Advertisement
ರೋಗ ಹೇಗೆ ಬರುತ್ತದೆ?ಫೈಲೇರಿಯಾ (ಆನೆಕಾಲು) ರೋಗ ಕ್ಯೂಲೆಕ್ಸ್ ಸೊಳ್ಳೆಯ ಕಡಿತದಿಂದ ಬರುತ್ತದೆ, ಇದು ಸಾಂಕ್ರಾಮಿಕವಲ್ಲ. ಈಗಾಗಲೇ ಕಾಯಿಲೆಪೀಡಿತ ವ್ಯಕ್ತಿಯನ್ನು ಕ್ಯೂಲೆಕ್ಸ್ ಸೊಳ್ಳೆ ಕಚ್ಚಿ ಬಳಿಕ ಆರೋಗ್ಯವಂತನನ್ನು ಕಚ್ಚುವ ಮೂಲಕ ರೋಗ ಹರಡುತ್ತದೆ. ದೇಹದೊಳಕ್ಕೆ ಪ್ರವೇಶಿಸಿದ ರೋಗಾಣುಗಳು ದುಗ್ಧರಸ ಗ್ರಂಥಿಗಳಲ್ಲಿ ಶೇಖರಣೆಯಾಗಿ, ರಕ್ತ ಪರಿಚಲನೆಯಾಗದೆ ಅಲ್ಲಿಂದ ಮುಂದಿನ ದೇಹದ ಭಾಗವು ಊದಿಕೊಳ್ಳತೊಡಗುತ್ತದೆ. ರೋಗಾಣು ನಾಶವಾದರೂ ಊತ ಶಾಶ್ವತವಾಗಿ ಉಳಿದುಕೊಳ್ಳುತ್ತದೆ. ಮುಖ್ಯವಾಗಿ ಕಾಲು, ಕೈ, ಎದೆಯ ಭಾಗಗಳಲ್ಲಿ ಊದುವಿಕೆ ಕಾಣಿಸಿಕೊಳ್ಳುತ್ತದೆ.
ಜಿಲ್ಲೆಯಲ್ಲಿ ಹಳೆಯ ಫೈಲೇರಿಯಾ ಪ್ರಕರಣಗಳನ್ನು ಹೊರತು ಪಡಿಸಿ ಹೊಸ ಪ್ರಕರಣಗಳು ದಾಖಲಾಗಿಲ್ಲ. ಹೊರ ಜಿಲ್ಲೆ ಮತ್ತು ಹೊರರಾಜ್ಯದಿಂದ ಬರುವ ವಲಸೆ ಕಾರ್ಮಿಕರಲ್ಲಿ ರೋಗಾಣುಗಳು ಇರುವ ಸಾಧ್ಯತೆಗಳಿದ್ದು, ಇಂತಹವರನ್ನು ನಿಯಮಿತವಾಗಿ ಪತ್ತೆ ಹಚ್ಚಿ ಪರೀಕ್ಷೆಗೊಳಪಡಿಸಲಾಗುತ್ತದೆ. ರೋಗಪೀಡಿತ ವಲಸೆ ಕಾರ್ಮಿಕರನ್ನು ಪತ್ತೆ ಹಚ್ಚಲು ಆರೋಗ್ಯ ಇಲಾಖೆಯ ಕಡೆಯಿಂದ ಎನ್‌ಒಸಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗುತ್ತದೆ. ಜತೆಗೆ ನಗರ ಸಭೆಯಿಂದ ಸಿವಿಕ್ ಬೈಲಾವನ್ನೂ ರಚಿಸಿ ಅನುಮೋದನೆಗಾಗಿ ರಾಜ್ಯ ಸರಕಾರಕ್ಕೆ ಕಳುಹಿಸಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಬೈಲಾ ನಿಯಮಗಳನ್ನು ಉಲ್ಲಂಘಿಸಿದವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. 2014, 2016, ಮತ್ತು 2019ರಲ್ಲಿ ನಡೆಸಿದ ಟಿಎಎಸ್ ಮತ್ತು ಪೋಸ್ಟ್ ಎಂಡಿಎ ಸರ್ವೆಗಳಲ್ಲಿ ಮೂರೂ ಬಾರಿಯೂ ಉಡುಪಿಯು ತೇರ್ಗಡೆ ಹೊಂದಿದ್ದು, ಸ್ಥಳೀಯವಾಗಿ ಫೈಲೇರಿಯಾ ಇಲ್ಲ ಎನ್ನುವುದು ಕಂಡುಬಂದಿದೆ. ಉಡುಪಿ ಜಿಲ್ಲೆಯು ಅಧಿಕೃತವಾಗಿ ಫೈಲೇರಿಯಾ ಮುಕ್ತ ಜಿಲ್ಲೆಯಾಗಬೇಕಿದ್ದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆ ದೊರೆಯಬೇಕಾಗಿದೆ. ಪ್ರಮಾಣಪತ್ರವನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಕಳುಹಿಸಲಾಗಿದ್ದು, ಮುಂದಿನ 2 ವರ್ಷಗಳವರೆಗೆ ಜಿಲ್ಲೆಯನ್ನು ಫೈಲೇರಿಯಾ ಮುಕ್ತವಾಗಿಡುವ ನಿಟ್ಟಿನಲ್ಲಿ ಕಾರ್ಯಗಳು ನಡೆಯಲಿವೆ. ರಾಜ್ಯದಲ್ಲಿ 2019ರ ಆಗಸ್ಟ್‌ನಲ್ಲಿಯೇ ಈ ಸಾಧನೆ ಮಾಡಿದ ಪ್ರಥಮ ಜಿಲ್ಲೆ ಉಡುಪಿಯಾಗಿದ್ದು, ದ.ಕ. ಮತ್ತು ಉತ್ತರ ಕನ್ನಡ ಜಿಲ್ಲೆಗಳು ಅನಂತರದಲ್ಲಿವೆ.
– ಡಾ| ಪ್ರಶಾಂತ್ ಭಟ್, ಜಿಲ್ಲಾ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ