ಉಡುಪಿ: ಅಗ್ನಿಶಾಮಕ ಇಲಾಖೆಯಲ್ಲಿ ವಿಶೇಷ ಸೇವೆ ಸಲ್ಲಿಸಿದ ಉಡುಪಿ ಜಿಲ್ಲೆಯ 6 ಮಂದಿ ಅಧಿಕಾರಿ, ಸಿಬಂದಿಗೆ 2021-22, 2022-23ನೇ ಸಾಲಿನ ಮುಖ್ಯಮಂತ್ರಿಗಳ ಪದಕವನ್ನು ಬೆಂಗಳೂರಿನಲ್ಲಿ ನಡೆದ ಅಗ್ನಿಶಾಮಕ ಸೇವಾ ಸಪ್ತಾಹದಲ್ಲಿ ಗೃಹ ಸಚಿವ ಡಾ| ಜಿ. ಪರಮೇಶ್ವರ್ ಪ್ರದಾನ ಮಾಡಿದರು.
ಉಡುಪಿ ಅಗ್ನಿಶಾಮಕ ಠಾಣೆಯ ಜಿಲ್ಲಾ ಅಧಿಕಾರಿ ವಿನಾಯಕ ಯು. ಕಲ್ಗುಟ್ಕರ್ ಸಿಬಂದಿಗಳಾದ ಅಶೋಕ್ ಕುಮಾರ್ ಎಸ್.ಜಿ., ಸುಧೀರ್ ಉಡುಪಿ ಮತ್ತು ಅಲ್ಬಾಡಿ ಕೃಷ್ಣ ನಾಯ್ಕ, ಕಾರ್ಕಳ ಠಾಣೆಯ ಅಚ್ಯುತ ಕರ್ಕೇರ, ಕುಂದಾಪುರ ಅಗ್ನಿಶಾಮಕ ಠಾಣಾಧಿಕಾರಿ ವಿ. ಸುಂದರ್, ಮಲ್ಪೆ -ಬೈಲಕರೆಯ ಎಸ್. ರಮೇಶ್ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿನಾಯಕ ಯು. ಕಲ್ಗುಟ್ಕರ್ ಉತ್ತರ ಕನ್ನಡದ ಕಾರವಾರದವರು. 2008ರಲ್ಲಿ ಅಗ್ನಿಶಾಮಕ ಇಲಾಖೆಗೆ ಸೇರ್ಪಡೆಗೊಂಡು ಧಾರವಾಡ ಜಿಲ್ಲೆಯ ಕಲ್ಲಘಟಗಿಯಲ್ಲಿ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಉಡುಪಿಯಲ್ಲಿದ್ದಾರೆ.
ಬಾರಕೂರಿನವರಾದ ಅಶೋಕ್ ಕುಮಾರ್ ಎಸ್.ಜಿ. 2005ರಲ್ಲಿ, ಉಡುಪಿಯ ಬಡಾನಿಡಿಯೂರಿನವರಾದ ಸುಧೀರ್ ಉಡುಪಿ 2008ರಲ್ಲಿ, ಮಲ್ಪೆಯ ವಡಭಾಂಡೇಶ್ವರದವರಾದ ಅಚ್ಯುತ ಕರ್ಕೇರ 1997ರಲ್ಲಿ ಇಲಾಖೆಗೆ ಸೇರಿದ್ದಾರೆ. ಉಡುಪಿ ಹಾಗೂ ಮಲ್ಪೆಯಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಪದೋನ್ನತಿ ಹೊಂದಿ ಕಾರ್ಕಳ ಅಗ್ನಿಶಾಮಕ ಠಾಣೆಯಲ್ಲಿದ್ದಾರೆ.
ಸುಂದರ್ ಕುಂದಾಪುರ, ಪುತ್ತೂರು, ಬಂಟ್ವಾಳ, ಸಾಗರ ಮೊದಲಾದೆಡೆ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಪ್ರಸ್ತುತ ಕುಂದಾಪುರದ ಅಗ್ನಿ ಶಾಮಕ ದಳ ಠಾಣಾಧಿಕಾರಿಯಾಗಿದ್ದಾರೆ.ಎಸ್. ರಮೇಶ್ ಮಲ್ಪೆ -ಬೈಲಕರೆ ಅವರು ಭಟ್ಕಳದ ಅಗ್ನಿಶಾಮಕ ಠಾಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿದ್ದಾರೆ.ಕೃಷ್ಣ ನಾಯ್ಕ ಈ ಹಿಂದೆ ಕುಂದಾಪುರದಲ್ಲಿ ಸೇವೆ ಸಲ್ಲಿಸಿ, ಈಗ ಉಡುಪಿಯ ಅಗ್ನಿ ಶಾಮಕ ಠಾಣೆಯಲ್ಲಿದ್ದಾರೆ.