Advertisement

ಉಡುಪಿ: ಕಳ್ಳರಿಗೆ ‘ಸುಗ್ಗಿ’ಯಾದ ಮಳೆಗಾಲ

11:55 PM Jul 22, 2019 | Team Udayavani |

ಉಡುಪಿ: ನಗರದಲ್ಲಿ ಮತ್ತು ನಗರದ ಆಸುಪಾಸಿನಲ್ಲಿ ಮಳೆಗಾಲ ಕಳ್ಳರಿಗೆ ‘ಸುಗ್ಗಿ’. ಮಳೆ ಬಿರುಸಾಗುತ್ತಿರುವಂತೆ ಕಳ್ಳರ ಹಾವಳಿಯೂ ಹೆಚ್ಚಾಗಿದೆ. ಕಳೆದ 20 ದಿನಗಳ ಅವಧಿಯಲ್ಲಿ ಉಡುಪಿ ಮತ್ತು ಮಣಿಪಾಲ ಠಾಣಾ ವ್ಯಾಪ್ತಿಯ ಆರು ಕಡೆಗಳಲ್ಲಿ ಕಳ್ಳತನ ನಡೆದಿದೆ. ಇದರಲ್ಲಿ ಒಂದು ಕೊಲೆಯೂ ಸೇರಿದೆ.

Advertisement

ಒಂಟಿ ಮಹಿಳೆಯನ್ನು ಕೊಲೆಗೈದು ಚಿನ್ನಾಭರಣ ದೋಚಿದ ಘಟನೆ ಜು.5ರಂದು ಬೆಳಕಿಗೆ ಬಂದಿತ್ತು. ಈ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ. ಜು.7ರಂದು ಮಣಿಪಾಲ ಕೈಗಾರಿಕಾ ವಲಯದಲ್ಲಿ ಬೈಕ್‌ ಕಳವಾಗಿದೆ. ಇದೇ ದಿನ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿಯೇ ಹೋಂಡಾ ಆ್ಯಕ್ಟಿವಾ ಕಳವಾಗಿತ್ತು. ಜು.12ರಂದು ಇಂದ್ರಾಳಿಯಲ್ಲಿ ಕೊಟ್ಟಿಗೆಗೆ ನುಗ್ಗಿ ದನಗಳನ್ನು ಕಳವು ಮಾಡಲಾಯಿತು. ಜು.16ರಂದು ಇಂದಿರಾನಗರದಲ್ಲಿ ಮನೆ ಮಂದಿ ಇಲ್ಲದ ದಿನ ಚಿನ್ನಾಭರಣ, ನಗದು ಕಳವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ಮತ್ತೆ ಮುಂದುವರೆದಿದ್ದು ಜು.17ರಂದು ರಾತ್ರಿ ಕರಾವಳಿ ಬೈಪಾಸ್‌ನ ಮನೆಯೊಂದರಿಂದ ಚಿನ್ನಾಭರಣ, ನಗದು ಕಳವು ಮಾಡಲಾಗಿದೆ. ಮನೆಯವರು ರಾತ್ರಿ 11.30ಕ್ಕೆ ಮಲಗಿ ಬೆಳಗ್ಗೆ 5.30ಕ್ಕೆ ಎದ್ದಿದ್ದರು. ಆದರೆ ಇಷ್ಟರೊಳಗೆ ಕಳವು ನಡೆದಿತ್ತು!

ಮಳೆಯ ಲಾಭ

ಮಳೆ ಬಂದರೆ ಕಳ್ಳರಿಗೆ ವಿವಿಧ ರೀತಿಯಲ್ಲಿ ಅನುಕೂಲ. ಮಳೆ ಸಂದರ್ಭ ಸಾಮಾನ್ಯವಾಗಿ ಜನಸಂಚಾರ ಕಡಿಮೆಯಾಗುವುದು ಕಳ್ಳರಿಗೆ ವರದಾನ. ಸಂಶಯಿತ ವ್ಯಕ್ತಿಗಳನ್ನು ಯಾರೂ ಗುರುತಿಸುವ ಗೋಜಿಗೆ ಹೋಗುವುದಿಲ್ಲ. ಮಳೆ ಬರುತ್ತಿದ್ದರೆ ಅದರ ಸದ್ದಿಗೆ ಕಳ್ಳರು ಮಾಡುವ ಯಾವ ಸದ್ದು ಕೂಡ ಕೇಳಿಸದು. ಪಕ್ಕದಲ್ಲಿ ಮನೆಗಳಿದ್ದರೂ ಅವರು ಮಳೆಯ ಹಿನ್ನೆಲೆಯಲ್ಲಿ ಬಾಗಿಲು ಸರಿದು ನೋಡುವ ಸಾಧ್ಯತೆಗಳು ಕಡಿಮೆ. ಮಳೆಗಾಲಕ್ಕೆ ಹುಲ್ಲು, ಕುರುಚಲು ಗಿಡಗಳು ಬೆಳೆಯುವುದರಿಂದ ಕೆಲವು ದಾರಿಗಳು ಕಳ್ಳರ ಹೆಜ್ಜೆಗೆ ಪೂರಕವಾಗಿರುತ್ತವೆ. ಆಗಾಗ್ಗೆ ವಿದ್ಯುತ್‌ ಕೂಡ ಕೈಕೊಡುವುದರಿಂದ ಕಳ್ಳರ ಕೆಲಸ ಸಲೀಸಾಗುತ್ತದೆ.

ಕಾರ್ಯಾಚರಣೆಯೂ ಸವಾಲು

Advertisement

ಮಳೆ ಬರುತ್ತಿರುವಾಗ ಪೊಲೀಸ್‌ ಕಾರ್ಯಾಚರಣೆಯೂ ಸುಲಭವಲ್ಲ. ಸಾಮಾನ್ಯವಾಗಿ ಬೈಕ್‌ನಲ್ಲೇ ತೆರಳಿ ರಾತ್ರಿ ರೌಂಡ್ಸ್‌ ಮಾಡುವ ಪೊಲೀಸರು ಶಂಕಿತ ವ್ಯಕ್ತಿಗಳನ್ನು ಬೆನ್ನಟ್ಟಿ ಹೋಗುವುದು ಕಷ್ಟಸಾಧ್ಯ. ಜೀಪ್‌ ಮತ್ತಿತರ ವಾಹನಗಳಲ್ಲಿ ಹೋಗಿ ಕಾರ್ಯಾಚರಣೆ ಮಾಡಿದರೂ ರೈನ್‌ ಕೋಟ್ ಧರಿಸಿಕೊಂಡು ಓಡುವುದು ಪೊಲೀಸರಿಗೆ ಇನ್ನೊಂದು ಸವಾಲು.

ಉರಿಯದ ಬೀದಿ ದೀಪಗಳು

ನಗರದ ಹೆಚ್ಚಿನ ಕಡೆಗಳಲ್ಲಿ ಬೀದಿ ದೀಪಗಳು ಸಮರ್ಪಕವಾಗಿಲ್ಲ. ಪೊಲೀಸರು ಟಾರ್ಚ್‌ಲೈಟ್‌ನಲ್ಲೇ ಎಲ್ಲವನ್ನೂ ಮಾಡಬೇಕಾಗಿದೆ. ಬೀದಿ ದೀಪ ಸರಿಯಾಗಿದ್ದರೆ ಸಂಶಯಿತ ವಾಹನ, ಸಂಶಯಿತ ವ್ಯಕ್ತಿಗಳನ್ನು ಗುರುತಿಸಬಹುದು. ಆದರೂ ಪೊಲೀಸ್‌ ತಂಡ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿದೆ ಎನ್ನುತ್ತಾರೆ ನಗರದ ಪೊಲೀಸ್‌ ಅಧಿಕಾರಿಗಳು.

ವಿಶೇಷ ನಿಗಾ

ಮಳೆಗಾಲದಲ್ಲಿ ಸಾಮಾನ್ಯವಾಗಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತವೆ. ಇದನ್ನು ನಿಯಂತ್ರಿಸಲು ಇಲಾಖೆ ವಿಶೇಷ ನಿಗಾ ವಹಿಸುತ್ತಿದೆ. ಕೆಲವೊಂದು ಪ್ರಕರಣಗಳಲ್ಲಿ ಬಂಧನವೂ ಆಗಿದೆ. ಸಾರ್ವಜನಿಕರು ಕೂಡ ಹೆಚ್ಚು ಜಾಗರೂಕರಾಗಬೇಕು. ಸಂಶಯಿತ ವ್ಯಕ್ತಿಗಳು, ಕೃತ್ಯಗಳು ಕಂಡು ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಪ್ರಮುಖ ಓಣಿ, ಜಂಕ್ಷನ್‌ಗಳಲ್ಲಿ ಸಾರ್ವಜನಿಕರೇ ಮುಂದೆ ಬಂದು ಸಿಸಿ ಕೆಮರಾಗಳನ್ನು ಅಳವಡಿಸಿದರೆ ಉತ್ತಮ.
– ನಿಶಾ ಜೇಮ್ಸ್‌, ಎಸ್‌ಪಿ ಉಡುಪಿ
ನಿರ್ವಹಣೆ ನಡೆಯುತ್ತಿದೆ

ನಿರಂತರ ಮಳೆಗೆ ಏಕಕಾಲಕ್ಕೆ ದಾರಿದೀಪಗಳು ಕೆಟ್ಟು ಹೋಗುವುದರಿಂದ ಸಮಸ್ಯೆಯಾಗುತ್ತಿದೆ. ಟೆಂಡರ್‌ದಾರರ ಮುಖಾಂತರ ದುರಸ್ತಿ ಮಾಡಲಾಗುತ್ತಿದೆ. ದೂರುಗಳು ಬಂದ ಕೂಡಲೇ ಸ್ಪಂದಿಸಲಾಗುತ್ತಿದೆ.
– ಆನಂದ ಸಿ.ಕಲ್ಲೋಳಿಕರ್‌ ಆಯುಕ್ತರು, ಉಡುಪಿ ನಗರಸಭೆ,
– ಸಂತೋಷ್‌ ಬೊಳ್ಳೆಟ್ಟು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next