ಉಡುಪಿ: ದೇಶ, ಸಮಾಜ ಹಾಗೂ ಸಾತ್ವಿಕರ ಒಳಿತಿಗಾಗಿ ಏನೇ ಮಾಡಿದರೂ ಅದು ವ್ಯರ್ಥವಾಗದಂತೆ ದೇವರು ನೋಡಿಕೊಳ್ಳುತ್ತಾರೆ. ದೇವತೆ ಗಳನ್ನು, ಭಗವಂತನ ಪರಿವಾರವನ್ನು ಸಂತೋಷಗೊಳಿಸುವ ಕಾರ್ಯವು ಕಿದಿಯೂರು ಹೊಟೇಲ್ ಅಷ್ಟಪವಿತ್ರ ನಾಗಮಂಡಲೋತ್ಸವದ ಮೂಲಕ ನಡೆಯುತ್ತಿದೆ ಎಂದು ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದರು.
ಕಿದಿಯೂರು ಹೊಟೇಲ್ಸ್‌ನ ಕಾರಣಿಕ ಶ್ರೀ ನಾಗ ಸಾನ್ನಿಧ್ಯದಲ್ಲಿ ಜ. 31ರಂದು ನಡೆಯಲಿರುವ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವದ ಅಂಗವಾಗಿ ರವಿವಾರ ಶ್ರೀ ವಿಶ್ವೇಶತೀರ್ಥ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯನ್ನು ಕಲ್ಪವೃಕ್ಷಕ್ಕೆ ಜಲಧಾರೆ ಮೂಲಕ ಶ್ರೀಪಾದರು ಉದ್ಘಾಟಿಸಿ, ಈ ವರ್ಷ ಅತಿ ವಿಶೇಷವಾದುದು. ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆಯಾಗಿದೆ. ಮುಂದಿನ ವರ್ಷಗಳಲ್ಲಿ ಮಥುರೆಯ ಶ್ರೀಕೃಷ್ಣ, ಕಾಶಿ ವಿಶ್ವನಾಥನ ಭವ್ಯ ದೇಗುಲವು ಎದ್ದು ನಿಲ್ಲುವಂತಾಗಲಿ. ಶ್ರೀ ನಾಗದೇವರು ಎಲ್ಲರನ್ನು ಅಗ್ರಹಿಸಲಿ ಎಂದು ಆಶೀರ್ವದಿಸಿದರು.
ಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಮಾತನಾಡಿ, ನಾಗ ದೇವರ ಪೂಜೆ ಎಂದರೆ ಪ್ರಕೃತಿಯ ಆರಾಧನೆ. ಪ್ರಕೃತಿಯನ್ನು ಉಳಿಸಲು ಶ್ರೀಕೃಷ್ಣನು ಕಾಳಿಂಗ ಮರ್ದನ ಮಾಡಿದ್ದನು. ನಾಗ ದೇವರು ಒಳ್ಳೆಯವರನ್ನು ಸದಾ ಕಾಪಾಡುತ್ತಾರೆ ಎಂದರು.
ಶತಾವಧಾನಿ ವಿ| ಡಾ| ರಮಾನಾಥ ಆಚಾರ್ಯ ಉಪನ್ಯಾಸ ನೀಡಿ, ದೇವತೆಗಳ ಉಪಾಸನೆಯಿಂದ ದೇವರ ಅನುಗ್ರಹವಾಗಲಿದೆ. ಶ್ರೀಕೃಷ್ಣ ದೇವರು ನಾಗಗಳಲ್ಲಿ ಅನಂತನಾಗಿ, ಸರ್ಪಗಳಲ್ಲಿ ವಾಸುಕಿಯಾಗಿ ನೆಲೆಯಾಗಿದ್ದಾನೆ ಎಂದು ಹೇಳಿದರು.
ನಾಗಮಂಡಲೋತ್ಸವ ಆಯೋಜನ ಸಮಿತಿ ಗೌರವಾಧ್ಯಕ್ಷ ಡಾ| ಜಿ. ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಕಿದಿಯೂರು ಹೊಟೇಲ್ಸ…ನ ಎಂಡಿ, ಸೇವಾಕರ್ತ ಭುವನೇಂದ್ರ ಕಿದಿಯೂರು, ನಾಗಮಂಡಲದ ಸಮಗ್ರ ಮಾರ್ಗದರ್ಶಕ, ಜೋತಿಷಿ ವೇ|ಮೂ| ಕಬಿಯಾಡಿ ಜಯರಾಮ ಆಚಾರ್ಯ, ನಾಗಮಂಡಲ ಆಯೋಜನ ಸಮಿತಿ ಪ್ರಧಾನ ಕಾರ್ಯದರ್ಶಿ ಯುವರಾಜ್ ಸಾಲ್ಯಾನ್ ಮಸ್ಕತ್, ಮೊಗವೀರ ಮಹಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಅದಾನಿ ಸಮೂಹ ಸಂಸ್ಥೆಯ ಕಾರ್ಯನಿರ್ವಹಕ ನಿರ್ದೇಶಕ ಡಾ| ಕಿಶೋರ್ ಆಳ್ವ, ಎ.ಜೆ. ಆಸ್ಪತ್ರೆಯ ವೈದ್ಯ ಡಾ| ಮಯೂರ್ ರೈ, ಯಕ್ಷಗಾನ ಮೇಳಗಳ ಯಜಮಾನ ಪಿ. ಕಿಶನ್ ಶೆಟ್ಟಿ, ಕಾಂಚನ ಹ್ಯುಂಡೈ ಎಂ.ಡಿ. ಪ್ರಸಾದ್ ರಾಜ್ ಕಾಂಚನ್, ಬ್ರಹ್ಮಾವರ ಬಂಟರ ಸಂಘದ ಪ್ರ. ಕಾರ್ಯದರ್ಶಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ಜಿಲ್ಲಾ ಬಿಜೆಪಿ ವಕ್ತಾರ ರಾಘವೇಂದ್ರ ಕಿಣಿ, ನಗರಸಭಾ ಸದಸ್ಯ ವಿಜಯ್ ಕೊಡವೂರು ಉಪಸ್ಥಿತರಿದ್ದರು.ಪ್ರಮುಖರಾದ ರಮೇಶ್ ಕಿದಿಯೂರು ಸ್ವಾಗತಿಸಿ, ಚಂದ್ರೇಶ್ ಪಿತ್ರೋಡಿ ವಂದಿಸಿ, ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು.
ವಿವಿಧ ಕ್ಷೇತ್ರದ ಗಣ್ಯರಿಗೆ ಸಮ್ಮಾನ
ರಥದ ಶಿಲ್ಪಿ ಕೋಟೇಶ್ವರದ ಲಕ್ಷ್ಮೀನಾರಾಯಣ ಆಚಾರ್ಯ, ವೈದ್ಯ ಡಾ| ಮಯೂರ್ ರೈ, ಪೌರಾಯುಕ್ತ ರಾಯಪ್ಪ, ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಪ್ರಮುಖರಾದ ಜಯ ಸಿ. ಕೋಟ್ಯಾನ್, ಸುಧಾಕರ ಕುಂದರ್, ವಾಸುದೇವ ಸಾಲ್ಯಾನ್, ಗುಂಡು ಅಮೀನ್ ಮತ್ತು ಪ್ರಮುಖರಾದ ಯೋಗೀಶ್‌ಚಂದ್ರಾಧರ ಅವರನ್ನು ಸಮ್ಮಾನಿಸಲಾಯಿತು.
ಇಂದು
ಸಾಮೂಹಿಕ ಗಂಗಾರತಿ
ಜ. 29ರ ರಾತ್ರಿ 8ರಿಂದ ಕಿದಿಯೂರು ಹೊಟೇಲ್ ಎದುರುಗಡೆ ವಿಶೇಷವಾಗಿ ರಚಿಸಲಾದ ವೇದಿಕೆಗಳಲ್ಲಿ ವಾರಾಣಸಿಯಿಂದ ಬಂದ ಪರಿಣತ ಅರ್ಚಕ ವೃಂದದ ವರಿಂದ ವೈಶಿಷ್ಟ್ಯ ಪೂರ್ಣ ಆಕರ್ಷಕ ಸಾಮೂಹಿಕ ಗಂಗಾರತಿ ನೆರವೇರಲಿದೆ.