Advertisement

Udupi ಸ್ಥಳೀಯ ಕುಚ್ಚಲಕ್ಕಿ ಖರೀದಿಗೆ ಇನ್ನೂ ಸಿಕ್ಕಿಲ್ಲ ಅನುಮತಿ

11:08 PM Dec 20, 2023 | Team Udayavani |

ಉಡುಪಿ: ಉಭಯ ಜಿಲ್ಲೆಯಲ್ಲಿ ಸ್ಥಳೀಯವಾಗಿ ಬೆಳೆಯುವ ಎಂಒ4, ಎಂಒ16, ಎಂಒ21, ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ, ಉಮಾ, ಅಭಿಲಾಷ ಭತ್ತದ ತಳಿಗಳ‌ನ್ನು ಕೇಂದ್ರ ಸರಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಅನುಕೂಲವಾಗುವಂತೆ ಭತ್ತ ಖರೀದಿ ಕೇಂದ್ರ ತೆರೆಯಲು ಅನುಮತಿ ಕೋರಿ ಜಿಲ್ಲಾಡಳಿತದಿಂದ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಭಾರತೀಯ ಆಹಾರ ನಿಗಮದಿಂದ ಈವರೆಗೂ ಅನುಮತಿ ಸಿಕ್ಕಿಲ್ಲ. ಮಾಸಾಂತ್ಯದಲ್ಲಿ ಅನುಮತಿ ಸಿಕ್ಕರೂ ಖರೀದಿಗೆ ಭತ್ತವೇ ಇರುವುದಿಲ್ಲ.

Advertisement

2021-22, 2022-23ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸ್ಥಳೀಯ ಭತ್ತ ಖರೀದಿಗೆ ನಿಗಮ ಅನುಮತಿ ನೀಡಿತ್ತು. ಪ್ರಸಕ್ತ ಸಾಲಿನಲ್ಲಿ ನೀಡಿಲ್ಲ. ಸಾಮಾನ್ಯ ಭತ್ತ (ಬೆಳ್ತಿಗೆ) ಖರೀದಿಗೆ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ ಉಭಯ ಜಿಲ್ಲೆಯಲ್ಲಿ ಸೋಮವಾರದ ವರೆಗೂ ಯಾವೊಬ್ಬ ರೈತನೂ ನೋಂದಣಿ ಮಾಡಿಸಿಲ್ಲ!

ಕರಾವಳಿಯಾದ್ಯಂತ ಮುಂಗಾರು ಭತ್ತದ ಕೊçಲು ಮುಗಿದು ತಿಂಗಳು ಕಳೆದಿದ್ದು, ರೈತರು ಭತ್ತವನ್ನು ಖಾಸಗಿ ಮಿಲ್‌ನವರಿಗೆ ಮಾರಾಟ ಮಾಡಿಯೂ ಆಗಿದೆ. ಸರಕಾರವನ್ನು ನಂಬಿ ಕೂತರೆ ಭತ್ತ ನಮ್ಮಲ್ಲಿಯೇ ಉಳಿಯಬಹುದು ಎಂಬ ಭೀತಿ ಅವರದು. ಈ ಬಾರಿ ಮಿಲ್‌ಗ‌ಳಲ್ಲಿ ಭತ್ತದ ಧಾರಣೆ ಪ್ರತೀ ಕ್ವಿಂಟಾಲ್‌ಗೆ 2,700 ರೂ.ಗಳಿಂದ 3,200ರೂ. ವರೆಗೂ ಇದೆ ಎಂದು ಹೇಳಲಾಗುತ್ತಿದೆ.

ಪ್ರತೀ ವರ್ಷದ ಗೋಳು
ಆಹಾರ ಮತ್ತು ನಾಗರಿಕ ಸರಬ ರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಯಿಂದ ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ (ಪಿಡಿಎಸ್‌) ಬಿಪಿಎಲ್‌ ಹಾಗೂ ಎಪಿಎಲ್‌ ಕಾರ್ಡ್‌ದಾರರಿಗೆ ಸ್ಥಳೀಯ ಕುಚ್ಚಲಕ್ಕಿ ವಿತರಿಸಬೇಕು ಎಂಬ ಬೇಡಿಕೆ ಅನೇಕ ವರ್ಷಗಳಿಂದ ಇದೆ. ಕಳೆದ 2 ವರ್ಷ ಅನುಮತಿ ಸಿಗುವಾ ಗಲೇ ವಿಳಂಬವಾಗಿದ್ದರಿಂದ ಸ್ಥಳೀಯ ಕುಚ್ಚಲಕ್ಕಿ ವಿತರಣೆ ಸಾಧ್ಯವಾಗಿಲ್ಲ. ಈ ವರ್ಷ ಇನ್ನೂ ಅನುಮತಿಯೇ ಸಿಗದಿರುವುದರಿಂದ ವಿತರಣೆ ಸಾಧ್ಯವೇ ಇಲ್ಲ. ಕಾರಣ, ಸರಕಾರಕ್ಕೆ ನೀಡಲು ರೈತರ ಬಳಿ ಭತ್ತವೇ ಇಲ್ಲ.

ತೆಲಂಗಾಣದ ಅಕ್ಕಿ
ಸದ್ಯ ಉಭಯ ಜಿಲ್ಲೆಯ ಬಿಪಿಎಲ್‌ ಕಾರ್ಡ್‌ದಾರರಿಗೆ ತೆಲಂಗಾಣದ ಕುಚ್ಚಲಕ್ಕಿ ವಿತರಿಸಲಾಗುತ್ತಿದೆ. ಕುಚ್ಚಲಕ್ಕಿಯ ರೀತಿಯಲ್ಲೇ ಇದ್ದರೂ ಸ್ಥಳೀಯ ತಳಿಯ ಕುಚ್ಚಲಕ್ಕಿಯಷ್ಟು ರುಚಿ ಬರುವುದಿಲ್ಲ ಎಂಬ ಅಭಿಪ್ರಾಯ ಬಳಕೆದಾರರದು. ಬೆಳಗ್ಗಿನ ತಿಂಡಿಗೆ ಬೆಳ್ತಿಗೆ ಬಳಸುವುದರಿಂದ ಬಹುಪಾಲು ಕಾರ್ಡ್‌ದಾರರು ಕುಚ್ಚಲಕ್ಕಿ ಬದಲಿಗೆ ಬೆಳ್ತಿಗೆಯನ್ನೇ ಹೆಚ್ಚಾಗಿ ಪಡೆಯುತ್ತಿದ್ದಾರೆ. ಸದ್ಯ ಒಂದು ತಿಂಗಳು ಕುಚ್ಚಲು ಹಾಗೂ ಇನ್ನೊಂದು ತಿಂಗಳು ಬೆಳ್ತಿಗೆ ಅಕ್ಕಿಯನ್ನು ಪಿಡಿಎಸ್‌ ಮೂಲಕ ವಿತರಿಸಲಾಗುತ್ತಿದೆ.

Advertisement

ಎಪಿಎಲ್‌ಗೆ ಅಕ್ಕಿಯಿಲ್ಲ
ಎಪಿಎಲ್‌ ಕಾರ್ಡ್‌ದಾರರಿಗೆ ಅಕ್ಕಿ ಹಂಚಿಕೆ ಮಾಡುವಂತೆ ಈಗಾಗಲೇ ಜಿಲ್ಲೆಯಿಂದ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕೇಂದ್ರ ಸರಕಾರ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಗೆ ನಿರ್ಬಂಧ ಹೇರಿರುವುದರಿಂದ ಖಾಸಗಿಯಾಗಿ ದುಬಾರಿ ಬೆಲೆತೆತ್ತು ಅಕ್ಕಿ ಖರೀದಿ ಮಾಡಬೇಕಾದ್ದರಿಂದ ಸದ್ಯ ಸರಕಾರದಿಂದ ಎಪಿಎಲ್‌ ಕಾರ್ಡ್‌ದಾರರಿಗೆ ಅಕ್ಕಿ ನೀಡು ತ್ತಿಲ್ಲ. ಜಿಲ್ಲಾ ಹಂತದಲ್ಲಿ ಬಿಪಿಎಲ್‌ ಕಾರ್ಡ್‌ದಾರರಿಗೆ ಹಂಚಿಕೆ ಮಾಡಿ ಉಳಿದಿರುವ ಹಾಗೂ ಮುಟ್ಟು ಗೋಲು ಹಾಕಿಕೊಂಡಿರುವ ಅಕ್ಕಿಯನ್ನು ಮಾತ್ರ ಹಂಚಿಕೆ ಮಾಡುತ್ತಿ ದ್ದಾರೆ. ಎಪಿಎಲ್‌ ಕಾರ್ಡ್‌ದಾರರಿಗೆ ಸರಕಾರದಿಂದ ಅಕ್ಕಿ ಬರುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುಚ್ಚಲಕ್ಕಿ ಖರೀದಿ ಸಂಬಂಧ ನೋಂದಣಿಗೆ ಯಾವುದೇ ಸೂಚನೆ ಈವರೆಗೂ ಬಂದಿಲ್ಲ. ಕೇಂದ್ರ ಸರಕಾರದ ಬೆಂಬಲ ಬೆಲೆಯಡಿ ಸಾಮಾನ್ಯ ಅಕ್ಕಿಯ ಭತ್ತ ಖರೀದಿಗಾಗಿ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ.
-ಅನುರಾಧಾ, ಜಿಲ್ಲಾ ವ್ಯವಸ್ಥಾಪಕಿ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ,
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next