Advertisement

ಉಡುಪಿಯಲ್ಲೊಂದು ಪ್ಲಾಸ್ಟಿಕ್‌ ರಹಿತ ವಿವಾಹ

08:20 AM Sep 04, 2017 | Harsha Rao |

ಉಡುಪಿ: ಮದುವೆ ಅಂದರೆ ಪ್ರತಿಷ್ಠೆಯ ಸಂಕೇತವಾಗಿರುವ ಈ ಕಾಲಘಟ್ಟದಲ್ಲಿ ಉಡುಪಿ ಜಿಲ್ಲೆಯ ಉಚ್ಚಿಲದ ಶ್ರೀಮತಿ ತುಂಬೆ ಕರ್ಕೆರಾ ಸಭಾಭವನದಲ್ಲಿ ರವಿವಾರ ನಡೆದ ವಿವಾಹವೊಂದು ಹೊಸ ಇತಿಹಾಸಕ್ಕೆ ನಾಂದಿ ಹಾಡಿದ್ದಲ್ಲದೆ, ಆಮಂತ್ರಣ ಪತ್ರಿಕೆಯಿಂದ ಹಿಡಿದು ಊಟದ ವ್ಯವಸ್ಥೆಯವರೆಗೂ ಪ್ಲಾಸ್ಟಿಕ್‌ ಬಳಸದೆ ನಡೆದ ಮದುವೆ ಮಾದರಿಯಾಯಿತು.

Advertisement

ಕುತ್ಪಾಡಿ ದಿ| ಚಪ್ಪರ ಗುರಿಕಾರರ ಪುತ್ರ ಸುಧಾಕರ ಮತ್ತು ಪಕ್ಷಿಕೆರೆ ಕಾಪಿಕಾಡು ದಿ| ಸೋಮಯ್ಯ ಅವರ ಪುತ್ರಿ ಹರಿಣಾಕ್ಷಿ ಅವರ ವಿವಾಹವೇ ಈ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಿತು. 

2018ರ ಅ.2ರೊಳಗೆ ತ್ಯಾಜ್ಯಮುಕ್ತ ಜಿಲ್ಲೆಯನ್ನಾಗಿಸಲು, ಸ್ವತ್ಛ ಉಡುಪಿ ಮಿಷನ್‌ ವರ್ಷದ ಕೌಂಟ್‌ಡೌನ್‌ ಆರಂಭಗೊಂಡಿದ್ದು, ಆ ನೆಲೆಯಲ್ಲಿ ಜಿ. ಪಂ. ಅಧ್ಯಕ್ಷ ದಿನಕರ ಬಾಬು ನೇತೃತ್ವದಲ್ಲಿ ಹಸಿರು ಶಿಷ್ಟಾಚಾರ ಪಾಲಿಸಿ ಹಾಗೂ ಆಚರಿಸಿ ಎನ್ನುವ ಸಂದೇಶದೊಂದಿಗೆ ನಡೆದ ವಿವಾಹ ಕಾರ್ಯಕ್ರಮಕ್ಕೆ ಸುಮಾರು 700 ಮಂದಿ ಸಾಕ್ಷಿಯಾದರು. 

ಪ್ಲಾಸ್ಟಿಕ್‌ ಮುಕ್ತ ಮದುವೆ
ಈ ವಿವಾಹ ಕಾರ್ಯಕ್ರಮದಲ್ಲಿ ಆಮಂತ್ರಣ ಪತ್ರಿಕೆಯಿಂದ ಊಟದ ವ್ಯವಸ್ಥೆಯವರೆಗೂ ಎಲ್ಲಿಯೂ ಪ್ಲಾಸ್ಟಿಕ್‌ ಬಳಕೆ ಕಂಡುಬರಲಿಲ್ಲ. ಅದಲ್ಲದೇ ಮದುವೆಯ ಅನಂತರ ಪರಿಸರಕ್ಕೆ ಹಾನಿಯಾಗುವ ಯಾವುದೇ ತ್ಯಾಜ್ಯ ಉತ್ಪತ್ತಿಯಾಗದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿತ್ತು. ಕಲ್ಯಾಣ ಮಂಟಪವನ್ನು ಬಟ್ಟೆಯಿಂದ ತಯಾರಿಸಿದ ಹೂ ಮತ್ತು ನೈಸರ್ಗಿಕ ಹೂಗಳಿಂದಲೇ ಸಿಂಗರಿಸಲಾಗಿತ್ತು. ನೀರು ಕುಡಿಯಲು ಸ್ಟೀಲ್‌ ಲೋಟಗಳು ಮತ್ತು ಊಟಕ್ಕೆ ಪಿಂಗಾಣಿ ತಟ್ಟೆಗಳನ್ನು ಬಳಸಲಾಯಿತು.

ಈ ವಿವಾಹದಲ್ಲಿ ಪ್ಲಾಸ್ಟಿಕ್‌ ಬಳಕೆ ಮತ್ತು ತ್ಯಾಜ್ಯ ಸೃಷ್ಟಿಸುವ ವಸ್ತುಗಳ ಬಳಕೆ ಮಾಡುವುದರ ಕುರಿತು ಪರಿಶೀಲಿಸುವ ಉದ್ದೇಶದಿಂದ ಮದುಮಕ್ಕಳು ಆಗಮಿಸುವ ಮುನ್ನವೇ ಇಬ್ಬರು ಪಿಡಿಒಗಳು ಪರಿಶೀಲಿಸಿ, ಸಂಪೂರ್ಣ ವರದಿಯನ್ನು
 ಡಿಸಿಗೆ ಸಲ್ಲಿಸಿದರು. ವರದಿ ಪರಿಶೀಲಿಸಿದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಖುದ್ದಾಗಿ ವಿವಾಹ ಮಹೋತ್ಸವಕ್ಕೆ ಆಗಮಿಸಿ ನವ ದಂಪತಿಯನ್ನು ಅಭಿನಂದಿಸಿದರು. ನವಚೇತನ ಯುವಕ ಮಂಡಲ ಮತ್ತು ನವಚೇತನ ಯುವತಿ ಮಂಡಲ ಕಟ್ಟೆಗುಡ್ಡೆ ಸಂಘದ ಸದಸ್ಯ ಸುಧಾಕರ ಅವರ ವಿವಾಹವನ್ನು ಪ್ಲಾಸ್ಟಿಕ್‌ ರಹಿತವಾಗಿ ಮಾಡಿ, ಎಲ್ಲರಿಗೂ ಮಾದರಿಯಾಗುವುದಾಗಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು ತಿಳಿಸಿದ್ದರು. ಅದರಂತೆ ವಿವಾಹ ನೆರವೇರಿದೆ. ಪ್ರತಿಯೊಬ್ಬರಿಗೂ ಮಾದರಿಯಾಗಲಿ ಎಂದರು.

Advertisement

ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌, ಉಡುಪಿ ತಾ.ಪಂ. ಎಡಿ ಹರಿಕೃಷ್ಣ ಶಿವತ್ತಾಯ, ಸ್ವತ್ಛ ಭಾರತ್‌ ಅಭಿಯಾನದ ಜಿಲ್ಲಾ ಸಮಾಲೋಚಕ ಸುಧೀರ್‌, ಪಿಡಿಒಗಳಾದ ರಮಾನಂದ ಪುರಾಣಿಕ್‌, ಸಿದ್ದೇಶ್‌ ಮದುವೆಗೆ ಸಾಕ್ಷಿಯಾದರು. 

ಅಭಿನಂದನಾ ಪತ್ರ : ಡಿಸಿ
ಈ ವಿವಾಹ ಕಾರ್ಯಕ್ರಮಕ್ಕೆ ಕ್ಯಾಟರಿಂಗ್‌ ವ್ಯವಸ್ಥೆ ಮಾಡಿದ ಅಂಬಾಗಿಲಿನ ಎಕ್ಸಲೆಂಟ್‌ ಕ್ಯಾಟರರ್‌ನ ದೀಕ್ಷಿತ್‌ ಶೆಟ್ಟಿ ಅವರನ್ನು ಅಭಿನಂದಿಸಿದ ಡಿಸಿ, ಮುಂದೆ ಎಲ್ಲ ವಿವಾಹಗಳಲ್ಲಿಯೂ ಇದೇ ರೀತಿ ಪ್ಲಾಸ್ಟಿಕ್‌ ರಹಿತ, ಪರಿಸರಕ್ಕೆ ಪೂರಕವಾದ ವಸ್ತುಗಳನ್ನು ಬಳಸಿ ಆಹಾರ ಸರಬರಾಜು ಮಾಡುವಂತೆ ತಿಳಿಸಿದರು. ಜಿಲ್ಲೆಯಲ್ಲಿ ಹಸಿರು ಶಿಷ್ಟಾಚಾರ ಪಾಲಿಸಿ, ಪ್ಲಾಸ್ಟಿಕ್‌ ಬಳಕೆ ಮಾಡದೇ ವಿವಾಹವಾಗುವ ದಂಪತಿಗೆ, ಸಭಾಭವನಗಳ ಮುಖ್ಯಸ್ಥರು, ಆಹಾರ ತಯಾರಿಕೆ/ಸರಬರಾಜು ಮಾಡುವವರಿಗೆ ಜಿಲ್ಲಾಡಳಿದ ವತಿಯಿಂದ ಅಭಿನಂದನಾ ಪತ್ರ ನೀಡಲಾಗುವುದು ಎಂದು ಡಿಸಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next