ಉಡುಪಿ: ಎಂಜಿಎಂ ಕ್ರೀಡಾಂಗಣದಲ್ಲಿ ಮಂಗಳವಾರ ವಿಶ್ವಹಿಂದೂ ಪರಿಷತ್ ಬಜರಂಗದಳ ದಿಂದ ಹಿಂದೂ ಸಮಾಜೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಉಡುಪಿಯ ಜೋಡುಕಟ್ಟೆಯಿಂದ ಅಪರಾಹ್ನ 2 ಗಂಟೆಗೆ ಶೌರ್ಯ ಜಾಗರಣದ ರಥಯಾತ್ರೆ ಆರಂಭವಾಗಲಿದ್ದು ಬಳಿಕ ಎಂಜಿಎಂ ಕ್ರೀಡಾಂಗಣದವರೆಗೆ ಶೋಭಾಯಾತ್ರೆ ನಡೆಯಲಿದೆ.
ಈ ಸಂದರ್ಭದಲ್ಲಿ ನಗರದಲ್ಲಿ ಟ್ರಾಫಿಕ್ ದಟ್ಟಣೆ ಸಾಧ್ಯತೆಗಳೂ ಇವೆ. ಪೊಲೀಸ್ ಇಲಾಖೆ ಇದುವರೆಗೂ ಸಂಚಾರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ರಥಯಾತ್ರೆ ಹಾದುಹೋಗುವ ಸಂದರ್ಭ ದಟ್ಟನೆ ನೋಡಿಕೊಂಡು ಸಂಚಾರದಲ್ಲಿ ತಕ್ಕಮಟ್ಟಿನ ಬದಲಾವಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಪೊಲೀಸ್ ಭದ್ರತೆ
ನಗರದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸೋಮವಾರ ಸಂಜೆ ಶಾರದಾ ಕಲ್ಯಾಣ ಮಂಟಪದಿಂದ ಸಿಟಿಬಸ್ ನಿಲ್ದಾಣದವರೆಗೆ ಪೊಲೀಸರಿಂದ ಪಥಸಂಚಲನ ನಡೆಯಿತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ. ಸಿದ್ದಲಿಂಗಪ್ಪ, ಡಿವೈಎಸ್‌ಪಿ ದಿನಕರ ಹಾಗೂ ಎಲ್ಲ ಠಾಣೆಯ ಇನ್‌ಸ್ಪೆಕ್ಟರ್‌ಗಳು, ಎಸ್‌ಐಗಳು ಹಾಗೂ ಸಿಬಂದಿ ಉಪಸ್ಥಿತರಿದ್ದರು.
ಭದ್ರತೆಗಾಗಿ ಉತ್ತರಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಿಂದ 123 ಮಂದಿ ಅಧಿಕಾರಿಗಳು ಹಾಗೂ ಸಿಬಂದಿ ಆಗಮಿಸಿದ್ದಾರೆ. 5 ಕೆಎಸ್‌ಆರ್‌ಪಿ ತುಕಡಿ, 8 ಡಿಆರ್ ಹಾಗೂ ಉಡುಪಿಯ 300 ಸಿಬಂದಿ ಭದ್ರತೆಗೆ ನಿಯೋಜಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.