Advertisement
ಶನಿವಾರ ರಾತ್ರಿ ಸುಮಾರು 12 ಗಂಟೆ ವೇಳೆಗೆ ಬಂದರಿನಲ್ಲಿ ನಿಲ್ಲಿಸಲಾಗಿದ್ದ ಬೋಟ್ಗೆ ಮೂವರು ಬಂದು ಬೋಟ್ನ ಕಾರ್ಮಿಕರು ಗಾಢ ನಿದ್ರೆಯಲ್ಲಿರುವುದನ್ನು ಗಮನಿಸಿ ಬೋಟ್ನ ಸ್ಟೋರೇಜ್ನ ಮುಚ್ಚಳ ತೆರೆದು ಅದರೊಳಗೆ ಒಬ್ಬನನ್ನು ಇಳಿಸಿದ್ದರು. ಅಲ್ಲಿಂದ ಕಳವು ಮಾಡುವಾಗ ಬೋಟ್ನ ಕಾರ್ಮಿಕನೋರ್ವನಿಗೆ ಎಚ್ಚರವಾಗಿ ಬೊಬ್ಬೆ ಹಾಕಿದ್ದ. ಬೋಟ್ನ ಮೇಲೆ ಇದ್ದವರಲ್ಲಿ ಇಬ್ಬರು ಓಡಿ ಹೋಗಿದ್ದು, ಒಬ್ಬ ಸ್ಟೋರೇಜ್ನ ಒಳಗೆ ಸಿಕ್ಕಿ ಹಾಕಿಕೊಂಡಿದ್ದ. ಬೋಟ್ನ ಕಾರ್ಮಿಕರು ಆತನನ್ನು ಹಿಡಿದು ವಿಚಾರಿಸಿ ಬೋಟು ಮಾಲಕರಿಗೆ ಒಪ್ಪಿಸಿದ್ದಾರೆ. ಈ ಮೂವರು ಗದಗ ಮೂಲದವರೆನ್ನಲಾಗಿದೆ.
ಕಳೆದ ಎರಡು ವರ್ಷದಿಂದ ಮೀನು ಕಳ್ಳತನ ಮಾಡುವ ಕೃತ್ಯ ಹೆಚ್ಚುತ್ತಿದ್ದು ಕಳೆದ ಎರಡು ತಿಂಗಳಿನಿಂದ ಇದು ನಿತ್ಯ ನಡೆಯುತ್ತಿದೆ. ಇದೀಗ ಕೆಲವೊಂದು ಬೋಟುಗಳಲ್ಲಿ ಸಿಸಿ ಕೆಮರಾ ಅಳವಡಿಸಿದ್ದರಿಂದ ಕಳ್ಳತನ ನಡೆಯುತ್ತಿರುವುದು ಬೆಳಕಿಗೆ ಬರುತ್ತಿದೆ ಎನ್ನಲಾಗುತ್ತದೆ. ಯಾರೀ ಮೀನು ಕಳ್ಳರು ?
ಮೀನುಗಾರಿಕೆ ಮುಗಿಸಿ ಬಂದ ಬೋಟ್ನ ಸ್ಟೋರೇಜ್ ಒಳಗೆ ಇರಿಸಲಾಗಿದ್ದ ಮೀನನ್ನು ಮೇಲೆ ತೆಗೆದು ಹಾಕುವವರಿಗೆ ಕೊಟ್ಟು ಪಾರ್ಟಿ ಎನ್ನುತ್ತಾರೆ. ಕೊಟ್ಟು ಪಾರ್ಟಿಯಲ್ಲಿ ಇರುವವರು ಬಹುತೇಕ ಮಂದಿ ಉತ್ತರ ಕರ್ನಾಟಕದವರಾಗಿದ್ದಾರೆ. ಇವರು ತಡರಾತ್ರಿ 2 ಗಂಟೆಗೆ ಬಂದು ಬೋಟ್ನ ಒಳಗಡೆಯಿದ್ದ ಮೀನಿನ ಬಾಕ್ಸ್ ಮೇಲೆ ತೆಗೆದು ಜೋಡಿಸಿ ಇಡುತ್ತಾರೆ. ಇದೀಗ ಕೊಟ್ಟುವಿಗೆ ಹೆಚ್ಚುವರಿಯಾಗಿ ಬಂದ ಕಾರ್ಮಿಕರು ಈ ಕೃತ್ಯವನ್ನು ಎಸಗುತ್ತಿದ್ದಾರೆ ಎಂದು ಬೋಟು ಕಾರ್ಮಿಕರು, ಮಾಲಕರು ಆರೋಪಿಸಿದ್ದಾರೆ.