Advertisement

Udupi ಮನೆಕಳ್ಳತನ ಪ್ರಕರಣ: ಆರೋಪಿಯ ಬಂಧನ

11:18 PM Aug 25, 2024 | Team Udayavani |

ಉಡುಪಿ: ಕಾಡಬೆಟ್ಟುವಿನಲ್ಲಿ ಇತ್ತೀಚೆಗೆ ಮನೆಯಲ್ಲಿ ಕಳವು ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಆರೀಫ್ ಮುನ್ನಾ ಮೊಹಮ್ಮದ್‌ ಆರೀಫ್ ಬಂಧಿತ ಆರೋಪಿ.

Advertisement

ಕಾಡಬೆಟ್ಟು ರಾಮಣ್ಣ ಶೆಟ್ಟಿ ಕಾಲನಿಯ ಜೀವನ ನಗರ ಎಂಬಲ್ಲಿ ಟಿ. ಪ್ರಶಾಂತ್‌ ಪೈ ಅವರ ವಾಸ್ತವ್ಯದ ಮನೆಯಲ್ಲಿ ಇತ್ತೀಚೆಗೆ ಈತ ಕಳ್ಳತನ ನಡೆಸಿದ್ದ. ಮನೆಯ ಮುಖ್ಯ ಬಾಗಿಲನ್ನು ಯಾವುದೋ ಸಾಧನದಿಂದ ಮೀಟಿ ಮುರಿದು ಮನೆಯ ಒಳಗೆ ಪ್ರವೇಶಿಸಿ ದೇವರ ಫೋಟೋ ಮೇಲಿದ್ದ ಸುಮಾರು ತಲಾ ಒಂದು ಗ್ರಾಂ ತೂಕವಿರುವ 7 ಚಿನ್ನದ ಲಕ್ಷ್ಮೀ ಪದಕವಿರುವ ಮಾಲೆಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳವಾದ ಸೊತ್ತುಗಳ ಅಂದಾಜು ಮೌಲ್ಯ 35,000 ರೂ. ಆಗಿತ್ತು.

ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್‌ ಠಾಣೆಯ ನಿರೀಕ್ಷಕ ಶ್ರೀಧರ್‌ ವಿ. ಸತಾರೆ ನೇತೃತ್ವದಲ್ಲಿ ಪತ್ತೆ ಕಾರ್ಯ ಕೈಗೊಂಡು ತನಿಖೆ ನಡೆಸಿದ್ದು, ಎಸ್‌ಐ ಪುನೀತ್‌ ಕುಮಾರ್‌ ಬಿ.ಇ., ಈರಣ್ಣ ಶಿರಗುಂಪಿ, ಭರತೇಶ್‌ ಕಂಕಣವಾಡಿ, ಸಿಬಂದಿಯವರಾದ ಸುರೇಶ್‌ ಮೆಂಡನ್‌ , ಹರೀಶ್‌ ಮಾಳ, ಆನಂದ ಎಸ್‌., ಹೇಮಂತ್‌ಕುಮಾರ್‌ ಎಂ.ಆರ್‌., ಶಿವಕುಮಾರ್‌ ಹಾಗೂ ತಾಂತ್ರಿಕ ವಿಭಾಗದ ಸಿಬಂದಿ ದಿನೇಶ್‌ ಮತ್ತು ನಿತಿನ್‌ ಕುಮಾರ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಆರೋಪಿ ಮೇಲೆ
15ಕ್ಕೂ ಅಧಿಕ ಪ್ರಕರಣ
ಪೊಲೀಸರ ವಿಶೇಷ ತಂಡವು ಆ. 24ರಂದು ಆರೋಪಿಯನ್ನು ಉಡುಪಿಯ ಕೃಷ್ಣ ಮಠದ ರಾಜಾಂಗಣದ ಬಳಿ ಬೈಕ್‌ ಸಹಿತ ವಶಕ್ಕೆ ಪಡೆದು ಕೊಂಡಿದ್ದಾರೆ. ಆರೋಪಿಯು ನಗರ ಪೊಲೀಸ್‌ ಠಾಣೆಯ ವ್ಯಾಪ್ತಿಯ್ಲಿ ಕಳವು ಮಾಡಿದ್ದ ಒಟ್ಟು 35,964ರೂ. ಮೌಲ್ಯದ 5.400 ಗ್ರಾಂ ಚಿನ್ನಾಭರಣ ಹಾಗೂ ಕಳವು ಮಾಡಲು ಬಳಸಿದ ಹೀರೋ ಹೊಂಡಾ ಸ್ಪೆಂಡರ್‌ ಪ್ಲಸ್‌ ಬೈಕ್‌ ಮತ್ತು ಕಬ್ಬಿಣದ ರಾಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ವಿರುದ್ಧ ಈಗಾಗಲೇ ಹಾಸನ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ವಿವಿಧ ಪೊಲೀಸ್‌ ಠಾಣೆಗಳಲ್ಲಿ 15 ಕ್ಕೂ ಹೆಚ್ಚಾ ಪ್ರಕರಣಗಳು ದಾಖಲಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next