ಉಡುಪಿ: ಉಡುಪಿಯ ಪುತ್ತೂರಿನ ಮನೆಯಲ್ಲಿ ಕಳ್ಳತನ ಹಾಗೂ ಆದಿಉಡುಪಿಯ ಎಸ್‌ಬಿಐ ಎಟಿಎಂನಲ್ಲಿ ಕಳವಿಗೆ ಯತ್ನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಈಗಾಗಲೇ 4 ತಂಡಗಳನ್ನು ರಚನೆ ಮಾಡಲಾಗಿದ್ದು, ವಿವಿಧೆಡೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪುತ್ತೂರಿನ ಮನೆಯೊಂದಕ್ಕೆ ನುಗ್ಗಿದ ಕಳ್ಳರು 2,50,000 ರೂ.ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದರು.
ಕಳ್ಳತನ ನಡೆದ ಮನೆಯಲ್ಲಿ ಲಭಿಸಿದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಬನಿಯನ್ ಧರಿಸಿ, ಚಪ್ಪಲಿಗಳನ್ನು ಸೊಂಟಕ್ಕೆ ಸಿಲುಕಿಸಿಕೊಂಡು ಕಳ್ಳತನ ನಡೆಸುತ್ತಿರುವ ದೃಶ್ಯಾವಳಿಗಳು ಪೊಲೀಸರಿಗೆ ಲಭಿಸಿದೆ. ಇದೇ ಮಾದರಿಯ ಕಳ್ಳತನಗಳು ಈ ಹಿಂದೆ ಬೆಂಗಳೂರು ಹಾಗೂ ಮಂಗಳೂರಿನ ಉರ್ವದಲ್ಲಿ ನಡೆದಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಪೊಲೀಸರು ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದ್ದಾರೆ. ಕಳ್ಳತನ ಮಾಡಿರುವವರು ಯಾರು ಎಂಬ ವಿವರ ಇನ್ನಷ್ಟೆ ತಿಳಿದುಬರಬೇಕಿದೆ ಎಂದು ನಗರ ಠಾಣೆಯ ಇನ್‌ಸ್ಪೆಕ್ಟರ್ ಮಂಜಪ್ಪ ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳಲ್ಲಿ 3ರಿಂದ 4 ಮಂದಿ ಕಳ್ಳತನದಲ್ಲಿ ಭಾಗಿಯಾಗಿರುವ ದೃಶ್ಯಾವಳಿಗಳು ಕಂಡುಬರುತ್ತಿವೆ. ಕೃತ್ಯ ಎಸಗಿದವರು ಮಾಸ್ಕ್ ಧರಿಸಿದ್ದಾರೆ. ಯಾವ ಗ್ಯಾಂಗ್ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇತರ ಕಡೆಗಳಲ್ಲಿಯೂ ಇಂತಹ ಘಟನೆಗಳು ನಡೆದಿದೆಯಾದರೂ ಇದು ಅವರೇ ಮಾಡಿರುವುದೇ ಅಥವಾ ಬೇರೆಯವರು ಮಾಡಿರುವುದೇ ಎಂಬುದನ್ನು ಆರೋಪಿಗಳ ಪತ್ತೆಯ ಬಳಿಕವೇ ತಿಳಿದುಕೊಳ್ಳಲು ಸಾಧ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಅರುಣ್ ಕೆ.ತಿಳಿಸಿದ್ದಾರೆ.