Advertisement

Udupi: ಅನರ್ಹ ಬಿಪಿಎಲ್‌ ಕಾರ್ಡ್‌ ಪರಿಶೀಲನೆ: ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ

01:55 AM Sep 12, 2024 | Team Udayavani |

ಉಡುಪಿ: ಜಿಲ್ಲೆಯಲ್ಲಿರುವ ಅನರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ಪರಿಶೀಲಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ ತಿಳಿಸಿದರು.

Advertisement

ಜಿಲ್ಲೆಯ ಒಟ್ಟು ಕುಟುಂಬಗಳ ಶೇ.85ರಷ್ಟು ಬಿಪಿಎಲ್‌ ಕಾರ್ಡ್‌ ಇದೆ. 1.97 ಲಕ್ಷ ಬಿಪಿಎಲ್‌ ಕಾರ್ಡ್‌ ಇರುವುದರಿಂದ ಅನರ್ಹರೂ ಕಾರ್ಡ್‌ ಪಡೆದಿರುವ ಸಾಧ್ಯತೆ ಇದೆ. ಹೀಗಾಗಿ 6 ತಿಂಗಳಿಂದ ಯಾರು ಪಡಿತರ ತೆಗೆದುಕೊಂಡಿಲ್ಲವೋ ಅವರ ಕಾರ್ಡ್‌ಗಳನ್ನು ಆರಂಭದಲ್ಲಿ ಮುಟ್ಟುಗೋಲು ಹಾಕುತ್ತೇವೆ. ಹಾಗೆಯೇ 1.20 ಲಕ್ಷಕ್ಕಿಂತ ಅಧಿಕ ಆದಾಯ ಇರುವ ಮತ್ತು ಮನೆಯ ಪರಿಸ್ಥಿತಿಯನ್ನು ಅವಲೋಕಿಸಿಯೇ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಮಾಡಲಾಗುತ್ತದೆ.

ಸದ್ಯ ಈ ಪ್ರಕ್ರಿಯೆ ಆರಂಭವಾಗಿದೆ. ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಬಿಪಿಎಲ್‌ ಕಾರ್ಡ್‌ ಅರ್ಹತೆಗಿಂತ ಅಧಿಕ ಆದಾಯ ಇದ್ದಲ್ಲಿ ಕಾರ್ಡ್‌ ವಾಪಸ್‌ ಸಲ್ಲಿಸಲು ಅವಕಾಶವಿದೆ. ಸರಕಾರಿ ಅಧಿಕಾರಿ, ನೌಕರರು ದಂಡ ಪಾವತಿಸಬೇಕಾಗುತ್ತದೆ. ಉಳಿದವರು ದಂಡ ಪಾವತಿಸುವ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಂತೆಕಟ್ಟೆ ಕಾಮಗಾರಿ ಆರಂಭ
ಸಂತೆಕಟ್ಟೆ ಓವರ್‌ಪಾಸ್‌ ಕಾಮಗಾರಿ ಈಗಾಗಲೇ ಪುನರ್‌ ಆರಂಭಗೊಂಡಿದೆ. ಈ ಸಂಬಂಧ ಹೆದ್ದಾರಿ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ. 2025ರ ಮಾರ್ಚ್‌ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ. ಸದ್ಯ ಬಂಡೆ ಒಡೆಯುವ ಕಾರ್ಯ ನಡೆಯುತ್ತಿದೆ. ಹೆಚ್ಚು ಕಾರ್ಮಿಕರನ್ನು ಬಳಸಿಕೊಂಡು ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ನಿರ್ದೇಶನ ನೀಡಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

3.50 ಕೋ.ರೂ. ವಿನಿಯೋಗ
ಜಿಲ್ಲೆಯಲ್ಲಿ ಈವರೆಗೂ ಸುಮಾರು 235 ಕೋ.ರೂ. ಮಳೆ ಹಾನಿ ಸಂಭವಿಸಿದೆ. ಇದರ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದೇವೆ. ರಸ್ತೆ, ಶಾಲೆ, ಅಂಗನವಾಡಿ ಕಟ್ಟಡಗಳ ತುರ್ತು ದುರಸ್ತಿಗೆ ಎನ್‌ಡಿಆರ್‌ಎಫ್ ನಿಧಿಯಡಿ ಜಿಲ್ಲಾಧಿಕಾರಿ ಪಿ.ಡಿ. ಖಾತೆಯಿಂದ 3.50 ಕೋ.ರೂ. ಬಿಡುಗಡೆ ಮಾಡಲಾಗಿದೆ. ಶೀಘ್ರವೇ ಕಾಮಗಾರಿಯೂ ಆರಂಭವಾಗಿದೆ. ಗ್ರಾಮೀಣ ರಸ್ತೆಗಳ ಗುಂಡಿ ಮುಚ್ಚುವುದು ಹಾಗೂ 85 ಶಾಲೆ, ಅಂಗನವಾಡಿಗಳ ದುರಸ್ತಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next