Advertisement

ಸಾವಯವ ಸಂತೆ ಮತ್ತೆ ಆರಂಭಿಸಿ : ಶಾಸಕ ಭಟ್‌ ಖಡಕ್‌ ಸೂಚನೆ

01:15 AM Dec 05, 2018 | Team Udayavani |

ಉಡುಪಿ: ನಾವು ಪುರಸೋತ್ತು ಇದೆ ಎಂದು ಸಭೆಗೆ ಬರುವುದಲ್ಲ. ಕೆಡಿಪಿ ಸಭೆಗೆ ಸೂಚನೆ ನೀಡಿದ ಎಲ್ಲ ಅಧಿಕಾರಿಗಳೂ ಹಾಜರಾಗಲೇ ಬೇಕು. ಕೇಳಿದ ಪ್ರಶ್ನೆಗೆ ಉತ್ತರಿಸಲು ಅಧಿಕಾರ ಇರುವವರನ್ನಾದರೂ ಕಳುಹಿಸಲಿ ಇಲ್ಲವಾದಲ್ಲಿ ಎಲ್ಲರ ಸಮಯ ವ್ಯರ್ಥವಾಗಲಿದೆ ಎಂದು ಶಾಸಕ ರಘುಪತಿ ಭಟ್‌ ಮತ್ತು ಲಾಲಾಜಿ ಮೆಂಡನ್‌ ಗರಂ ಆಗಿ ಹೇಳಿದರು. ಅವರು ತಾ.ಪಂ. ಸಭಾಂಗಣದಲ್ಲಿ ಶಾಸಕ ಲಾಲಾಜಿ ಮೆಂಡನ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ತಾಲೂಕು ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಲ್ಲದೆ ಗೈರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಿದರು.

Advertisement

ಮೂರು ತಾಲೂಕಿಗೆ ಒಂದೇ ಕೆಡಿಪಿ ಸಭೆ?
ಸಭೆ ಆರಂಭದಲ್ಲಿ ಶಾಸಕ ಭಟ್‌ ಉಡುಪಿ ತಾಲೂಕು ಈಗ ವಿಂಗಡನೆಗೊಂಡು ಬ್ರಹ್ಮಾವರ, ಉಡುಪಿ, ಕಾಪು ತಾಲೂಕುಗಳಾಗಿ ಬದಲಾಗಿದೆ. ಆದರೆ ಕೆಡಿಪಿ ಸಭೆ ಒಂದೇ ಕಡೆ ನಡೆಯುವುದು ಸರಿಯೇ ಎನ್ನುವ ವಿಚಾರದಲ್ಲಿ ನನಗೆ ಸ್ಪಷ್ಟನೆ ಬೇಕು ಎಂದರು. ಇದಕ್ಕೆ ಕೃಷಿ ಇಲಾಖೆಯ ಅಧಿಕಾರಿ ಮೋಹನ್‌ ರಾಜ್‌ ಈ ಬಗ್ಗೆ ಹಿರಿಯ ಅಧಿಕಾರಿಗಳನ್ನು ಕೇಳಲಾಗುವುದು ಎಂದು ತಿಳಿಸಿದರು. 

ತೋಟಗಾರಿಕಾ ಇಲಾಖೆಯಿಂದ ದೊಡ್ಡಣಗುಡ್ಡೆಯಲ್ಲಿ ನಡೆಯುತ್ತಿದ್ದ ಸಾವಯವ ಸಂತೆ ನಿಂತಿರುವುದಕ್ಕೆ ಶಾಸಕರು ಅಧಿಕಾರಿಗಳಲ್ಲಿ ಕಾರಣವನ್ನು ಕೇಳಿದರು. ಆಗ ಉತ್ತರಿಸಿದ ಅಧಿಕಾರಿ ರೈತರಿಂದ ಸೂಕ್ತವಾಗಿ ಬೆಂಬಲ ಸಿಕ್ಕಿಲ್ಲ ಆದ್ದರಿಂದ ಸಂತೆಯನ್ನು ನಿಲ್ಲಿಸಲಾಗಿದೆ ಎಂದು ಉತ್ತರಿಸಿದರು. ಸಾವಯವ ಸಂತೆ ಪುನಃ ಆರಂಭಿಸಿ. ಇದರಿಂದ ಕಡಿಮೆ ಬೆಲೆಗೆ ಒಳ್ಳೆಯ ಉತ್ಪನ್ನಗಳು ದೊರಕುತ್ತದೆ. ಮೊದಲು ಸಾವಯವ ತರಕಾರಿ, ಹಣ್ಣುಗಳನ್ನು ಬೆಳೆಸಲು ಇಲಾಖೆಯಿಂದ ಪ್ರೋತ್ಸಾಹ ನೀಡಿ. ಆ ಬಳಿಕ ಸಂತೆಗೆ ರೈತರು ಆಗಮಿಸುತ್ತಾರೆ ಎಂದು ಶಾಸಕ ರಘುಪತಿ ಭಟ್‌ 
ಹೇಳಿದರು. ಆದಿ ಉಡುಪಿ, ಸಂತೆಕಟ್ಟೆಯಲ್ಲಿರುವ ಸಂತೆಯಂತೆ ಇಲ್ಲಿಯೂ ಒಂದು ಸಂತೆಯನ್ನು ಆರಂಭಿಸಿ ಎಂದು ಸೂಚಿಸಿದರು. ಆಗ ಶಾಸಕರು ಮುಂದಿನ ಕೆಡಿಪಿ ಸಭೆಯೊಳಗೆ ಈ ಸಂತೆ ಆರಂಭವಾಗಬೇಕು ಎಂದು ತಾಕೀತು ಮಾಡಿದರು.

ನೀಲಾವರದಲ್ಲಿ ನಿರ್ಮಿಸಲಾದ ಲೇ ಔಟ್‌ಗಳಲ್ಲಿ ಕೇವಲ 10 ಅಡಿ ರಸ್ತೆಗೆಂದು ಸ್ಥಳವನ್ನು ಬಿಡಲಾಗಿದೆ. ಇದು ಮುಂದೆ ಅಲ್ಲಿನ ನಿವಾಸಿಗಳಲ್ಲಿ ಜಗಳಕ್ಕೆ ಕಾರಣವಾಗುತ್ತದೆ. ಲೇ ಔಟ್‌ ನಿರ್ಮಿಸುವ ಸಂದರ್ಭ ಕನಿಷ್ಠ 20 ಅಡಿ ಸ್ಥಳವನ್ನು ಬಿಡಲೇಬೇಕು ಎಂದು ಸೂಚಿಸಿದರು. ರಾಜೀವಗಾಂಧಿ ವಸತಿ ಯೋಜನೆಯಿಂದ ಮತ್ಸ್ಯಾಶ್ರಯ ವಾಪಸು ಪಡೆಯುವಂತೆ ನಿರ್ಣಯಿಸಲು ಶಾಸಕರು ಈ ಸಂದರ್ಭ ಆಗ್ರಹಿಸಿದರು. ರಾಜೀವ್‌ ಗಾಂಧಿ ವಸತಿ ಯೋಜನೆಯಡಿ ಮತ್ಸ್ಯಾಶ್ರಯ ಯೋಜನೆ ದೊರಕಿದರೆ ಮೀನುಗಾರರಿಗೆ ಅದು ಪ್ರಯೋಜನಕ್ಕೆ ಸಿಗುತ್ತಿಲ್ಲ. ಮತ್ಸ್ಯಾಶ್ರಯವನ್ನು ಮೀನುಗಾರಿಕಾ ಇಲಾಖೆಯಿಂದಲೇ ಮಂಜೂರು ಮಾಡಬೇಕು ಎಂದರು.

ಬ್ರಹ್ಮಾವರ – ಹೆಬ್ರಿ ರಸ್ತೆ ಕನಿಷ್ಠ 11 ಮೀ. ಅಗಲಗೊಳಿಸಿ
ಬ್ರಹ್ಮಾವರ-ಹೆಬ್ರಿಯವರೆಗಿನ ರಾಜ್ಯ ಹೆದ್ದಾರಿಯ ದ್ವಿಪಥ ರಸ್ತೆ ನಿರ್ಮಾಣಕ್ಕೆ ಮಂಜೂರಾಗಿರುವ ಕುರಿತು ಅಧಿಕಾರಿ ತಿಳಿಸಿದಾಗ ಶಾಸಕ ಭಟ್‌, ಈ ರಸ್ತೆಯನ್ನು ಕನಿಷ್ಠ 11 ಮೀಟರ್‌ ಅಗಲಗೊಳಿಸುವಂತೆ ಸೂಚಿಸಿದರು.  21.95 ಕಿ.ಮೀ  ದ್ವಿಪಥ ರಸ್ತೆಗೆ  35.15 ಕೋ.ರೂ. ಮಂಜೂರು ಮಾಡಲಾಗಿದೆ. ಟೆಂಡರ್‌ ಕರೆಯಲು ಮಾತ್ರ ಬಾಕಿ ಇದೆ ಎಂದು ಅಧಿಕಾರಿ ಮಾಹಿತಿ ನೀಡಿದರು. ಅದರಂತೆ ಕೆಜಿ ರೋಡ್‌ನಿಂದ ಕುಕ್ಕೆಹಳ್ಳಿ ರಸ್ತೆಗೆ 6 ಕೋ.ರೂ., ಕೆಂಜೂರು – ನಾಲ್ಕೂರು- ಶಿರೂರು ನಡುವಿನ ರಸ್ತೆಯ ಅಭಿವೃದ್ಧಿಗೆ 8.5 ಕೋ.ರೂ. 2 ಮತ್ತು 3ನೇ ಹಂತದಲ್ಲಿ ಮಂಜೂರಾಗಿದೆ ಎಂದು ಸಭೆಗೆ ತಿಳಿಸಿದರು. ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ನೂತನ ಇಓ ರಾಜು ಕೆ., ತಹಶೀಲ್ದಾರ್‌ ಪ್ರದೀಪ್‌ ಕುರ್ಡೆಕರ್‌ ಇದ್ದರು.

Advertisement

ಮಂಗನ ಹಾವಳಿ ತಪ್ಪಿಸಲು ಹಣ್ಣಿನ ಗಿಡ ನೆಡಿ
ಅರಣ್ಯ ಇಲಾಖೆ ಹೆಚ್ಚಿನ ಪ್ರಮಾಣದಲ್ಲಿ ಅಕೇಶಿಯಾ ಗಿಡಗಳನ್ನು ನೆಡುತ್ತಿದ್ದು, ಇದರಿಂದ ಮಂಗಗಳಿಗೆ ಆಹಾರ ಸಿಗದೆ ಜನರು ಬೆಳೆದ ಹಣ್ಣು ತರಕಾರಿಗಳಿಗೆ ಲಗ್ಗೆಯಿಡುತ್ತಿದೆ. ಇದಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಹಣ್ಣಿನ ಗಿಡಗಳನ್ನು ನೆಡುವಂತೆ ಸ್ಥಾಯಿ ಸಮಿತಿ ಅಧ್ಯಕ್ಷ ಭುಜಂಗ ಶೆಟ್ಟಿ ತಿಳಿಸಿದರು. ಇದಕ್ಕೆ ಶಾಸಕದ್ವಯರೂ ಧ್ವನಿಗೂಡಿಸಿ, ಇದು ಗಂಭೀರ ಸಮಸ್ಯೆಯಾಗಿದೆ. ಖಾಲಿ ಜಾಗಗಳಲ್ಲಿ ಅಕೇಶಿಯಾ ಗಿಡಗಳನ್ನು ನೆಡುವ ಬದಲು ಹಣ್ಣಿನ ಗಿಡಗಳನ್ನು ನೆಟ್ಟಿದ್ದರೆ ಕಾಡು ಪ್ರಾಣಿಗಳು ನಾಡಿಗೆ ಬರುವ ಅವಶ್ಯಕತೆ ಇರಲಿಲ್ಲ. ಇದಕ್ಕೆ ಅಧಿಕಾರಿ ಅಕೇಶಿಯಾ ಗಿಡಗಳನ್ನು ನೆಡುವುದನ್ನು ಕಡಿಮೆ ಮಾಡಲಾಗಿದೆ ಎಂದು ಉತ್ತರಿಸಿದರು. 

ಫಾರ್ಮಲಿನ್‌ ಪತ್ತೆಗೆ ವಾರಕ್ಕೊಮ್ಮೆ ಪರೀಕ್ಷಿಸಿ
ಮೀನುಗಳಲ್ಲಿ ಫಾರ್ಮಲಿನ್‌ ಅಂಶ ಪತ್ತೆಯಾಗಿರುವ ಹಿನ್ನೆಲೆ ಗೋವಾದಲ್ಲಿ ಜಿಲ್ಲೆಯ ಮೀನುಗಳಿಗೂ ನಿಷೇಧ ಹೇರಲಾಗಿದೆ. ಇಲ್ಲಿನ ಮೀನುಗಳಲ್ಲಿ ಫಾರ್ಮಲಿನ್‌ ಅಂಶವಿಲ್ಲ ಎಂದು ಈ ಮೊದಲೇ ಪರಿಶೀಲಿಸಿದ ಸಂದರ್ಭ ತಿಳಿದು ಬಂದಿದೆ. ಇನ್ನು ಮುಂದೆ ಪ್ರತಿ ವಾರಕ್ಕೊಮ್ಮೆ ಬಂದರುಗಳಿಗೆ ಭೇಟಿ ನೀಡಿ ಮೀನುಗಳನ್ನು ಪರಿಶೀಲಿಸಿ. ನಮ್ಮ ಮೀನುಗಾರರು ಫಾರ್ಮಲಿನ್‌ ಬಳಕೆ ಮಾಡುವುದಿಲ್ಲ ಎನ್ನುವುದು ನಮಗೆ ತಿಳಿದಿದೆ. ಆದರೆ ಗ್ರಾಹಕರಿಗೆ ವಿಶ್ವಾಸ ಮೂಡಿಸಲು ಈ ಕ್ರಮ ಮಾಡಲೇ ಬೇಕಾಗಿದೆ. ಆರೋಗ್ಯ ಇಲಾಖೆ ಇದನ್ನು ಪ್ರಮಾಣೀಕರಿಸಿದಲ್ಲಿ ನಮ್ಮ ಮೀನುಗಳ ವಿಶ್ವಾಸಾರ್ಹತೆ ಹೆಚ್ಚುತ್ತದೆ. ಇದನ್ನು ತತ್‌ಕ್ಷಣದಿಂದಲೇ ಜಾರಿಗೊಳಿಸಿ ಎಂದು ಶಾಸಕ ಭಟ್‌ ಮತ್ತು ಲಾಲಾಜಿ ಮೆಂಡನ್‌ ಮೀನುಗಾರಿಕಾ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

– ಬ್ರಹ್ಮಾವರ ಹೆಬ್ರಿ ರಸ್ತೆಗೆ 11 ಅಡಿ ಅಗಲ ಪಡೆಯಲು ನಿರ್ಣಯ
– ಮತ್ಸ್ಯಾಶ್ರಯ ಯೋಜನೆ ರಾಜೀವ್‌ಗಾಂಧಿ ವಸತಿ ಯೋಜನೆಯಿಂದ ಹೊರಕ್ಕೆ, ಮೀನುಗಾರಿಕಾ ಇಲಾಖೆ ಸುಪರ್ದಿಗೆ
– ಫಾರ್ಮಲಿನ್‌ ಪತ್ತೆಗೆ ವಾರಕ್ಕೊಮ್ಮೆ ಪರೀಕ್ಷೆ
– ಮಂಗನ ಹಾವಳಿ ತಪ್ಪಿಸಲು ಹಣ್ಣಿನ ಗಿಡಗಳನ್ನು ನೆಡಲು ಸೂಚನೆ
– ಗೈರಾದ ಅಧಿಕಾರಿಗಳ ವಿರುದ್ಧ ಶಾಸಕರು ಗರಂ

Advertisement

Udayavani is now on Telegram. Click here to join our channel and stay updated with the latest news.

Next