Advertisement

ಜಿಲ್ಲಾ ಸರಕಾರಿ ಆಸ್ಪತ್ರೆ ಅಭಿವೃದ್ಧಿಗಾಗಿ ಜಿಲ್ಲಾಧಿಕಾರಿಗೆ ಮನವಿ

11:25 AM Jul 30, 2018 | Team Udayavani |

ಉಡುಪಿ: ಬಡ ಕೃಷಿಕರು, ಹೊರ ರಾಜ್ಯಗಳಿಂದ ಬಂದ ಕೂಲಿ ಕಾರ್ಮಿಕರು ಉಡುಪಿಯ ಜಿಲ್ಲಾಸ್ಪತ್ರೆಯನ್ನೇ ಆಶ್ರಯಿಸಿರುವುದರಿಂದ ಮೂಲಸೌಕರ್ಯ ವೃದ್ಧಿಸುವ ಜತೆಗೆ ಆಸ್ಪತ್ರೆಯನ್ನು ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ದರ್ಜೆಗೇರಿಸುವ ಅಗತ್ಯ ಇದೆ ಎಂದು ಜಿಲ್ಲಾ ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಧಾರ್ಮಿಕ ಕೇಂದ್ರ, ಬ್ಯಾಂಕಿಂಗ್‌, ಶಿಕ್ಷಣ, ವೈದ್ಯಕೀಯ ಕ್ಷೇತ್ರಗಳಿಗೆ ಹೆಸರಾದ ಉಡುಪಿ 1997ರಲ್ಲಿ ಜಿಲ್ಲಾ ಕೇಂದ್ರವಾಗಿ ಘೋಷಣೆಯಾದರೂ 2016ರಲ್ಲಿ ಇಲ್ಲಿನ ತಾಲೂಕು ಸರಕಾರಿ ಆಸ್ಪತ್ರೆ 250 ಹಾಸಿಗೆಗಳುಳ್ಳ ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿತು. ಆದರೆ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ.

Advertisement

ಶಿಥಿಲ ಕಟ್ಟಡ
ಕಟ್ಟಡ ಹಳೆಯದಾಗಿದ್ದು ಮೇಲ್ಛಾವಣಿಯಿಂದ ನೀರು ಸೋರುತ್ತಿದೆ. ಶಿಥಿಲಾವಸ್ಥೆಯಲ್ಲಿರುವ ಪೀಠೊಪಕರಣ, ಬಾಗಿಲು, ಕಿಟಕಿಗಳು, ಅಸಮರ್ಪಕ ಒಳಚರಂಡಿ ವ್ಯವಸ್ಥೆ ಹಾಗೂ ಇನ್ನಿತರ ಮೂಲಸೌಕರ್ಯಗಳ ಕೊರತೆಯಿಂದ ಆಸ್ಪತ್ರೆ ಬಳಲುತ್ತಿದೆ. ಎಕ್ಸ್‌ರೇ, ಸ್ಕ್ಯಾನಿಂಗ್‌ ಮೊದಲಾದ ಸೌಲಭ್ಯಗಳಿದ್ದರೂ ಅವುಗಳು ರೋಗಿಗಳ ಉಪಯೋಗಕ್ಕೆ ಲಭಿಸುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಹೊರ ಗುತ್ತಿಗೆ ನಿರ್ವಹಣೆ
ಜಿಲ್ಲಾಸ್ಪತ್ರೆಯ ನಿರ್ವಹಣೆಯನ್ನು ಖಾಸಗಿ ಗುತ್ತಿಗೆ ಸಂಸ್ಥೆ ವಹಿಸಿಕೊಂಡಿದೆ. ಆಸ್ಪತ್ರೆಯ ಕಾರ್ಮಿಕರಿಗೆ ಸಕಾಲದಲ್ಲಿ ಮಾಸಿಕ ವೇತನ ಪಾವತಿಯಾಗುತ್ತಿಲ್ಲ. ಇದರ ಪರಿಣಾಮ ರೋಗಿಗಳ ಮೇಲಾಗುತ್ತಿದೆ. ವೈದ್ಯರು, ದಾದಿಯರ ಸೇವೆ ಸಮಯಕ್ಕೆ ಸರಿಯಾಗಿ ಲಭ್ಯವಾಗುತ್ತಿಲ್ಲ ಎಂದು ರೋಗಿಗಳು ಹಾಗೂ ಅವರ ಸಂಬಂಧಿಕರು ಆರೋಪಿಸುತ್ತಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಅನುದಾನದ ಕೊರತೆ
ಇತ್ತೀಚೆಗೆ 1.38 ಕೋ.ರೂ. ವೆಚ್ಚದಲ್ಲಿ ಜಿಲ್ಲಾಸ್ಪತ್ರೆಯ ಅಭಿವೃದ್ಧಿಗೆ ಚಾಲನೆ ನೀಡಲಾಗಿತ್ತು. ಇದರಲ್ಲಿ ಹೊಸ ಶವಾಗಾರ ಕಟ್ಟಡಕ್ಕೆ 85 ಲ.ರೂ., ಕ್ಷಯರೋಗ ಚಿಕಿತ್ಸಾ ಕೇಂದ್ರಕ್ಕೆ 15 ಲ.ರೂ. ಮೀಸಲಿಡಲಾಗಿದೆ. ಆದರೆ ಜಿಲ್ಲಾ ಕೇಂದ್ರದಲ್ಲಿರುವ ಸರಕಾರಿ ಆಸ್ಪತ್ರೆಗೆ ಈ ಅನುದಾನ ಎಷ್ಟರಮಟ್ಟಿಗೆ ಸಾಕಾದೀತು ಎಂಬುದು ಪ್ರಶ್ನೆ. ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯ ಪ್ರವೇಶಿಸಿ ಆಸ್ಪತ್ರೆಯ ಸಮರ್ಪಕ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.ವೇದಿಕೆಯ ಪದಾಧಿಕಾರಿಗಳಾದ ಪ್ರಶಾಂತ್‌ ಭಟ್‌ ಕಡಬ, ಅಜರುದ್ದೀನ್‌, ನಾಗರಾಜ ಶೇಟ್‌, ಸಂತೋಷ್‌ ಶೇಟ್‌, ಗಣೇಶ್‌, ಅಶೋಕ್‌, ಸುಭಾಶಿತ್‌ ನಿಯೋಗದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next