisement

Udayavani is now on Telegram. Click here to join our channel and stay updated with the latest news.

Next