Advertisement

Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!

05:03 PM Sep 19, 2024 | Team Udayavani |

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹಕ್ಕಿ ಪಿಕ್ಕಿ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ, ಗರ್ಭಿಣಿಯರಿಗೆ ಅಕ್ಕಿ, ಆಹಾರ ಪದಾರ್ಥ, ಮೊಟ್ಟೆ ವಿತರಿಸದೇ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯೇ ಅಪಹಾಸ್ಯಕ್ಕೀಡಾದ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಕಳೆದ ವಾರ ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀà ಚೌಧರಿ ಜಿಲ್ಲೆಯ ಭೇಟಿಗೆ ಬಂದಿದ್ದಾಗ ಶ್ರೀನಿವಾಸಪುರ ತಾಲೂಕಿನ ಪ್ರವಾಸದಲ್ಲಿ ಹಕ್ಕಿಪಿಕ್ಕಿ ಕಾಲೋನಿಯ ಅಂಗನವಾಡಿಗೆ ತೆರಳಿ ಪರಿಶೀಲಿಸಿದಾಗ ಅಲ್ಲಿನ ಮಕ್ಕಳಿಗೆ ಬಿಸಿಯೂಟ, ಮೊಟ್ಟೆ, ಗ ರ್ಭಿಣಿಯರಿಗೆ ಆಹಾರ ಪದಾರ್ಥಗಳನ್ನು ವಿತರಿಸದೇ ಇರುವುದು ಪತ್ತೆಯಾಗಿದೆ.

ಗಂಭೀರ ಪರಿಗಣನೆ: ಕೋಲಾರ ಜಿಲ್ಲೆಯ ತೀರಾ ಹಿಂದುಳಿದವರು ಬಡವರು ವಾಸಿಸುವ ಹಕ್ಕಿಪಿಕ್ಕಿ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಆಹಾರ ವಿತರಣೆಯಾಗದಿರುವ ಕುರಿತು ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಸರ್ಕಾರದ ಗಮನಕ್ಕೆ ತಂದಿದ್ದರು. ಸರ್ಕಾರವು ರಾಜ್ಯದಲ್ಲಿ ಗರ್ಭಿಣಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಪೌಷ್ಟಿಕಾಂಶ ದೊರಕಿಸುವ ನಿಟ್ಟಿನಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಅಧಿಕಾರಿಗಳ ಕರ್ತವ್ಯ ಲೋಪದಿಂದ ಪರಿಶಿಷ್ಟ ಪಂಗಡದ ಬಡ ಗ ರ್ಭಿಣಿ ಮತ್ತು ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ವಿತರಿಸದೇ ಇರುವುದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ.

ಸರ್ಕಾರದ ಕಾರ್ಯಕ್ರಮಗಳನ್ನು ಜಿಲ್ಲಾ ಮತ್ತು ತಾಲೂಕುಮಟ್ಟದ ಮೇಲಧಿಕಾರಿಗಳು ಮೇಲ್ವಿಚಾರಣೆ ಮಾಡದೇ ಇರುವುದರಿಂದ ಇಂತಹ ಘಟ ನೆಗಳು ಸಂಭವಿಸುತ್ತದೆ ಎಂದು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ವೈಷ್ಣವಿ ಕೋಲಾರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಅನುಪಾಲನಾ ವರದಿಗೆ ಸೂಚನೆ: ಈ ಕುರಿತು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ವೈಷ್ಣವಿ ಬರೆದಿರುವ ಪತ್ರದಲ್ಲಿ, ಕೋಲಾರ ಜಿಲ್ಲೆಯ ವಾಸ್ತವಾಂಶದ ಬಗ್ಗೆ ಆದ್ಯತೆಯ ಮೇರೆಗೆ ಪರಿಶೀಲಿಸಿ ತಕ್ಷಣವೇ ಕರ್ತವ್ಯ ಲೋಪವೆಸಗಿರುವ ಅಧಿ ಕಾರಿ ಸಿಬ್ಬಂದಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಂಡು ಅನುಪಾಲನಾ ವರದಿಯನ್ನು ಅತಿ ಜರೂರಾಗಿ ಸಲ್ಲಿಸಲು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆಂದು ತಿಳಿಸಿದ್ದರು.

ಎರಡು ತಿಂಗಳಿನಿಂದ ಮೊಟ್ಟೆ ಇಲ್ಲ: ಅನುಪಾಲನಾ ವರದಿ ನೀಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಸೆ.12ರಂದು ಶ್ರೀ ನಿವಾಸಪುರ ವೃತ್ತದ ಮೇಲ್ವಿಚಾರಕಿ ಹಾಗೂ ಶ್ರೀನಿವಾಸಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಂಟಿ ಭೇಟಿ ನೀಡಿ ಗರ್ಭಿಣಿ, ಬಾಣಂತಿಯರ ಸಭೆ ನಡೆಸಿ ಅಂಗನವಾಡಿ ಕಾರ್ಯಕರ್ತೆಗೆ ನೋಟಿಸ್‌ ಜಾರಿ ಮಾಡಲಾಗಿದೆ. ಕೋಳಿ ಮೊಟ್ಟೆಯನ್ನು ವಿತರಿಸಲು ಸೂಚಿಸಲಾಗಿದೆ. ಆ ಸಂಬಂಧ ವೃತ್ತದ ಮೇಲ್ವಿಚಾರಕಿಗೂ ನೋಟಿಸ್‌ ನೀಡಲಾಗಿದೆಯೆಂದು ತಿಳಿಸಿದ್ದಾರೆ.

Advertisement

ಆಯೋಗವೇ ಬರಬೇಕಿತ್ತಾ?: ಕೋಲಾರ ಜಿಲ್ಲೆಯ ಭೇಟಿಗೆ ಮಹಿಳಾ ಆಯೋಗದ ಅಧ್ಯಕ್ಷರು ಬಂದಿದ್ದು ಕೇವಲ ಎರಡು ದಿನದ ಪ್ರವಾಸಕ್ಕಾಗಿ ಮಾತ್ರ. ಈ ಪ್ರವಾಸದ ಅವಧಿಯಲ್ಲಿ ವಿವಿಧೆಡೆ ಸಂಚರಿಸಿ ಅಚಾನಕ್‌ ಆಗಿ ಭೇಟಿ ನೀಡಿದ ಅಂಗನವಾಡಿ ಕೇಂದ್ರದಲ್ಲಿಯೇ ಅದರಲ್ಲೂ ಕಡುಬಡವರು ವಾಸಿಸುವ ಅಂಗನವಾಡಿ ಕೇಂದ್ರದಲ್ಲಿಯೇ ಮಕ್ಕಳಿಗೆ ಗರ್ಭಿಣಿಯರಿಗೆ ಆಹಾರ, ಬಿಸಿಯೂಟ, ಮೊಟ್ಟೆ ವಿತರಿಸದೇ ಇರುವುದು ಕಂಡು ಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಲೋಪಕ್ಕೆ ಅಂಗನವಾಡಿ ಕಾರ್ಯಕರ್ತೆಯನ್ನು ವಜಾ ಮಾಡುವುದಾಗಿ ವರದಿ ನೀಡಿ ಕೈತೊಳೆದುಕೊಂಡಿದ್ದಾರೆ. ಜಿಲ್ಲೆಯ ಅಂಗನವಾಡಿ ಕೇಂದ್ರಗಳನ್ನು ನಿರ್ವಹಣೆ ಮಾಡಲೆಂದೇ ಇರುವ ಮೇಲ್ವಿಚಾರಕರು, ಸಿಡಿಪಿಒ, ತಾಲೂಕು ಅಧಿ ಕಾರಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಏನು ಮಾಡುತ್ತಿದ್ದರು. ಹಕ್ಕಿ ಪಿಕ್ಕಿ ಕಾಲೋನಿಯಂತ ಆಹಾರ ಮೊಟ್ಟೆ ತಲುಪದ ಅದೆಷ್ಟು ಅಂಗನವಾಡಿ ಕೇಂದ್ರಗಳು ಕೋಲಾರ ಜಿಲ್ಲೆಯಲ್ಲಿರಬಹುದು, ಇದನ್ನು ಪತ್ತೆ ಮಾಡಲು ಮಹಿಳಾ ಆಯೋಗವೇ ಬರ ಬೇಕಿತ್ತಾ, ಇಲ್ಲಿನ ಅಧಿಕಾರಿಗಳಿಂದ ಸಾಧ್ಯವಾಗುತ್ತಿರಲಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಉದ್ಭವವಾಗಿದೆ. ಆಗಿರುವ ಎಲ್ಲಾ ಲೋಪಕ್ಕೂ ಕೇವಲ ಅಂಗನವಾಡಿ ಕಾರ್ಯಕರ್ತೆಯನ್ನು ಮಾತ್ರ ಗುರಿಯಾಗಿಟ್ಟುಕೊಂಡು ವಜಾ ಮಾಡಲು ಮುಂದಾಗಿರುವುದು ಇತರೇ ಅಧಿಕಾರಿಗಳನ್ನು ಬಚಾವ್‌ ಮಾಡುವ ಉದ್ದೇಶದಿಂದಲೇ ಎಂಬ ಆರೋಪವು ಜನರಿಂದ ಕೇಳಿ ಬರುವಂತಾಗಿದೆ. ಜಿಲ್ಲಾಡಳಿತ ಅಧಿಕಾರಿಗಳು ಉತ್ತರ ನೀಡಬೇಕಿದೆ.

ಅಂಗನವಾಡಿ ಕೇಂದ್ರದಲ್ಲಿ ಸಮರ್ಪಕ ನಿರ್ವಹಣೆ ಇಲ್ಲ : ನೋಟಿಸ್‌ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಹಕ್ಕಿಪಿಕ್ಕಿ ಕಾಲೋನಿಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ದಾಖಲಾತಿ ಪರಿಶೀಲಿಸಿದಾಗ ಕಳೆದ ಎರಡು ತಿಂಗಳಿನಿಂದಲೂ ಮೊಟ್ಟೆ ವಿತರಣೆ ನೀಡದೇ ಇರುವುದು ಕಂಡು ಬಂದಿದೆ. ಅಂಗನವಾಡಿ ಕಾರ್ಯಕರ್ತೆ ಅನಧಿಕೃತವಾಗಿ ಗೈರು ಹಾಜರಾಗಿ ಬಿಸಿಯೂಟ ತಯಾರಿಸದೇ ಇದ್ದುದ್ದೂ ಕಂಡು ಬಂದಿದೆ. ಗ್ರಾಮಸ್ಥರು ಮತ್ತು ಮಹಿಳೆಯರು ಈ ಕುರಿತು ದೂರುಗಳ ಸುರಿಮಳೆ ಸುರಿಸಿದ್ದಾರೆ. ಈ ಹಿನ್ನೆಲೆ ತಾಲೂಕು ಸಿಡಿಪಿಒರಿಗೂ ನೋಟಿಸ್‌ ಜಾರಿ ಮಾಡಲಾಗಿದೆ. ಒಟ್ಟಾರೆ, ಪರಿಶೀಲನೆ ಯಲ್ಲಿ ಅಂಗನವಾಡಿ ಕೇಂದ್ರವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವುದು ದೃಢಪಟ್ಟಿದೆ.

ಅಂಗನವಾಡಿ ಕಾರ್ಯಕರ್ತೆ ಸೇವೆಯಿಂದ ವಜಾ: ಅಂಗನವಾಡಿ ಕೇಂದ್ರದ ಎಲ್ಲಾ ನ್ಯೂನತೆಗಳಿಗೆ ಕಾರಣ ಇವರೇ ಎಂದು ಗುರುತಿಸಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಅಲುಮೇಲಮ್ಮರನ್ನು ಬುಧವಾರದಿಂದ ಒಂದು ತಿಂಗಳ ಕಾಲ ವೇತನ ರಹಿತ ಕಡ್ಡಾಯ ರಜೆ ಮೇಲೆ ತೆರಳಲು ಕ್ರಮಕೈಗೊಳ್ಳಲಾಗಿದೆ. ಜಿಲ್ಲಾ ಅಂಗನವಾಡಿ ಕಾರ್ಯಕರ್ತೆ ಸಹಾಯಕಿ ಯರ ಆಯ್ಕೆ ಸಮಿತಿಯ ಅಧ್ಯಕ್ಷರ ಅನುಮೋದನೆಯನ್ನು ಪಡೆದು ಅಂಗನವಾಡಿ ಕಾರ್ಯಕರ್ತೆ ಅಲುಮೇಲಮ್ಮರನ್ನು ಕರ್ತವ್ಯದಿಂದ ವಜಾಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಉಪ ನಿರ್ದೇಶಕರು ಅನುಪಾಲನಾ ವರದಿಯಲ್ಲಿ ತಿಳಿಸಿದ್ದಾರೆ.

ಕೋಲಾರ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಶ್ರೀನಿವಾಸಪುರ ತಾಲೂಕಿನ ಹಕ್ಕಿಪಿಕ್ಕಿ ಕಾಲೋನಿಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಮೊಟ್ಟೆ ವಿತರಿಸದೇ ಇರುವುದು ಹಾಗೂ ಮಕ್ಕಳಿಗೆ ಬಿಸಿಯೂಟ ತಯಾರಿಸದೇ ಇರುವುದು ಕಂಡು ಬಂದಿತ್ತು. -ಡಾ.ನಾಗಲಕ್ಷ್ಮೀ ಚೌಧರಿ, ಅಧ್ಯಕ್ಷರು, ಕರ್ನಾಟಕ ಮಹಿಳಾ ಆಯೋಗ

ಶ್ರೀನಿವಾಸಪುರ ತಾಲೂಕಿನ ಹಕ್ಕಿಪಿಕ್ಕಿ ಕಾಲೋನಿ ಅಂಗನವಾಡಿ ಕೇಂದ್ರದ ಲೋಪದೋಷ ಪರಿಗಣಿಸಿ ಅಂಗನವಾಡಿ ಕಾರ್ಯಕರ್ತೆ ಅಲುಮೇಲಮ್ಮ ಅವರನ್ನು ಕಡ್ಡಾಯ ರಜೆ ಮೇಲೆ ತೆರಳಲು ಸೂಚಿಸಲಾಗಿದೆ. ಅವರನ್ನು ಕರ್ತವ್ಯದಿಂದ ವಜಾಗೊಳಿಸಲು ಕ್ರಮಕೈಗೊಳ್ಳಲಾಗುವುದು. -ನಾರಾಯಣಸ್ವಾಮಿ, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೋಲಾರ

ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next