Advertisement
ಉಡುಪಿ ಜಿಲ್ಲೆಯಲ್ಲಿ 2,29,508 ಪಡಿತರ ಚೀಟಿದಾರರಿದ್ದು, ಮೊದಲ ಎರಡು ದಿನಗಳಲ್ಲಿಯೇ 26,500 ಕುಟುಂಬಗಳಿಗೆ ಪಡಿತರ ವಿತರಿಸುವ ಮೂಲಕ 10ರಲ್ಲಿ 9 ಅಂಕ ಪಡೆದು ರಾಜ್ಯ ಮಟ್ಟದಲ್ಲಿ ಮೊದಲ ಸ್ಥಾನದಲ್ಲಿದೆ. ಕೊಡಗು ಜಿಲ್ಲೆಯು 10,000 ಕುಟುಂಬಗಳಿಗೆ ಹಾಗೂ ದ.ಕ. ಜಿಲ್ಲೆಯಲ್ಲಿ 4,30,665 ಪಡಿತರ ಚೀಟಿದಾರರಿದ್ದು, 31,600 ಕುಟುಂಬಗಳಿಗೆ ಪಡಿತರ ವಿತರಿಸುವ ಮೂಲಕ ಕ್ರಮವಾಗಿ ಶೇ. 7.6 ಹಾಗೂ 7.28ರಷ್ಟು ಪ್ರಗತಿ ಸಾಧಿಸಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡಿವೆ.
ಉಡುಪಿ ಜಿಲ್ಲೆಗೆ ತಿಂಗಳಿಗೆ 45,000 ಕ್ವಿಂಟಾಲ್ ಅಗತ್ಯವಿದೆ. ಈ ಬಾರಿ ಎರಡು ತಿಂಗಳ ರೇಷನ್ ನೀಡುತ್ತಿರುವುದರಿಂದ 90,000 ಕ್ವಿಂಟಲ್ ಹಾಗೂ ದ.ಕ. ಜಿಲ್ಲೆಯಲ್ಲಿ 99,500 ಕ್ವಿಂಟಲ್ ಅಕ್ಕಿ ಅಗತ್ಯವಿದೆ. ಪ್ರಸ್ತುತ ದ.ಕ. ಜಿಲ್ಲೆಯಿಂದ 10,030 ಕ್ವಿ. ಹಾಗೂ ಉಡುಪಿಯಿಂದ 6,500 ಕ್ವಿ. ಗೋಧಿ ಪ್ರಸ್ತಾವನೆಯನ್ನು ಇಲಾಖೆಗೆ ಕಳುಹಿಸಲಾಗಿದೆ. 1,192 ಪಡಿತರ ವಿತರಣಾ ಕೇಂದ್ರ
ಉಡುಪಿ ಜಿಲ್ಲೆಯಲ್ಲಿ 292 ಹಾಗೂ ದ.ಕ. ಜಿಲ್ಲೆಯಲ್ಲಿ 900 ಪಡಿತರ ವಿತರಣಾ ಕೇಂದ್ರಗಳಿವೆ. ಈ ಹಿಂದೆಲ್ಲ ತಿಂಗಳ ಕೊನೆಯ ವರೆಗೂ ಗ್ರಾಹಕರು ಪಡಿತರ ಒಯ್ಯುತ್ತಿದ್ದರೆ ಈ ಬಾರಿ ಆರಂಭದಲ್ಲೇ ಹೆಚ್ಚಿನವರೂ ಧಾವಿಸಿ ಬಂದಿರುವ ಕಾರಣ ಮೊದಲ ಎರಡು ದಿನಗಳಲ್ಲಿಯೇ ಕೆಲವು ಕೇಂದ್ರಗಳಲ್ಲಿ ಬಹುತೇಕ ದಾಸ್ತಾನು ವಿತರಣೆಯಾಗಿದೆ. ಗೋದಾಮುಗಳಲ್ಲಿ ಸಾಕಷ್ಟು ದಾಸ್ತಾನು ಇದ್ದು ಆವಶ್ಯಕತೆಗನುಗುಣವಾಗಿ ಶೀಘ್ರದಲ್ಲೇ ಪೂರೈಸಲಾಗುವುದು ಎಂದು ಇಲಾಖಾ ಆಧಿಕಾರಿಗಳು ತಿಳಿಸಿದ್ದಾರೆ.
Related Articles
ನಮ್ಮಲ್ಲಿ ಆಹಾರ ಸಾಮಗ್ರಿ ಕೊರತೆ ಇಲ್ಲ. ವಿತರಣೆ ಸಹ ನಿರಂತವಾಗಿರಲಿದೆ. ಎಪ್ರಿಲ್ ತಿಂಗಳ ಕೊನೆಯ ವರೆಗೆ ಆಹಾರ ಸಾಮಗ್ರಿ ವಿತರಣೆ ಮಾಡಲು ಅವಕಾಶವಿದೆ. ಸಾರ್ವಜನಿಕರು ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ.
-ಡಾ| ಮಂಜುನಾಥನ್, ಜಂಟಿ ನಿರ್ದೇಶಕ, ಆಹಾರ ಮತ್ತು ನಾಗರಿಕ ಇಲಾಖೆ, ದ.ಕ. ಮತ್ತು ಉಡುಪಿ ಜಿಲ್ಲೆ
Advertisement
ದ.ಕ. ಜಿಲ್ಲೆಗೆ 20 ಸಾವಿರಕ್ವಿಂಟಾಲ್ ಕುಚ್ಚಲಕ್ಕಿ
ಮಂಗಳೂರು/ಉಡುಪಿ: ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಕಾರ್ಡ್‌ದಾರರಿಗೆ ವಿತರಣೆ ಮಾಡಲು ದಕ್ಷಿಣ ಕನ್ನಡ ಜಿಲ್ಲೆಗೆ 20 ಸಾವಿರ ಕ್ವಿಂಟಾಲ್ ಕುಚ್ಚಲಕ್ಕಿ ಬಿಡುಗಡೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಕುಚ್ಚಲಕ್ಕಿ ನೀಡಬೇಕೆಂದು ವ್ಯಾಪಕ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಸರಕಾರ ಇದಕ್ಕೆ ಒಪ್ಪಿಗೆ ನೀಡಿದೆ. ಮುಂದಿನ ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕುಚ್ಚಲಕ್ಕಿ ಜಿಲ್ಲೆಗೆ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಬಿಳಿ ಕುಚ್ಚಲಕ್ಕಿ ವಿತರಣೆ ಕೆಲವೆಡೆಗಳಲ್ಲಿ ನಡೆಯುತ್ತಿದೆ ಎಂದು ಆಹಾರ ಇಲಾಖೆ ಮೂಲಗಳು ತಿಳಿಸಿವೆ. – ತೃಪ್ತಿ ಕುಮ್ರಗೋಡು